ಬೆಂಗಳೂರು: ನೆರೆಹಾನಿ ಕುರಿತು ಪರಿಷ್ಕರಣೆ ಮಾಡಿದ ಅಂದಾಜು ಮೊತ್ತವನ್ನು ರಾಜ್ಯ ಸರ್ಕಾರ ಕೇಂದ್ರಕ್ಕೆ ಸಲ್ಲಿಸಿದ್ದು, ಪರಿಷ್ಕೃತ ವರದಿಯಲ್ಲಿ 3 ಸಾವಿರ ಕೋಟಿ ರೂ.ಗಳನ್ನು ಕಡಿತಗೊಳಿಸಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ರಾಜ್ಯ ಸರ್ಕಾರದ ಸಲ್ಲಿಸಿದ ನಷ್ಟದ ಅಂದಾಜಿಗೆ ಕೇಂದ್ರ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿತ್ತು. ರಾಜ್ಯದ ವರದಿಗೂ, ಕೇಂದ್ರ ಅಧ್ಯಯನ ತಂಡದ ವರದಿಗೂ ತಾಳೆಯಾಗುತ್ತಿಲ್ಲ ಎಂದು ಪರಿಷ್ಕರಣೆಗೆ ಸೂಚಿಸಿತ್ತು. ಮೊದಲು ಸಲ್ಲಿಸಿದ್ದ ನಷ್ಟದ ಅಂದಾಜು ವರದಿಗೂ ಈಗ ಸಲ್ಲಿಸಿರುವ ನಷ್ಟದ ವರದಿ 3 ಸಾವಿರ ಕೋಟಿ ರೂ. ಕಡಿಮೆಯಾಗಿದೆ. ರಾಜ್ಯ ಸರ್ಕಾರ ಮೊದಲು 38,451 ಕೋಟಿ ರೂ. ಅಂದಾಜು ನಷ್ಟವಾಗಿದೆ ಎಂದು ವರದಿ ಸಲ್ಲಿಸಿತ್ತು. ಇದರನ್ವಯ ಎನ್‍ಡಿಆರ್ ಎಫ್‍ನಿಂದ 3,818 ಕೋಟಿ ಪರಿಹಾರಕ್ಕೆ ಮನವಿ ಮಾಡಲಾಗಿತ್ತು.
ಒಟ್ಟು 2,47,628 ಮನೆಗಳು ಹಾನಿಯಾಗಿವೆ ಈ ಕಟ್ಟಡಗಳಲ್ಲಿ ಖಾಸಗಿ, ಸಂಘ ಸಂಸ್ಥೆಗಳ ಹಾನಿ ಪಟ್ಟಿಯೂ ಸೇರಿತ್ತು. 2,193 ಸೇತುವೆಗಳು, 10,988 ಸರ್ಕಾರಿ ಕಟ್ಟಡಗಳು ಹಾನಿಯಾಗಿವೆ ಎಂದು ರಾಜ್ಯ ಸರ್ಕಾರ ವರದಿ ಸಲ್ಲಿಸಿತ್ತು.
ರಾಜ್ಯ ವರದಿಗೆ ಕೇಂದ್ರ ಸರ್ಕಾರದ ಆಕ್ಷೇಪ ವ್ಯಕ್ತಪಡಿಸಿ, ಒಟ್ಟು ನಷ್ಟದ ಅಂದಾಜು ಲೆಕ್ಕದಲ್ಲಿ ತಪ್ಪಿರುವ ಬಗ್ಗೆ ಅನುಮಾನವಿದೆ. ಸಣ್ಣಪುಟ್ಟ ಮನೆ ಹಾನಿಗಳನ್ನು ಸಂಪೂರ್ಣ ಹಾನಿಗೆ ಸೇರಿಸಿದ್ದೀರಿ. ಆ ಮನೆಗಳ ಹಾನಿ ಸಂಖ್ಯೆ ಲಕ್ಷಕ್ಕಿಂತ ಕಡಿಮೆ ಆಗುತ್ತದೆಯೇ ಎನ್ನುವುದನ್ನು ಪರಿಷ್ಕರಿಸಿ. ಅಲ್ಲದೆ ಖಾಸಗಿ ಸಂಘ ಸಂಸ್ಥೆ ಕಟ್ಟಡಗಳನ್ನು ಸೇರಿಸಿದ್ದು ಸರಿ ಇಲ್ಲ. ಫಲವತ್ತಾದ ಜಮೀನು, ಬೆಳೆ ನಾಶದ ವಿಂಗಡಣೆಯೂ ಸರಿ ಇಲ್ಲ ಎಂದು ಕೇಂದ್ರ ಸರ್ಕಾರ ಪರಿಹಾರ ಮೊತ್ತದ ವರದಿಯನ್ನು ಪರಿಷ್ಕರಿಸುವಂತೆ ಸೂಚಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಕೇಂದ್ರ ಸರ್ಕಾರ ಸೂಚನೆ ಮೇರೆ ರಾಜ್ಯ ಸರ್ಕಾರ ನಷ್ಟದ ಪರಿಷ್ಕೃತ ಅಂದಾಜನ್ನು 35,168 ಕೋಟಿ ರೂ.ಗೆ ಇಳಿಕೆ ಮಾಡಿದೆ. ಮೊದಲ ವರದಿಗಿಂತ ಎರಡನೇ ವರದಿಯಲ್ಲಿ 3 ಸಾವಿರ ಕೋಟಿ ರೂ. ಕಡಿತಗೊಳಿಸಿದೆ. ಎನ್‍ಡಿಆರ್ ಎಫ್ ನಿಯಾಮಾವಳಿ ಪ್ರಕಾರ 3,200 ಕೋಟಿ ಪರಿಹಾರಕ್ಕೆ ಮನವಿ ಮಾಡಲಾಗಿದೆ. ಒಟ್ಟು 1.16 ಲಕ್ಷ ಮನೆಗಳು ಹಾನಿಯಾಗಿವೆ ಎಂದು ಪರಿಷ್ಕೃತ ವರದಿಯಲ್ಲಿ ತಿಳಿಸಲಾಗಿದೆ. ಅಲ್ಲದೆ, 2,193 ಸೇತುವೆಗಳು ಹಾನಿಯಾದ ಬಗ್ಗೆ ವರದಿ ನೀಡಲಾಗಿದೆ. ಈ ಪರಿಷ್ಕೃತ ಪ್ರಸ್ತಾವನೆಯಲ್ಲಿ ಖಾಸಗಿ, ಸಂಘ ಸಂಸ್ಥೆಗಳ ಕಟ್ಟಡಗಳನ್ನು ಕೈ ಬಿಡಲಾಗಿದೆ ಎಂದು ತಿಳಿದು ಬಂದಿದೆ.