ಕಾಫಿ ಬೆಳೆಗಾರರ ಸಮಸ್ಯೆ ಪರಿಹರಿಸಿ – ಸೀತಾರಾಮನ್ ಬಳಿ ಕೊಡಗಿನ ನಿಯೋಗ ಮನವಿ

Public TV
2 Min Read
coffeee

ಮಡಿಕೇರಿ: ಕಾಫಿ ಕೃಷಿ ಮತ್ತು ಕಾಫಿ ಉದ್ಯಮದ ಸಮಸ್ಯೆಗಳ ಸಂಬಂಧಿತ ಬಜೆಟ್ ಪೂರ್ವಭಾವಿಯಾಗಿ ಕರ್ನಾಟಕದ ವಿವಿಧ ಕಾಫಿ ಬೆಳೆಗಾರ ಸಂಘಟನೆಗಳ ನಿಯೋಗವು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ಸಮಸ್ಯೆ ಪರಿಹಾರಕ್ಕೆ ಮನವಿ ಸಲ್ಲಿಸಿತು.

ಕರ್ನಾಟಕ ಬೆಳೆಗಾರರ ಒಕ್ಕೂಟ, ರಾಜ್ಯ ಪ್ಲಾಂಟರ್ಸ್ ಅಸೋಸಿಯೇಷನ್, ಜಿಲ್ಲಾ ಪ್ಲಾಂಟರ್ಸ್ ಅಸೋಸಿಯೇಷನ್ ಪದಾಧಿಕಾರಿಗಳ ನಿಯೋಗ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ನೇತೃತ್ವದಲ್ಲಿ ಕೇಂದ್ರ ಹಣಕಾಸು ಸಚಿವೆಯೊಂದಿಗೆ ಚರ್ಚೆ ನಡೆಸಿತು.

ಕಾಫಿ ಬೆಳೆಗಾರರ ಸಮಸ್ಯೆ ಪರಿಹರಿಸಿ, ವಲಯವನ್ನು ಪುನಶ್ಚೇತನಗೊಳಿಸಲು ಸಣ್ಣ ಮತ್ತು ದೀರ್ಘಾವಧಿಯ ಕ್ರಮ ಕೈಗೊಳ್ಳುವಂತೆ ಸಚಿವರೊಂದಿಗೆ ಕಾಫಿ ಬೆಳೆಗಾರರ ನಿಯೋಗ ಚರ್ಚಿಸಿತು. ರಾಜ್ಯ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಯು.ಎಂ.ತೀರ್ಥ ಮಲ್ಲೇಶ್, ಉಪಾಧ್ಯಕ್ಷ ನಂದಾ ಬೆಳ್ಳಿಯಪ್ಪ, ಕರ್ನಾಟಕ ಪ್ಲಾಂಟರ್ಸ್ ಅಸೋಸಿಯೇಷನ್ ಅಧ್ಯಕ್ಷ ಶಿರೀಷ್ ವಿಜಯೇಂದ್ರ, ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್ ಅಧ್ಯಕ್ಷ ಎಂ.ಸಿ.ಕರಿಯಪ್ಪ, ಪ್ರದೀಪ್ ಪೂವಯ್ಯ ಇದ್ದರು. ಇದೇ ಸಂದರ್ಭ ನಿಯೋಗವು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡರಿಗೂ ಕಾಫಿ ಸಮಸ್ಯೆ ಸಂಬಂಧಿತ ಮನವಿಯನ್ನು ಸಲ್ಲಿಸಿದ್ದಾರೆ.

Coffee palnt

ನಿಯೋಗದ ಬೇಡಿಕೆಗಳು: ಪ್ರಸ್ತುತ ಕಾಫಿ ಬೆಲೆಯು ಗಣನೀಯವಾಗಿ ಇಳಿಕೆ ಕಂಡಿದ್ದು, ಉತ್ಪಾದನಾ ವೆಚ್ಚವು ಅಧಿಕವಾಗಿದೆ. ಪ್ರತಿ ಎಕರೆಗೆ 30ರಿಂದ 40 ಸಾವಿರ ನಷ್ಟ ಸಂಭವಿಸುತ್ತಿದೆ. 2012 ಮತ್ತು 2016ರಲ್ಲಿ ಉಂಟಾದ ಅನಾವೃಷ್ಟಿಯಿಂದ ಹಾಗೂ 2018 ಮತ್ತು 2019ರಲ್ಲಿ ಉಂಟಾದ ತೀವ್ರ ಅತಿವೃಷ್ಟಿಯಿಂದ ಕಾಫಿ ಉತ್ಪಾದನೆಯೂ ಕುಂಠಿತಗೊಂಡಿದೆ.

ನಷ್ಟದ ಪರಿಣಾಮ ಕಾಫಿ ಬೆಳೆಗಾರರು ಬ್ಯಾಂಕಿನಲ್ಲಿ ಪಡೆದಿರುವ ಸಾಲವನ್ನು ಮರುಪಾವತಿ ಮಾಡಲು ಅಸಹಾಯಕರಾಗಿದ್ದಾರೆ. ಆ ನಿಟ್ಟಿನಲ್ಲಿ ವಿಶೇಷವಾದ ಸಾಲಮನ್ನಾ ಪ್ಯಾಕೇಜ್ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಎಲ್ಲಾ ಸಹಕಾರಿ, ಖಾಸಗಿ ಮತ್ತು ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಬೆಳೆಗಾರರಿಗೆ ಶೇ.6ರ ಬಡ್ಡಿ ದರದಲ್ಲಿ ಸಾಲ ಸೌಲಭ್ಯವನ್ನು ಒದಗಿಸಿಕೊಡಬೇಕು. ಸಿಬಿಎಲ್ಸಿಯಿಂದ ಕೃಷಿ ಸಾಲವನ್ನು ಹೊರಗಿಡಬೇಕು. ಕಾಫಿ ಬೆಳೆಗಾರರ ಸಾಲಗಳನ್ನು ಮರು ಹೊಂದಾಣಿಕೆಗೊಳಿಸುವುದು, ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅಡಿ ಕಾಫಿಯನ್ನು ಸೇರಿಸಬೇಕು ಎಂದು ಕೋರಿದರು.

money 1

ಭತ್ತ, ಕಾಳುಮೆಣಸು, ಅಡಿಕೆ, ಮುಂತಾದ ಬೆಳೆಗಳಿಗೆ ಬೆಳೆವಿಮೆಯನ್ನು ನೀಡಲಾಗುತ್ತಿದ್ದು, ಮುಖ್ಯವಾಗಿ ಈ ಭಾಗದಲ್ಲಿ ಕಾಫಿ ಬೆಳೆಯಲಾಗುತ್ತಿದೆ. ಆದರೆ, ಬೆಳೆ ವಿಮೆಯಿಂದ ಕಾಫಿ ಬೆಳೆಯನ್ನು ಹೊರಗಿಡಲಾಗಿದೆ. ಹೀಗಾಗಿ ಕಾಫಿಗೂ ಬೆಳೆ ವಿಮೆ ನೀಡುವಂತೆ ಕೇಳಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *