– ಲೋಕಸಭೆಯಲ್ಲಿ ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ ಪ್ರಶ್ನೆಗೆ ಶಿಕ್ಷಣ ಸಚಿವ ಜಯಂತ್ ಚೌಧರಿ ಉತ್ತರ
ನವದೆಹಲಿ: ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪದಿಂದ ಹಾನಿಗೊಂಡಿರುವ 11 ಶಾಲೆಗಳನ್ನು ಕೇಂದ್ರ ಸರ್ಕಾರದ ಸಮಗ್ರ ಶಿಕ್ಷಾ ಯೋಜನೆಯಡಿ (Samagra Shiksha) 2023-24 ಹಾಗೂ 2024-25ನೇ ಸಾಲಿನಲ್ಲಿ ದುರಸ್ತಿಗೊಳಿಸುವುದಕ್ಕೆ ಅನುಮೋದನೆ ನೀಡಲಾಗಿದೆ ಎಂದು ಶಿಕ್ಷಣ ಖಾತೆ ರಾಜ್ಯ ಸಚಿವ ಜಯಂತ್ ಚೌಧರಿ (Jayant Chaudhary) ತಿಳಿಸಿದ್ದಾರೆ.
ಲೋಕಸಭೆಯಲ್ಲಿ (Lok Sabha) ಸಂಸದ ಕ್ಯಾ. ಬ್ರಿಜೇಶ್ ಚೌಟ (Captain Brijesh Chowta) ಅವರು ಕೇಳಿದ್ದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಸಚಿವರು, ಸಮಗ್ರ ಶಿಕ್ಷಾ ಯೋಜನೆಡಿ ರಾಜ್ಯ ಸರ್ಕಾರದ ಶಿಫಾರಸ್ಸಿನ ಮೇಲೆ ಆದ್ಯತೆಯಾಗಿ ಶಾಲೆಗಳನ್ನು ದುರಸ್ತಿಗೊಳಿಸುವ (Repair of Schools) ಕಾರ್ಯ ನಡೆಯುತ್ತಿದೆ. ಪ್ರಬಂಧ್ ಪೋರ್ಟಲ್ ಪ್ರಕಾರ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಮಗ್ರ ಶಿಕ್ಷಾ ಯೋಜನೆಯಡಿ ಕಳೆದ ಎರಡು ಸಾಲಿನಲ್ಲಿ 11 ಶಾಲೆಗಳನ್ನು ದೊಡ್ಡ ಮಟ್ಟದಲ್ಲಿ ದುರಸ್ತಿಗೊಳಿಸಲು ಅನುಮೋದನೆ ನೀಡಲಾಗಿದೆ. ಕೇಂದ್ರದ ಈ ಸಮಗ್ರ ಶಿಕ್ಷಾ ಯೋಜನೆಯು ರಿಪೇರಿಗೆ ಕಾಯುತ್ತಿರುವ ಶಾಲೆಗಳನ್ನು ಆದ್ಯತೆ ಮೇರೆಗೆ ದುರಸ್ತಿಗೊಳಿಸುವುದಕ್ಕೆ ರಾಜ್ಯ ಸರ್ಕಾರಗಳಿಗೆ ಹೆಚ್ಚಿನ ಅನುಕೂಲ ಕಲ್ಪಿಸುತ್ತದೆ. ಆ ಮೂಲಕ, ನೈಸರ್ಗಿಕ ವಿಕೋಪದಿಂದ ಹಾನಿಗೊಳಗಾಗುವ ಶಾಲೆಗಳನ್ನು ಯಥಾಸ್ಥಿತಿಗೆ ತರುವುದಕ್ಕೆ ಕೇಂದ್ರ ಸರ್ಕಾರದ ಸೂಕ್ತ ಆರ್ಥಿಕ ನೆರವು ಪಡೆದುಕೊಳ್ಳಬಹುದು ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಮುಂಬೈಯಲ್ಲಿ ರನ್‌ವೇಯಿಂದ ಜಾರಿದ ಏರ್ ಇಂಡಿಯಾ ವಿಮಾನ – ತಪ್ಪಿದ ಭಾರೀ ಅವಘಡ
ಮಳೆ ಪೀಡಿತ ಪ್ರದೇಶಗಳ ಶಾಲೆಗಳನ್ನು ತುರ್ತಾಗಿ ದುರಸ್ತಿಗೊಳಿಸಿ ಅವುಗಳಿಗೆ ಸೂಕ್ತ ಮೂಲಸೌಕರ್ಯ ಮರುಸ್ಥಾಪಿಸುವುದಕ್ಕೆ ಕೇಂದ್ರ ಸರ್ಕಾರದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಮನ್ವಯದಲ್ಲಿ ಪ್ರತ್ಯೇಕ ಮಾರ್ಗಸೂಚಿ ಹಾಗೂ ಸಲಹೆಗಳನ್ನು ಬಿಡುಗಡೆಗೊಳಿಸಿದೆ. ಈ ನಡುವೆ ಕೇಂದ್ರ ಸರ್ಕಾರವು ನೈಸರ್ಗಿಕ ವಿಪತ್ತು ನಿರ್ವಹಣಾ ನಿಧಿಯಡಿ ದಕ್ಷಿಣ ಕನ್ನಡದಲ್ಲಿ 2024-25ನೇ ಸಾಲಿನಲ್ಲಿ 240 ಹಾಗೂ ರಾಜ್ಯ ಸರ್ಕಾರದ ನಿಧಿಯಡಿ 312 ಶಾಲಾ ಕಟ್ಟಡಗಳ ದುರಸ್ತಿ ಕಾರ್ಯ ಕೈಗೊಂಡಿರುವುದಾಗಿ ಸಚಿವ ಚೌಧರಿ ವಿವರಿಸಿದರು. ಇದನ್ನೂ ಓದಿ: ಕನಕಪುರದ 250ಕ್ಕೂ ಹೆಚ್ಚು ಹಳ್ಳಿಗಳಿಗೆ ಕಾವೇರಿ ಕುಡಿಯುವ ನೀರು ಪೂರೈಕೆ: ಡಿಕೆಶಿ
ಸಂಸತ್ತಿನ ಮುಂಗಾರು ಅಧಿವೇಶನ ಇಂದಿನಿಂದ ಆರಂಭವಾಗಿದ್ದು, ಸಂಸದ ಕ್ಯಾ. ಚೌಟ ಅವರು ದಕ್ಷಿಣ ಕನ್ನಡದಲ್ಲಿ ಅತಿವೃಷ್ಟಿಗೆ 290ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳ ಮೂಲಸೌಕರ್ಯಕ್ಕೆ ಹಾನಿಯಾಗಿದ್ದು, ಅವುಗಳ ದುರಸ್ತಿ ಕಾರ್ಯಕ್ಕೆ ತುರ್ತಾಗಿ ಕೇಂದ್ರ ಸರ್ಕಾರದ ನೆರವು ಕೋರಿದ್ದರು. ದಕ್ಷಿಣ ಕನ್ನಡವು ಸೇರಿದಂತೆ ಕರಾವಳಿ ಭಾಗದಲ್ಲಿ ಮಳೆ ಪೀಡಿತ ಪ್ರದೇಶಗಳಲ್ಲಿ ಹಾನಿಗೊಂಡಿರುವ ಶಾಲೆಗಳ ರಿಪೇರಿ ಹಾಗೂ ಅಗತ್ಯ ಮೂಲಸೌಕರ್ಯ ಒದಗಿಸುವುದಕ್ಕೆ ಏನೆಲ್ಲ ತುರ್ತು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬುದರ ಬಗ್ಗೆ ಚುಕ್ಕೆಗುರುತಿಲ್ಲದ ಪ್ರಶ್ನೆಯಡಿ ಮಾಹಿತಿ ಕೋರಿದ್ದರು. ಇದನ್ನೂ ಓದಿ: CBSE ಯಿಂದ ಸೇಫ್ಟಿ ಗೈಡ್‌ಲೈನ್ಸ್ - ಶೌಚಾಲಯ ಹೊರತುಪಡಿಸಿ ಶಾಲೆಯ ಉಳಿದೆಲ್ಲಕಡೆ ಆಡಿಯೋವಿಶುವಲ್ ಸಿಸಿಟಿವಿ ಕಡ್ಡಾಯ
ಈ ಬಗ್ಗೆ ಪ್ರತಿಕ್ರಿಯಿಸಿರುವ ಕ್ಯಾ. ಚೌಟ ಅವರು, ಮಳೆ ಪೀಡಿತ ಪ್ರದೇಶಗಳ ಶಾಲೆಗಳನ್ನು ಸಮಗ್ರ ಶಿಕ್ಷಾ ಯೋಜನೆಯಡಿ ರಿಪೇರಿಗೆ ಆದ್ಯತೆಯಡಿ ಅನುಮೋದನೆ ನೀಡಿರುವುದು ಸ್ವಾಗತಾರ್ಹ ಕ್ರಮ. ಆರಂಭಿಕ ಹಂತದಲ್ಲಿ ಜಿಲ್ಲೆಯ 11 ಶಾಲೆಗಳ ದುರಸ್ತಿಗೆ ಅನುಮೋದನೆ ಸಿಕ್ಕಿದೆ. ಮುಂದೆ ಮಳೆಯಿಂದ ಹಾನಿಗೊಳಗಾಗಿರುವ ದಕ್ಷಿಣ ಕನ್ನಡದ 290 ಶಾಲೆಗಳ ದುರಸ್ತಿ ಕಾರ್ಯಕ್ಕೂ ಕೇಂದ್ರ ಸರ್ಕಾರದಿಂದ ಹೆಚ್ಚಿನ ಆರ್ಥಿಕ ನೆರವು ಪಡೆಯುವುದಕ್ಕೆ ಎಲ್ಲ ರೀತಿಯ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಸೋಪ್ ಬಾಕ್ಸ್‌ಲ್ಲಿ 14.69 ಕೋಟಿ ಮೌಲ್ಯದ ಕೊಕೇನ್ ಸ್ಮಗ್ಲಿಂಗ್ – ಇಬ್ಬರು ಮಹಿಳೆಯರು ಅರೆಸ್ಟ್