ಮಡಿಕೇರಿ: ಮೈಸೂರು-ಕುಶಾಲನಗರ ಚತುಷ್ಪಥ ಹೆದ್ದಾರಿ (Mysuru Kushalnagar Highway) ಯೋಜನೆಯ ದೀರ್ಘಕಾಲದಿಂದ ಬಾಕಿ ಉಳಿದಿದ್ದ ಪ್ಯಾಕೇಜ್-3 ನಿರ್ಮಾಣಕ್ಕೆ ಕೇಂದ್ರ ಸರ್ಕಾರದಿಂದ ಅನುಮೋದನೆ ದೊರೆತಿದೆ.
ಮೈಸೂರು-ಕುಶಾಲನಗರ ಹೆದ್ದಾರಿ ಯೋಜನೆಯ ದೀರ್ಘಕಾಲದಿಂದ ಬಾಕಿ ಉಳಿದಿದ್ದ ಪ್ಯಾಕೇಜ್ 3 ನಿರ್ಮಾಣಕ್ಕೆ ಅಂತಿಮವಾಗಿ ಅನುಮೋದನೆ ದೊರೆತಿದೆ ಎಂದು ನಿಮ್ಮೊಂದಿಗೆ ಹಂಚಿಕೊಳ್ಳಲು ಹರ್ಷಿಸುತ್ತೇನೆ. ಇದು ನಮ್ಮ ಪ್ರದೇಶಕ್ಕೆ ಒಂದು ಪ್ರಮುಖ ಮೈಲಿಗಲ್ಲು, ವಿಶೇಷವಾಗಿ ಯೋಜನೆಯು ವರ್ಷಗಳಲ್ಲಿ ಎದುರಿಸಿದ ಹಲವು ವಿಳಂಬಗಳ ನಂತರ. ಇದು ಸಂಬಂಧಪಟ್ಟ… pic.twitter.com/9HxKr9mWib
— Yaduveer Wadiyar (@yaduveerwadiyar) March 26, 2025
2023ರ ಮಾರ್ಚ್ 12ರಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು, ಈ ಹೆದ್ದಾರಿ ನಿರ್ಮಾಣಕ್ಕೆ ವರ್ಚುವಲ್ ಮೂಲಕ ಶಂಕುಸ್ಥಾಪನೆ ನೆರವೇರಿಸಿದ್ದರು. ಈಗಾಗಲೇ ಡಿಪಿಆರ್ ಅನ್ವಯ ಭೂಸ್ವಾಧೀನ ಪ್ರಕ್ರಿಯೆ ಮತ್ತು ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಇದೀಗ 3ನೇ ಹಂತದ ಪ್ಯಾಕೇಜ್‌ಗೆ ಕೇಂದ್ರ ಸರ್ಕಾರ ಅನುಮೋದನೆ ಕೊಟ್ಟಿದೆ. ಈ ಮಾಹಿತಿಯನ್ನು ಮೈಸೂರು ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ (Yaduveer Wadiyar) ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಇದು ನಮ್ಮ ಪ್ರದೇಶಕ್ಕೆ ಒಂದು ಪ್ರಮುಖ ಮೈಲಿಗಲ್ಲು, ವಿಶೇಷವಾಗಿ ಯೋಜನೆಯು ವರ್ಷಗಳಲ್ಲಿ ಎದುರಿಸಿದ ಹಲವು ವಿಳಂಬಗಳ ನಂತರ ಯಶಸ್ವಿಯಾಗಿದೆ. ಗೌರವಾನ್ವಿತ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Nitin Gadkari) ಜೀ ಅವರೊಂದಿಗಿನ ನನ್ನ ಇತ್ತೀಚಿನ ಸಭೆಯಲ್ಲಿ, ಈ ಯೋಜನೆಯ ಸುತ್ತಲಿನ ಸವಾಲುಗಳು ಮತ್ತು ಸಮಸ್ಯೆಗಳನ್ನು ವೈಯಕ್ತಿಕವಾಗಿ ಪ್ರಸ್ತುತಪಡಿಸಲು ನನಗೆ ಅವಕಾಶ ಸಿಕ್ಕಿತು. ಅವರು ತ್ವರಿತ ಕ್ರಮ ಕೈಗೊಳ್ಳುವುದಾಗಿ ನನಗೆ ಭರವಸೆ ನೀಡಿದ್ದರು, ಭರವಸೆ ನೀಡಿದಂತೆ ಈಗ ಅನುಮತಿ ನೀಡಿದ್ದಾರೆ .
ಈ ಹೆದ್ದಾರಿ ಯೋಜನೆಯು ಸಂಪರ್ಕವನ್ನು ಹೆಚ್ಚಿಸುವಲ್ಲಿ, ಪ್ರಯಾಣವನ್ನು ಸುಗಮಗೊಳಿಸುವಲ್ಲಿ ಮತ್ತು ಮೈಸೂರು ಮತ್ತು ಕೊಡಗಿನ ಆರ್ಥಿಕ ಮತ್ತು ಒಟ್ಟಾರೆ ಅಭಿವೃದ್ಧಿಗೆ ಕೊಡುಗೆ ನೀಡುವಲ್ಲಿ ಬಹಳ ಮಹತ್ವದ್ದಾಗಿದೆ. ನಮ್ಮ ಜನರ ಪ್ರಯೋಜನಕ್ಕಾಗಿ ಇಂತಹ ಪ್ರಗತಿ ಮುಂದುವರಿಯುವುದನ್ನು ಖಚಿತಪಡಿಸಿಕೊಳ್ಳಲು ನಾನು ಸಂಪೂರ್ಣವಾಗಿ ಬದ್ಧನಾಗಿರುತ್ತೇನೆ ಎಂದು ಎಕ್ಸ್‌ನಲ್ಲಿ ತಿಳಿಸಿದ್ದಾರೆ.
ಭೂಸ್ವಾಧೀನ ಪ್ರಕ್ರಿಯೆ ಶೀಘ್ರ ಪೂರ್ಣ:
ಮೈಸೂರು-ಕುಶಾಲನಗರ ಚತುಷ್ಪಥ ಹೆದ್ದಾರಿ ಕಾಮಗಾರಿ ಪ್ರಾರಂಭಿಸಲು ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳುವ ಹಂತದಲ್ಲಿದೆ. 2ನೇ ಹಂತದ ಕಾಮಗಾರಿಗೆ ಶೇ.84 ರಷ್ಟು, 3ನೇ ಹಂತದ ಕಾಮಗಾರಿಗೆ ಶೇ.80 ರಷ್ಟು, 4ನೇ ಹಂತದ ಕಾಮಗಾರಿಗೆ ಶೇ.70 ರಷ್ಟು ಮತ್ತು 5ನೇ ಹಂತದ ಕಾಮಗಾರಿಗೆ ಶೇ.84 ರಷ್ಟು ಭೂಮಿ ಸ್ವಾಧೀನಪಡಿಸಿಕೊಳ್ಳಲಾಗಿದೆ. ಪಿರಿಯಾಪಟ್ಟಣ ಮತ್ತು ಕುಶಾಲನಗರ ನಡುವಿನ ರಸ್ತೆ ಅಗಲೀಕರಣ ಚಟುವಟಿಕೆಗಳಿಗೆ ಅರಣ್ಯ ಇಲಾಖೆಯಿಂದ ಅನುಮಯಿ ಪಡೆಯಬೇಕಿದೆ ಎಂದು ಮೂಲಗಳು ತಿಳಿಸಿವೆ.
ಮಹತ್ವಕಾಂಕ್ಷಿ ಯೋಜನೆಯಾದ ಮೈಸೂರು-ಕುಶಾಲನಗರ ಚತುಷ್ಪಥ ಹೆದ್ದಾರಿಯು 2027ರ ಜೂನ್ ತಿಂಗಳ ಒಳಗೆ ಪೂರ್ಣಗೊಳ್ಳಲಿದೆ ಎಂದು ಸಂಸದ ಯದುವೀರ್ ಒಡೆಯರ್ ತಿಳಿಸಿದ್ದಾರೆ.