ಬೆಂಗಳೂರು: ಪೆಟ್ರೋಲ್, ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಹೆಚ್ಚಳ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಇದರಿಂದಾಗಿ ಮುಂಬರುವ ದಿನಗಳಲ್ಲಿ ತೈಲ ದರ ಮತ್ತಷ್ಟು ದುಬಾರಿಯಾಗಲಿದೆ.
ಸೌದಿ ಅರೇಬಿಯಾದ ತೈಲಾಗಾರಗಳ ಮೇಲೆ ಇತ್ತೀಚೆಗೆ ನಡೆದ ದ್ರೋಣ್ ದಾಳಿಯ ಪರಿಣಾಮವಾಗಿ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ದಿನೇ ದಿನೇ ಗಗನಕ್ಕೇರುತ್ತಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಸುಧಾರಣೆ ಕಂಡು ಬಂದ ಬಳಿಕ ಅಬಕಾರಿ ಸುಂಕ ಹೆಚ್ಚಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ವರದಿಯಾಗಿದೆ.
ಈ ಮೂಲಕ ಪ್ರತಿ ಲೀಟರ್ ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ತಲಾ ಎರಡು ರೂ. ಅಬಕಾರಿ ಸುಂಕ ವಿಧಿಸಲು ಗಂಭೀರ ಚಿಂತನೆ ನಡೆದಿದೆ ಎನ್ನಲಾಗಿದೆ.
ಸರ್ಕಾರದ ತೆರಿಗೆ ಹಾಗೂ ತೆರಿಗೆಯೇತರ ವರಮಾನವು ಸಂಗ್ರಹವು ಕಡಿಮೆಯಾಗಿದೆ. ಈ ಕೊರತೆಯನ್ನು ನೀಗಿಸಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ತೈಲ ಉತ್ಪನ್ನಗಳ ಮೇಲೆ ಸುಂಕ ಹೆಚ್ಚಿಸಲು ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ.
ದೇಶದ ಹಲವು ನಗರಗಳಲ್ಲಿ ಈಗಾಗಲೇ ಪ್ರತಿ ಲೀಟರ್ ಪೆಟ್ರೋಲ್ ಬೆಲೆ ಲೀಟರ್ ಗೆ 75 ರೂ. ದಾಟಿದೆ. ಡೀಸೆಲ್ ಸಹ 70 ರ ಗಡಿ ಮುಟ್ಟಿದೆ.