Connect with us

Latest

ಮೇಕೆದಾಟು ಯೋಜನೆಗೆ ಕೇಂದ್ರದಿಂದ ಸಕಾರಾತ್ಮಕ ಸ್ಪಂದನೆ: ಸಿಎಂ ಎಚ್‍ಡಿಕೆ

Published

on

ನವದೆಹಲಿ: ಮೇಕೆದಾಟು ಯೋಜನೆ ಬಗ್ಗೆ ಕೇಂದ್ರ ಜಲಸಂಪನ್ಮೂಲ ಹಾಗೂ ಸಾರಿಗೆ ಸಚಿವ ನಿತಿನ್ ಗಡ್ಕರಿಯವರು ಸಕಾರಾತ್ಮಕ ಸ್ಪಂದನೆ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಗಡ್ಕರಿ ಭೇಟಿ ಬಳಿಕ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಮೇಕೆದಾಟು ಯೋಜನೆಗೆ ಜಲಸಂಪನ್ಮೂಲ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಅಲ್ಲದೇ ಕೇಂದ್ರ ಜಲ ಸಂಪನ್ಮೂಲ ಇಲಾಖೆಯ ಅಧಿಕಾರಿಗಳಿಗೆ ಈ ಬಗ್ಗೆ ಸೂಚನೆ ನೀಡಿದ್ದಾರೆ. ಈ ಬಾರಿ 200 ಟಿಎಂಸಿ ನೀರು ಸಮುದ್ರಕ್ಕೆ ವ್ಯರ್ಥವಾಗಿ ಹರಿದಿದೆ. ಈ ನೀರನ್ನು ಸಂಗ್ರಹಿಸಿಟ್ಟುಕೊಂಡರೆ, ಬರಗಾಲದ ಸಂದರ್ಭದಲ್ಲಿ ಬಳಕೆಗೆ ಅನುಕೂಲವಾಗಿರುತ್ತದೆ. ವಾಸ್ತವಾಂಶಗಳ ಕುರಿತು ಸಚಿವರ ಗಮನಕ್ಕೆ ತಂದಿದ್ದು, ಅವರೂ ಸಹ ಸಹಮತ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.

ಮೇಕೆದಾಟು ಯೋಜನೆಗೆ ಕಾನೂನಾತ್ಮಕ ಒಪ್ಪಿಗೆ ಪಡೆಯುವ ವಿಶ್ವಾಸ ಇದೆ. ನಮ್ಮ ಅಧಿಕಾರಿಗಳ ಜೊತೆ ಮಾತನಾಡಿ ಬಾಕಿ ಇರುವ ಕೆಲಸವನ್ನು ನೋಡಿಕೊಳ್ಳುತ್ತೇವೆ. ನಾವು ಅರಣ್ಯ ಮತ್ತು ಪರಿಸರ ಇಲಾಖೆಯ ಪರವಾನಿಗೆಯನ್ನೂ ಸಹ ಪಡೆಯಬೇಕಿದೆ. ಇದಲ್ಲದೇ ಮಹದಾಯಿ ತೀರ್ಪಿನಲ್ಲಿ ನೀಡಿರುವ ನೀರಿನ ಬಳಕೆಗೆ ರಾಜ್ಯಕ್ಕೆ ಅವಕಾಶ ಕೊಡಬೇಕಾಗಿದೆ. ಹೀಗಾಗಿ ಕೇಂದ್ರ ಸರ್ಕಾರ ಅವಕಾಶ ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದೇನೆ. ಗೋವಾ ಸರ್ಕಾರ ಮಹಾದಾಯಿ ತೀರ್ಪಿನ ಬಗ್ಗೆ ಸ್ಪಷ್ಟಿಕರಣ ಅರ್ಜಿ ಸಲ್ಲಿಸಿದೆ. ಗೋವಾಕ್ಕೆ ಸ್ಪಷ್ಟೀಕರಣ ಸಿಕ್ಕ ನಂತರ ನೀರಿನ ಬಳಕೆಗೆ ಅನುಮತಿ ಕೊಡುವುದಾಗಿ ಹೇಳಿದ್ದಾರೆ. ಅದನ್ನು ಹೊರತುಪಡಿಸಿ ಹೆಚ್ಚುವರಿ ನೀರನ್ನು ಬಳಕೆ ಮಾಡಲು ಅನುಮತಿ ನೀಡುವ ಬಗ್ಗೆ ಕೇಳಿಕೊಂಡಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಮೇಕೆದಾಟಿಗೂ ತಮಿಳುನಾಡು ಕ್ಯಾತೆ ಯಾಕೆ? ಯೋಜನೆಯಿಂದ ರಾಜ್ಯಕ್ಕಾಗುವ ಲಾಭ ಏನು?

ರಾಜ್ಯ ಅತಿವೃಷ್ಟಿ ಮತ್ತು ಅನಾವೃಷ್ಟಿಯ ಸಮಸ್ಯೆ ಎದುರಿಸುತ್ತಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿಯವರ ಭೇಟಿಗೆ ಅವಕಾಶ ಕೇಳಲಾಗಿತ್ತು. ಆದರೆ ಪ್ರಧಾನಿ ಬೇರೆ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಗೃಹ ಸಚಿವ ರಾಜನಾಥ್ ಸಿಂಗ್‍ರವರನ್ನು ಭೇಟಿ ಮಾಡಿ ಮನವಿ ಮಾಡಿದ್ದೇವೆ. ರಾಜ್ಯಕ್ಕೆ ಬರಬೇಕಾದ ಪರಿಹಾರದ ಬಗ್ಗೆ ಚರ್ಚಿಸಿದ್ದೇನೆ. ವಿಶೇಷವಾಗಿ ಕಾಫಿ ಬೆಳಗಾರರ ಸಂಕಷ್ಟಕ್ಕೆ ಹೆಚ್ಚಿನ ನೆರವು ನೀಡಲು ಮನವಿ ಮಾಡಿಕೊಂಡಿದ್ದೇವೆ. ಕೇಂದ್ರ ಸಚಿವರು ನಮ್ಮ ಬೇಡಿಕೆಗೆ ಸ್ಪಂದಿಸಿದ್ದಾರೆ. ಅಲ್ಲದೇ ಸಹಕಾರ ನೀಡುವ ಭರವಸೆಯನ್ನು ನೀಡಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರು ಈ ನಿಯೋಗದಲ್ಲಿ ಭಾಗವಹಿಸಿದ್ದು ನಮಗೆ ಸಹಾಯವಾಗಿದೆ ಎಂದು ಹೇಳಿದ್ರು.

ಸಾಲಮನ್ನಾ ಯೋಜನೆಗೆ ಮಾಹಿತಿ ಒದಗಿಸಲು ಕಾಲ ನಿಗದಿ ಮಾಡಿಲ್ಲ. ಈಗ ಕೇವಲ ಅರ್ಜಿಗಳನ್ನು ಮಾತ್ರ ಕೊಡಲಾಗುತ್ತಿದೆ. ಇದರ ಬಗ್ಗೆ ಯಾರು ಆತಂಕ ಪಡುವ ಅವಶ್ಯಕತೆ ಇಲ್ಲ. ಕಾಲಹರಣ ಮಾಡದೇ ಮಾಹಿತಿಯನ್ನು ನಾಡ ಕಚೇರಿಗೆ ನೀಡಬಹುದು. ಆರಾಮಾಗಿ ಸರಿಯಾದ ಮಾಹಿತಿಯನ್ನು ನೀಡಬೇಕು. ಏಕೆಂದರೆ ರೈತರ ಖಾತೆಗಳಿಗೆ ನೇರವಾಗಿ ಸೌಲಭ್ಯ ಲಭ್ಯವಾಗಬೇಕು. ಇದರಲ್ಲಿ ಯಾವುದೇ ದಲ್ಲಾಳಿಗಳಿಗೆ ಲಾಭ ಆಗಬಾರದು ಎನ್ನುವ ಉದ್ದೇಶ ನಮ್ಮದು. ಯಾವುದೇ ಕಾಲಮಿತಿಯನ್ನು ಹಾಕಿಲ್ಲ. ಹೀಗಾಗಿ ಯಾವುದೇ ಸುಳ್ಳು ಸುದ್ದಿಗೆ ಕಿವಿಕೊಡಬೇಡಿ ಎಂದು ರೈತರಲ್ಲಿ ಮನವಿ ಮಾಡಿಕೊಂಡರು.

ಇದಲ್ಲದೇ ಈಗಾಗಲೇ ಋಣಮುಕ್ತ ಕಾಯ್ದೆ ವಿಚಾರ ಗೃಹ ಸಚಿವರೊಂದಿಗೆ ಚರ್ಚೆ ನಡೆಸಿದ್ದೇನೆ. ಈ ಬಗ್ಗೆ ಕಾನೂನು ಇಲಾಖೆ ಸ್ಪಷ್ಟನೆ ಕೇಳಿತ್ತು. ಅದನ್ನು ಈಗ ನೀಡಲಾಗಿದೆ. ಈ ಹಿಂದೆ ರಾಷ್ಟ್ರಪತಿಗಳ ಜೊತೆ ಚರ್ಚೆ ಮಾಡಿದೆ. ಇದರಿಂದಾಗಿ ರೈತರು ಖಾಸಗಿ ಸಾಲ ಪಡೆದು ಆತ್ಮಹತ್ಯೆ ಮಾಡಿಕೊಳ್ಳುವುದು ನಿಲ್ಲುತ್ತದೆ. ಸರ್ಕಾರ ದೊಡ್ಡ ಪ್ರಮಾಣದ ಯೋಜನೆಗಳನ್ನು ಜಾರಿಗೆ ತಂದಿದೆ. ಹೀಗಾಗಿ ಯಾವುದೇ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಕುಟುಂಬಗಳನ್ನು ಬೀದಿಪಾಲು ಮಾಡಬೇಡಿ ಎಂದು ವಿನಂತಿಸಿಕೊಂಡರು.

ಸಚಿವ ಸಂಪುಟ ವಿಸ್ತರಣೆ ಮಾಡಬೇಕಾಗಿದೆ. ಇದಕ್ಕೆ ಕಾಂಗ್ರೆಸ್ಸಿನಿಂದ ತೀರ್ಮಾನ ಬರಬೇಕಾಗಿದೆ. ಈಗಾಗಲೇ ಕಾಂಗ್ರೆಸ್ ಹೈಕಮಾಂಡ್ ಭೇಟಿಗೆ ಸಮಯ ಕೇಳಿದ್ದೇನೆ. ಭೇಟಿಗೆ ಅವಕಾಶ ಸಿಕ್ಕರೆ ಇದರ ಬಗ್ಗೆ ಚರ್ಚೆ ಮಾಡುತ್ತೇನೆ. ಇದೇ ವೇಳೆ ಜೆಡಿಎಸ್ ಉಪಮೇಯರ್ ರಮೀಳಾ ಶಂಕರ್ ನಿಧನದ ಸುದ್ದಿ ಬಗ್ಗೆ ಮಾತನಾಡಿ, ಉಪ ಮೇಯರ್ ರಮೀಳಾರ ನಿಧನ ನೋವು ತಂದಿದೆ. ಗುರುವಾರ ನಮ್ಮೊಂದಿಗೆ ಒಟ್ಟಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಆದರೆ ಇಂದು ಅವರು ನಮ್ಮ ಜೊತೆಯಲ್ಲಿ ಅವರ ನಿಧನ ಸುದ್ದಿ ಕೇಳುತ್ತಲೇ ಆಘಾತವಾಗಿದೆ. ಅವರ ಆತ್ಮಕ್ಕೆ ಶಾಂತಿ ಕೋರುತ್ತೇನೆ. ಅಲ್ಲದೇ ಪಾಲಿಕೆ ಆಯುಕ್ತರ ಮನವಿ ಮೇರೆಗೆ ಸರ್ಕಾರಿ ಗೌರವ ನೀಡಲು ಸೂಚಿಸಿದ್ದೇನೆ ಎಂದು ವಿಷಾದ ವ್ಯಕ್ತಪಡಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Click to comment

Leave a Reply

Your email address will not be published. Required fields are marked *