ವಿಜಯಪುರ: ತ್ರಿವಿಧ ದಾಸೋಹಿ ಶ್ರೀ ಶಿವಕುಮಾರ ಸ್ವಾಮೀಜಿಗಳು ವಿಶ್ವದಲ್ಲೇ ಶ್ರೇಷ್ಠ ವ್ಯಕ್ತಿ. ಅವರು ಮಾಡಿರುವ ಕಾಯಕಕ್ಕೆ ಶ್ರೀಗಳಿಗೆ ಭಾರತ ರತ್ನ ನೀಡಬೇಕು ಇಲ್ಲವಾದರೆ ಪ್ರತಿಭಟನೆ ಮೂಲಕ ಅನ್ಯಾಯವನ್ನು ಸರಿಪಡಿಸಿಕೊಳ್ಳುತ್ತೇವೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ನೀಡಬೇಕು ಎಂದು ಎಲ್ಲೆಡೆಯಿಂದ ಜನರು ಆಗ್ರಹಿಸುತ್ತಿದ್ದಾರೆ. ಭಾರತ ರತ್ನ ನೀಡದಿದ್ದರೂ ಶ್ರೇಷ್ಠ ಸಂತರಾಗಿ ಎಲ್ಲೆಡೆ ಹೆಸರುವಾಸಿಯಾಗಿದ್ದಾರೆ. ಅವರ ಹೆಸರನ್ನು ಕೇಂದ್ರ ಸರ್ಕಾರ ಈ ಬಾರಿ ಭಾರತ ರತ್ನ ಪ್ರಶಸ್ತಿಗೆ ಪರಿಗಣಿಸಬೇಕಾಗಿತ್ತು. ಶ್ರೀಗಳಿಗೆ ಭಾರತ ರತ್ನ ಕೊಡಿಸುವಲ್ಲಿ ಲೋಕಸಭಾ ಹಾಗು ರಾಜ್ಯ ಸಭಾ ಸದಸ್ಯರು ಪ್ರಯತ್ನ ಮಾಡಬೇಕು. ಅನ್ಯಾಯವಾದಾಗ ಪ್ರತಿಭಟನೆ ಮೂಲಕ ಸರಿಪಡಿಸಿಕೊಳ್ಳಬೇಕು ಎಂದು ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಈ ಹಿಂದೆ ಆಲಮಟ್ಟಿ ಜಲಾಶಯದ ಎತ್ತರವನ್ನು ಹೆಚ್ಚಿಸಬೇಕಾದರೆ ಆಂಧ್ರಪ್ರದೇಶದ ಸರ್ಕಾರ ವಿರೋಧ ಮಾಡಿತ್ತು. ಆಗ ವಾಜಪೇಯಿ ಪ್ರಧಾನಿಯಾಗಿದ್ದಾಗ ನಾನು ಕೇಂದ್ರ ಸಚಿವನಿದ್ದೆ. ಜಲಾಶಯದ ಎತ್ತರಕ್ಕಾಗಿ ಹೋರಾಟ ಮಾಡಿ ಯಶಸ್ವಿಯಾಗಿದ್ದೆವು. ಅದೇ ಮಾದರಿಯಲ್ಲಿ ಈಗ ಹೋರಾಡಬೇಕಿದೆ. ತ್ರಿವಿಧ ದಾಸೋಹಿಗೆ ಭಾರತ ರತ್ನ ಕೊಡಬೇಕೆಂದು ನಾನು ಪ್ರಧಾನಿಗಳಿಗೆ ಒತ್ತಾಯ ಮಾಡುತ್ತೇನೆ. ಭಾರತ ರತ್ನ ಕೊಡದಿದ್ದರೆ ಪ್ರತಿಭಟನೆ ಮಾಡಿ ನಮ್ಮ ಶಕ್ತಿ ತೋರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಕಾಂಗ್ರೆಸ್ ಶಾಸಕರ ಗಲಾಟೆ ವಿಚಾರವಾಗಿ ಪ್ರತಿಕ್ರಿಯಿಸಿ, ಗಣಿ ರಾಜಕೀಯದ ಪರಿಣಾಮದಿಂದಾಗಿ ಬಿಯರ್ ಬಾಟಲಿಗಳಿಂದ ಹೊಡೆದಾಟ ಶುರುವಾಗಿದೆ. ಗಣಿ ರಾಜಕೀಯ ಕರ್ನಾಟಕಕ್ಕೆ ಶಾಪವಾಗಿ ಪರಿಣಮಿಸಿದೆ. ಬಾಟಲಿಯಿಂದ ಹೊಡೆದಾಡುವ ಅಯೋಗ್ಯರೆಲ್ಲಾ ಶಾಸಕರಾಗಿದ್ದಾರೆ ಎಂದು ಕಾಂಗ್ರೆಸ್ ಶಾಸಕರನ್ನು ಟೀಕಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv