– 7 ದೇಶದಿಂದ ಅನಿವಾಸಿ ಭಾರತೀಯರು ತಾಯ್ನಾಡಿಗೆ
ನವದೆಹಲಿ: ಕೊರೊನಾ ಸಂಕಷ್ಟದಲ್ಲಿ ವಿದೇಶದಲ್ಲಿರುವ ಅನಿವಾಸಿ ಭಾರತೀಯರ ನೆರವಿಗೆ ಕೇಂದ್ರ ಸರ್ಕಾರ ನಿಂತಿದೆ. ಮೊದಲ ಹಂತದಲ್ಲಿ 15 ಸಾವಿರ ಜನರನ್ನು ಕರೆತರಲು ಮುಂದಾಗಿರುವ ಸರ್ಕಾರ ಈಗ ಎರಡನೇ ಹಂತದಲ್ಲಿದೆ ಮತ್ತಷ್ಟು ದೇಶಗಳಿಂದ ಭಾರತೀಯರನ್ನು ಕರೆತರುವ ಸಾಧ್ಯತೆ ಇದೆ.
ಮುಂದುವರಿದ ದೇಶಗಳಲ್ಲಿ ಕೊರೊನಾ ವೈರಸ್ ಅಟ್ಟಹಾಸ ಮೆರೆಯುತ್ತಿದೆ. ಅಲ್ಲಿರುವ ಭಾರತೀಯರು ತಾಯ್ನಾಡಿಗೆ ಮರಳಲು ಹಂಬಲಿಸುತ್ತಿದ್ದಾರೆ. ಇಂತಹ ಅನಿವಾಸಿ ಭಾರತೀಯರ ನೆರವಿಗೆ ಕೇಂದ್ರ ಸರ್ಕಾರ ಮುಂದಾಗಿತ್ತು. ಒಂದೇ ಭಾರತ್ ಮಿಷನ್ ಮತ್ತು ಸಮುದ್ರ ಸೇತು ಹೆಸರಿನಲ್ಲಿ 12 ದೇಶಗಳಲ್ಲಿರುವ ಅನಿವಾಸಿ ಭಾರತೀಯರನ್ನು 64 ವಿಶೇಷ ವಿಮಾನಗಳು ಹಾಗೂ 11 ಹಡಗುಗಳ ಮೂಲಕ ಸುಮಾರು 15 ಸಾವಿರ ಜನರನ್ನು ವಾಪಸ್ ಕರೆತರುವ ಕೆಲಸವನ್ನು ಈಗಾಗಲೇ ಆರಂಭಿಸಿದೆ. ಮೊದಲ ಹಂತದ ಈ ಮೇಗಾ ಏರ್ ಲಿಫ್ಟ್ ಕಾರ್ಯಾಚರಣೆ ಮೇ 13 ರಂದು ಅಂತ್ಯವಾಗಲಿದೆ.
ತಾಯ್ನಾಡಿಗೆ ಭಾರತೀಯರನ್ನು ಕರೆಸಿಕೊಳ್ಳುತ್ತಿದ್ದಂತೆ ಭಾರತಕ್ಕೆ ಬರಲು ಮತ್ತಷ್ಟು ಅನಿವಾಸಿ ಭಾರತೀಯರು ಮುಂದಾಗಿದ್ದಾರೆ. ರಷ್ಯಾ, ಜರ್ಮನಿ, ಥೈಲ್ಯಾಂಡ್, ಫ್ರಾನ್ಸ್, ಸ್ಪೇನ್, ವಾಸವಾಗಿರುವ ಸಾವಿರಾರು ಜನರು ಸರ್ಕಾರಕ್ಕೆ ವಾಪಸ್ ಕರೆಸಿಕೊಳ್ಳಲು ಮನವಿ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರ ಎರಡನೇ ಹಂತದಲ್ಲಿ ಒಂದೇ ಭಾರತ್ ಮಿಷನ್ ವಿಸ್ತರಿಸಲು ಮುಂದಾಗಿದ್ದು, ಮೇ.15 ಬಳಿಕ ಮತ್ತೊಂದು ದೊಡ್ಡ ಕಾರ್ಯಚರಣೆಯನ್ನು ಕೇಂದ್ರ ಆರಂಭಿಸುವ ಸಾಧ್ಯತೆ ಇದೆ.
ಏಳು ಹೊರ ದೇಶಗಳಲ್ಲಿರುವ ಸುಮಾರು 60 ಸಾವಿರ ಭಾರತೀಯರು ದೇಶದ ಹತ್ತು ವಿವಿಧ ರಾಜ್ಯಗಳಿಗೆ ತಲುಪಿಸುವಂತೆ ಮನವಿ ಮಾಡಿದ್ದಾರೆ.
ಕರ್ನಾಟಕ – 2,786
ಕೇರಳ – 25,246
ತಮಿಳುನಾಡು – 6,617
ಮಹಾರಾಷ್ಟ್ರ – 4,341
ಉತ್ತರ ಪ್ರದೇಶ – 3,715
ರಾಜಸ್ಥಾನ – 3,320
ತೆಲಂಗಾಣ – 2,796
ಆಂಧ್ರಪ್ರದೇಶ – 2,445
ಗುಜರಾತ್ – 2,330
ದೆಹಲಿ – 2,232
ಹೀಗೆ ಹತ್ತು ರಾಜ್ಯಗಳಿಂದ 60 ಸಾವಿರ ಭಾರತೀಯರು ಮನವಿ ಮಾಡಿಕೊಂಡಿದ್ದು, ವೃದ್ಧರು ವಿದ್ಯಾರ್ಥಿಗಳು, ಉದ್ಯೋಗಿಗಳು, ವಲಸೆ ಕಾರ್ಮಿಕರು ಒಳಗೊಂಡಿದ್ದಾರೆ. ಈ ಪೈಕಿ ಆದ್ಯತೆ ಮೇರೆಗೆ ಅವರನ್ನು ಕರೆತರಲು ಸರ್ಕಾರ ಮುಂದಾಗುವ ಸಾಧ್ಯತೆ ಇದೆ.