LatestMain PostNational

ಕೇಂದ್ರದಿಂದ ಕರ್ನಾಟಕಕ್ಕೆ ಒಟ್ಟು 1782.44 ಕೋಟಿ ರೂ. ಬರ ಅನುದಾನ ಬಿಡುಗಡೆ

ನವದೆಹಲಿ: ಬರದಿಂದ ತತ್ತರಿಸಿರುವ ಕರ್ನಾಟಕ ಹಾಗೂ ತಮಿಳುನಾಡಿಗೆ ಕೇಂದ್ರ ಸರ್ಕಾರ ಬರ ಪರಿಹಾರ ಹಣವನ್ನು ಬಿಡುಗಡೆ ಮಾಡಿದೆ. ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಒಟ್ಟು 1782.44 ಕೋಟಿ ರೂ. ಹಣ ಬರ ಪರಿಹಾರ ಹಣ ಮಂಜೂರು ಮಾಡಿದೆ. ಹಾಗೆ ತಮಿಳುನಾಡಿಗೆ 1793.63 ರೂ. ಬರ ಪರಿಹಾರ ಹಣ ಮಂಜೂರು ಮಾಡಲಾಗಿದೆ.

ಈ ಮಂಜೂರಾತಿಯ ಆಧಾರದ ಮೇಲೆ ಕರ್ನಾಟಕಕ್ಕೆ ಈ ಹಿಂದೆ ಕೇಂದ್ರ ಸರ್ಕಾರದಿಂದ ಬಿಡುಗಡೆ ಮಾಡಲಾಗಿದ್ದ 450 ಕೋಟಿ ರೂ. ಹಾಗೂ ರಾಜ್ಯ ವಿಪತ್ತು ನಿರ್ವಹಣಾ ನಿಧಿ(ಎಸ್‍ಡಿಆರ್‍ಎಫ್)ನಲ್ಲಿ ಕರ್ನಾಟಕದೊಂದಿಗೆ ಬಾಕಿ ಉಳಿದಿದ್ದ 96.92 ಕೋಟಿ ರೂ. ಹೊಂದಿಸಿ ಒಟ್ಟು 1235.52 ಕೋಟಿ ರೂ. ಬಿಡುಗಡೆಯಾಗಿದೆ.

ಅದೇ ರೀತಿ ತಮಿಳುನಾಡಿಗೆ ಎಸ್‍ಡಿಆರ್‍ಎಫ್‍ನಲ್ಲಿ ಬಾಕಿ ಉಳಿದಿದ್ದ 345.64 ಕೋಟಿ ರೂ. ಹೊಂದಿಸಿ ಒಟ್ಟು 1447.99 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಇದರ ಜೊತೆಗೆ ತಮಿಳುನಾಡಿಗೆ 2016 ರ ಡಿಸೆಂಬರ್‍ನಲ್ಲಿ ಉಂಟಾದ ವಾರ್ಧಾ ಚಂಡಮಾರುತಕ್ಕಾಗಿ 264.11 ಕೋಟಿ ರೂ. ಹಣವನ್ನು ಕೇಂದ್ರ ಸರ್ಕಾರ ಬಿಡುಗಡೆಗೊಳಿಸಿದೆ.

ಬರ ಪರಿಸ್ಥಿತಿಯ ಬಗ್ಗೆ ರಾಜ್ಯಗಳಿಂದ ವಿವರ ಪಡೆದ ಮೇಲೆ ಕೇಂದ್ರ ತಂಡವನ್ನು ಬರಪೀಡಿತ ಪ್ರದೇಶಗಳ ಪರಿಶೀಲನೆಗೆ ಕಳಿಸಲಾಗಿತ್ತು. ಈ ತಂಡ ಸಲ್ಲಿಸಿದ ವರದಿಯ ಆಧಾರದ ಮೇಲೆ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ ಪರಿಹಾರ ಹಣವನ್ನ ಬಿಡುಗಡೆ ಮಾಡಲಾಗಿದೆ.

ಇದಲ್ಲದೆ ಕೇಂದ್ರ ತೆರಿಗೆ ವಿಕೇಂದ್ರೀಕರಣ ಸೂತ್ರದ ಅನ್ವಯ 2016-17ನೇ ಸಾಲಿಗೆ ಎಲ್ಲಾ ರಾಜ್ಯಗಳಿಗೆ 6.08 ಲಕ್ಷ ಕೋಟಿ ರೂ. ಬಿಡುಗಡೆ ಮಾಡಿದೆ. ಇದರಲ್ಲಿ ಕರ್ನಾಟಕಕ್ಕೆ 2,8750 ರೂ. ಬಂದಿದ್ದರೆ ತಮಿಳುನಾಡಿಗೆ 24,538 ಕೋಟಿ ರೂ. ಸಿಕ್ಕಿದೆ.

ರೈತರ ನೆರವಿಗಾಗಿ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ, 2016-17ನೇ ಸಾಲಿಗೆ 13,240 ಕೋಟಿ ರೂ. ನೀಡಲಾಗಿದೆ. ಮನರೇಗಾ ಯೋಜನೆಗೆ 47,499 ಕೋಟಿ ರೂ ಸೇರಿದಂತೆ ಕೇಂದ್ರ ಪ್ರಾಯೋಜಿತ ಯೋಜನೆಗಳ ಅಡಿ ಒಟ್ಟು 2,45,435 ಕೋಟಿ ರೂ. ನೀಡಲಾಗಿದೆ.

ಬರ ಪರಿಹಾರವಾಗಿ ರಾಜ್ಯಕ್ಕೆ ಕೇಂದ್ರ ಸರ್ಕಾರ ಆರಂಭದಲ್ಲಿ 1782 ಕೋಟಿ ರೂ. ಅನುದಾನ ನೀಡಲು ಒಪ್ಪಿಗೆ ನೀಡಿದ್ದು, ಅದರಲ್ಲಿ 450 ಕೋಟಿ ರೂ. ಹಣವನ್ನು ಬಿಡುಗಡೆ ಮಾಡಿತ್ತು. ಉಳಿದ ಹಣವನ್ನು ಬಿಡುಗಡೆ ಮಾಡಿರಲಿಲ್ಲ. ಆರಂಭದಲ್ಲಿ ಬಿಡುಗಡೆಯಾದ 450 ಕೋಟಿ ರೂ. ಖರ್ಚು ಮಾಡಿದ ಬಳಿಕ ಉಳಿದ ಹಣವನ್ನು ಬಿಡುಗಡೆ ಮಾಡಲಾಗುವುದು ಎಂದು ಕೇಂದ್ರ ಹೇಳಿದ್ದರೆ ರಾಜ್ಯ ಸರ್ಕಾರ ಒಂದೇ ಬಾರಿಗೆ ಈ ಹಣವನ್ನು ಬಿಡುಗಡೆ ಮಾಡಿ ಎಂದು ತನ್ನ ವಾದವನ್ನು ಮಂಡಿಸುತಿತ್ತು. ಎರಡೂ ಸರ್ಕಾರದ ಕಚ್ಚಾಟದಿಂದ ರೈತರಿಗೆ ಸಮಸ್ಯೆಯಾಗುತಿತ್ತು. ಈಗ ಕೇಂದ್ರ ಸರ್ಕಾರ ತನ್ನ ಪಾಲಿನ ಎಲ್ಲ ಹಣವನ್ನು ಬಿಡುಗಡೆ ಮಾಡಿದೆ.

ಶುಕ್ರವಾರ ಮೋದಿ ಕರೆದಿದ್ದ ದಕ್ಷಿಣ ಭಾರತದ ಸಂಸದರ ಸಭೆಯಲ್ಲಿ ರಾಜ್ಯದ ಬಿಜೆಪಿ ನಾಯಕರು ಕರ್ನಾಟಕಕ್ಕೆ ಬರಬೇಕಾಗಿದ್ದ ಅನುದಾನದ ವಿಚಾರವನ್ನು ಪ್ರಸ್ತಾಪ ಮಾಡದೇ ಇರುವ ವಿಚಾರದ ಸುದ್ದಿ ಪಬ್ಲಿಕ್ ಟಿವಿ ವೆಬ್‍ಸೈಟ್‍ನಲ್ಲಿ ಪ್ರಕಟಗೊಂಡಿತ್ತು.

ಇದನ್ನೂ ಓದಿ: ಪ್ರಧಾನಿ ಮೋದಿ ಸಭೆಯಲ್ಲಿ ರಾಜ್ಯದ ಹಿತವನ್ನು ಮರೆತ ಬಿಜೆಪಿ ಸಂಸದರು

 

Leave a Reply

Your email address will not be published. Required fields are marked *

Back to top button