ನವದೆಹಲಿ: ಎಲ್ಲ ಹಾಟ್‌ಸ್ಪಾಟ್‌ಗಳಲ್ಲಿ ಪತ್ತೆಯಾಗುವ ಕೊರೊನಾ ಸೋಂಕಿತರ ಮಾದರಿಗಳನ್ನು ವಿಶೇಷ ಲ್ಯಾಬ್‌ಗಳಿಗೆ ಕಳುಹಿಸುವಂತೆ ರಾಜ್ಯಗಳಿಗೆ ಕೇಂದ್ರ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಓಮಿಕ್ರಾನ್ ಸೇರಿದಂತೆ ಭಾರತದಲ್ಲಿ ಕೊರೊನಾ ಹೊಸ ರೂಪಾಂತರಿಗಳನ್ನು ಆರಂಭಿಕವಾಗಿ ಪತ್ತೆ ಹಚ್ಚುವ ಸಲುವಾಗಿ ಈ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ.
ಓಮಿಕ್ರಾನ್ ಸೋಂಕು ಭಾರತದಲ್ಲಿ ಕಂಡುಬರುವ ಸಾಧ್ಯತೆಗಳು ಇರುವ ಹಿನ್ನೆಲೆಯಲ್ಲಿ ನಿನ್ನೆ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗಿತ್ತು. ಸಭೆಯಲ್ಲಿ ಎಲ್ಲ ರಾಜ್ಯಗಳ ಆರೋಗ್ಯ ಕಾರ್ಯದರ್ಶಿಗಳು ಭಾಗಿಯಾಗಿದ್ದರು. ಇತ್ತೀಚೆಗೆ ಏಕಾಏಕಿ ದೊಡ್ಡ ಪ್ರಮಾಣದಲ್ಲಿ ಕಂಡುಬರುತ್ತಿರುವ ಸೋಂಕಿತರ ಬಗ್ಗೆ ಚರ್ಚೆ ನಡೆಸಲಾಯಿತು. ಇದನ್ನೂ ಓದಿ: ದಕ್ಷಿಣ ಆಫ್ರಿಕಾ ಸೇರಿದಂತೆ ಇತರೆ ದೇಶಗಳಿಂದ ಬಂದ 6 ಮಂದಿಗೆ ಕೊರೊನಾ
ಈ ವೇಳೆ ದೇಶದ ಎಲ್ಲ ಹಾಟ್‌ಸ್ಪಾಟ್‌ಗಳಲ್ಲಿ ಪತ್ತೆಯಾಗುತ್ತಿರುವ ಕೊವೀಡ್ ರೋಗಿಗಳ ಸ್ಯಾಂಪಲ್‌ಗಳನ್ನು ಸರ್ಕಾರ ಗೊತ್ತುಪಡಿಸಿದ INSACOG ಲ್ಯಾಬ್‌ಗಳಿಗೆ “ಪ್ರಾಂಪ್ಟ್ ರೀತಿಯಲ್ಲಿ” ಕಳುಹಿಸಲು ರಾಜ್ಯಗಳಿಗೆ ಸೂಚನೆ ನೀಡಲಾಗಿದೆ. ಆರಂಭಿಕವಾಗಿ ಧಾರವಾಡ ಮತ್ತು ಥಾಣೆಯಿಂದ ಸ್ಯಾಂಪಲ್ ಕಳುಹಿಸಲು ತಿಳಿಸಲಾಗಿದೆ. ಧಾರವಾಡದ ವೈದ್ಯಕೀಯ ಕಾಲೇಜು ಮತ್ತು ಥಾಣೆಯ ಭಿವಂಡಿಯಲ್ಲಿರುವ ವೃದ್ಧಾಶ್ರಮದಲ್ಲಿ ದೊಡ್ಡ ಪ್ರಮಾಣದಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಓಮಿಕ್ರಾನ್ ಸೇರಿದಂತೆ ಇತರೆ ರೂಪಾಂತರಗೊಂಡ ತಳಿಗಳ ಬಗ್ಗೆ ಅಧ್ಯಯನ ನಡೆಸಲು ಆರೋಗ್ಯ ಇಲಾಖೆ ಸ್ಯಾಂಪಲ್ ಕಳುಹಿಸಲು ಸೂಚನೆ ನೀಡಿದೆ. ಇದನ್ನೂ ಓದಿ: ಕೋವಿಡ್ ವಾರಿಯರ್ಸ್‌ಗೆ ಬೂಸ್ಟರ್ ಡೋಸ್ ನೀಡುವ ಬಗ್ಗೆ ಕೇಂದ್ರ ಸಚಿವರೊಂದಿಗೆ ಚರ್ಚೆ: ಸಿಎಂ
ಇದೇ ವೇಳೆ ಅಪಾಯ ಇರುವ ದೇಶಗಳಿಂದ ಆಗಮಿಸುತ್ತಿರುವ ಪ್ರಯಾಣಿಕರ ಮೇಲೆ ನಿಗಾವಹಿಸಲು ರಾಜ್ಯಗಳಿಗೆ ಸೂಚಿಸಿದೆ. ಪ್ರಯಾಣಿಕರಲ್ಲಿ ನೆಗೆಟಿವ್ ವರದಿ ಬಂದರೂ ಅವರನ್ನು ಕ್ವಾರಂಟೈನ್‌ನಲ್ಲಿರಿಸಬೇಕು. ಏಳು ದಿನಗಳ ಬಳಿಕ ಮತ್ತೊಮ್ಮೆ ಪರೀಕ್ಷೆ ನಡೆಸಬೇಕು. ಎರಡನೇ ವರದಿಯೂ ಋಣಾತ್ಮಕವಿದ್ದಲ್ಲಿ ಒಂದು ವಾರದ ಅವರ ಆರೋಗ್ಯದ ಮೇಲೆ ನಿಗಾ ವಹಿಸಬೇಕು ಎಂದು ತಿಳಿಸಿದೆ.