ನವದೆಹಲಿ: ರಾಜ್ಯದಲ್ಲಿ 2023-24ರ ಕೃಷಿ ಹಂಗಾಮಿನ ಹಿಂಗಾರಿನಲ್ಲಿ ಬೆಳೆದ 3,133 ಮೆಟ್ರಿಕ್ ಟನ್ ಕುಸುಬೆ ಬೆಳೆಯನ್ನು (Safflower Crop) ಬೆಂಬಲ ಬೆಲೆ (MSP) ಯೋಜನೆಯಡಿ ಖರೀದಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ ಎಂದು ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿಬಿ ಜಯಚಂದ್ರ (TB Jayachandra) ಹೇಳಿದ್ದಾರೆ.
ರಾಜ್ಯದ ಮಧ್ಯ ಹಾಗೂ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳ ಸುಮಾರು 21,000 ಹೆಕ್ಟೇರ್ ಪ್ರದೇಶದಲ್ಲಿ ಕುಸುಬೆ ಬೆಳೆ ಕೃಷಿ ನಡೆಯುತ್ತಿದ್ದು, ರೈತರು (Farmers) ಸರಿಯಾದ ಬೆಲೆ ಇಲ್ಲದೇ ತೊಂದರೆ ಎದುರಿಸುತ್ತಿದ್ದರು. ಇದನ್ನು ಪರಿಗಣಿಸಿ, ರಾಜ್ಯ ಸರ್ಕಾರದ ಸಹಕಾರ ಇಲಾಖೆಯ ಅಪರ ಕಾರ್ಯದರ್ಶಿಯವರು ಕೇಂದ್ರ ಸಹಕಾರ ಇಲಾಖೆ ಕಾರ್ಯದರ್ಶಿಯವರಿಗೆ ಕುಸುಬೆ ಬೆಳೆಯನ್ನು ಬೆಂಬಲ ಬೆಲೆ ವ್ಯಾಪ್ತಿಗೆ ತರಲು ಕೋರಿದ್ದರು. ಇದನ್ನೂ ಓದಿ: ಮದ್ದೂರು ಶಾಸಕ ಉದಯ್ ಮನೆಯಲ್ಲೇ ಗನ್‌ಮ್ಯಾನ್ ಮೇಲೆ ಹಲ್ಲೆ ನಡೆಸಿತ್ತು ದರ್ಶನ್ ಗ್ಯಾಂಗ್!
ಬಳಿಕ ನವದೆಹಲಿಯಲ್ಲಿ ಕರ್ನಾಟಕ ಸರ್ಕಾರದ ಮನವಿಯನ್ನು ಮುತುವರ್ಜಿ ವಹಿಸಿ ಸಂಬಂಧಿಸಿದ ಇಲಾಖೆಗಳೊಡನೆ ಪತ್ರ ವ್ಯವಹಾರ ಹಾಗೂ ಸಮಾಲೋಚನೆ ನಡೆಸಿ ಕೇಂದ್ರ ಸರ್ಕಾರದಿಂದ ಅಂತಿಮವಾಗಿ ಅನುಮತಿ ಪಡೆದಿದೆ. ರಾಜ್ಯ ಸರ್ಕಾರವು ಸಂಬಂಧಿಸಿದ ನೋಡಲ್ ಏಜೆನ್ಸಿಗಳ ಸಮನ್ವಯತೆಯೊಂದಿಗೆ ಮುಂಬರುವ ದಿನಗಳಲ್ಲಿ ಬೆಂಬಲ ಬೆಲೆಯಲ್ಲಿ ಕುಸುಬೆ ಬೆಳೆ ಖರೀದಿಗೆ ಕ್ರಮ ವಹಿಸಲಿದೆ ಎಂದು ಜಯಚಂದ್ರ ವಿವರಿಸಿದರು. ಇದನ್ನೂ ಓದಿ: ವಿಧಾನಸೌಧ ಆವರಣದಲ್ಲಿ 25 ಅಡಿ ಎತ್ತರದ ಭುವನೇಶ್ವರಿ ಪ್ರತಿಮೆ ನಿರ್ಮಾಣಕ್ಕೆ ಶಂಕುಸ್ಥಾಪನೆ
ಕಳೆದ ಒಂದು ದಿನದ ಹಿಂದೆಯಷ್ಟೇ ರೈತರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. ಮೋದಿ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಭತ್ತ, ರಾಗಿ, ತೊಗರಿ ಸೇರಿ 22 ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆಯನ್ನು ಹೆಚ್ಚಿಸಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಶೇ.50 ರಷ್ಟು ಎಂಎಸ್‌ಪಿ ಹೆಚ್ಚಿಸಿದೆ. ಭತ್ತದ ಮೇಲಿನ ಎಂಎಸ್‌ಪಿಯನ್ನು 143 ರೂಪಾಯಿ ಹೆಚ್ಚಿಸಿದ್ದು, ಭತ್ತದ ಕನಿಷ್ಠ ಬೆಲೆ ಈಗ 2,300 ರೂಪಾಯಿ ಆಗಿದೆ. ಅದೇ ರೀತಿ ರಾಗಿಗೆ 268 ರೂ., ಗೋಧಿ 150 ರೂ., ಮೆಕ್ಕೆ ಜೋಳ 128 ರೂ., ಜೋಳ 210 ರೂ., ಸಜ್ಜೆ 150 ರೂ., ತೊಗರಿ 400 ರೂ., ಹೆಸರುಬೇಳೆ 803 ರೂ., ಉದ್ದಿನ ಬೇಳೆ 350 ರೂ., ಕಡಲೆಕಾಯಿ 527 ರೂ., ಸೂರ್ಯಕಾಂತಿ 360 ರೂ., ಸೋಯಾಬೀನ್ 300 ರೂ., ಹತ್ತಿ 400 ರೂ., ಎಳ್ಳಿ 632 ರೂ., ಹುಚ್ಚೆಳ್ಳಿ 983 ರೂ. ಬೆಂಬಲ ಬೆಲೆಯನ್ನು ಕೇಂದ್ರ ಸರ್ಕಾರ ಘೋಷಿಸಿದೆ. ಇದರಿಂದ 2 ಲಕ್ಷ ರೈತರಿಗೆ ಲಾಭವಾಗಲಿದೆ. ಸರ್ಕಾರಕ್ಕೆ 35,000 ಕೋಟಿ ರೂ. ಹೆಚ್ಚುವರಿ ಹೊರೆ ಆಗಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಇದೀಗ ಕುಸುಬೆ ಬೆಳೆಯನ್ನೂ ಎಂಎಸ್‌ಪಿ ಯೋಜನೆ ಅಡಿಗೆ ತಂದಿರುವುದು ರೈತರರಲ್ಲಿ ಸಂತಸ ತಂದಿದೆ. ಇದನ್ನೂ ಓದಿ: ಕೇದಾರನಾಥ ಯಾತ್ರೆಗೆ ತೆರಳಿದ್ದ ಕೊಪ್ಪಳ ಮೂಲದ ಅರ್ಚಕ ಹೃದಯಾಘಾತದಿಂದ ಸಾವು