ಬೀದರ್: ಶತಾಯುಷಿ, ಮಾಜಿ ಸಚಿವ ಭೀಮಣ್ಣ ಖಂಡ್ರೆ (Bhimanna Khandre) ಅವರಿಂದು (ಜ.16) ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಭೀಮಣ್ಣ ಖಂಡ್ರೆ ಅವರು ತಮ್ಮ 102 ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಕಳೆದ 15 ದಿನಗಳಿಂದ ಬೀದರ್‌ನ (Bidar) ಗುದಗೆ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಭಾನುವಾರ (ಜ.11) ಉಸಿರಾಟದ ಸಮಸ್ಯೆ ಮತ್ತು ಬಿಪಿಯಲ್ಲಿ ವ್ಯತ್ಯಾಸವಾಗಿ ಆರೋಗ್ಯದಲ್ಲಿ ಏರುಪೇರಾಗಿತ್ತು. ಇದನ್ನೂ ಓದಿ: ನಮ್ಮ ತಂದೆ ಆರೋಗ್ಯ ಸ್ಥಿತಿ ಗಂಭೀರವಾಗಿದೆ, ವೈದ್ಯರು ಸತತವಾಗಿ ಚಿಕಿತ್ಸೆ ನೀಡುತ್ತಿದ್ದಾರೆ: ಈಶ್ವರ್ ಖಂಡ್ರೆ

ಬೀದರ್ ಜಿಲ್ಲೆಯ ಹುಲಸೂರು ತಾಲೂಕಿನ ಗೊರ್ಟಾ(ಬಿ) ಗ್ರಾಮದಲ್ಲಿ 1923ರ ಜನವರಿ 8ರಂದು ತಂದೆ ಶಿವಲಿಂಗಪ್ಪ, ತಾಯಿ ಪಾರ್ವತಿ ಬಾಯಿ ಅವರ ಮಗನಾಗಿ ಜನಿಸಿದರು. ಭೀಮಣ್ಣ ಖಂಡ್ರೆ ಅವರು ಲಕ್ಷ್ಮಿಬಾಯಿ ಅವರನ್ನು ವಿವಾಹವಾಗಿದ್ದರು. ದಂಪತಿಗೆ ಮೂವರು ಪುತ್ರರು, ಐವರು ಪುತ್ರಿಯರಿದ್ದಾರೆ.
1953ರಲ್ಲಿ ಭಾಲ್ಕಿ ಪುರಸಭೆ ಅಧ್ಯಕ್ಷರಾಗಿ ರಾಜಕೀಯ ಕ್ಷೇತ್ರಕ್ಕೆ ದುಮುಕಿದ ಭೀಮಣ್ಣ ಖಂಡ್ರೆ ಅವರು 1962, 1967, 1978 ಮತ್ತು 1983ರಲ್ಲಿ ನಾಲ್ಕು ಬಾರಿ ಭಾಲ್ಕಿ (Bhalki) ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. 1980ರಲ್ಲಿ ಕೆಪಿಸಿಸಿ (KPCC) ರಾಜ್ಯ ಉಪಾಧ್ಯಕ್ಷರಾಗಿ, 1988ರಲ್ಲಿ ಬೀದರ್ (Bidar) ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು. 1992ರಲ್ಲಿ ಮೊಯ್ಲಿ ಸರ್ಕಾರದ ಕ್ಯಾಬಿನೆಟ್‌ನಲ್ಲಿ ಸಾರಿಗೆ ಸಚಿವರಾಗಿದ್ದರು. 1994 ಹಾಗೂ 2000ರಲ್ಲಿ ಎರಡು ಸಲ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದರು. 1999ರಲ್ಲಿ ಅಖಿಲ ಭಾರತೀಯ ವೀರಶೈವ ಮಹಾಸಭಾದ ಅಧ್ಯಕ್ಷರಾಗಿದ್ದರು. ಅದಾದ ಬಳಿಕ 2005ರಲ್ಲಿ ಮರು ಆಯ್ಕೆಯಾಗಿ 2011ರವರೆಗೆ 12 ವರ್ಷ ಕಾಲ ಸುದೀರ್ಘವಾಗಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು.

BA, LLB ಮುಗಿಸಿರುವ ಭೀಮಣ್ಣ ಖಂಡ್ರೆ ಅವರು ರಾಜಕೀಯ ಮಾತ್ರವಲ್ಲದೇ ನಿಜಾಮರ ವಿರುದ್ಧ ಹೋರಾಡಿ ಜೈಲಿಗೆ ಹೋಗಿ ಸ್ವಾತಂತ್ರ‍್ಯ ಹೋರಾಟಗಾರ ಎನಿಸಿಕೊಂಡಿದ್ದರು. ಕಲ್ಯಾಣ ಕರ್ನಾಟಕದಲ್ಲಿ ಲೋಕನಾಯಕ ಎಂದು ಖ್ಯಾತಿ ಪಡೆದಿರುವ ಇವರು ಸಹಕಾರ, ಶಿಕ್ಷಣ, ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ್ದಾರೆ.
ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿದ ಬಳಿಕ ಮಾಧ್ಯಮಗಳೊಂದಿಗೆ ಈಶ್ವರ್ ಖಂಡ್ರೆ (Eshwar Khandre) ಮಾತನಾಡಿ, ಮನೆಯಲ್ಲೇ ಕೊನೆಯುಸಿರೆಳೆಯಬೇಕು ಎಂಬುದು ನಮ್ಮ ತಂದೆಯವರ ಕೊನೆಯಾಸೆಯಾಗಿತ್ತು. ಹೀಗಾಗಿ ಮನೆಗೆ ಶಿಫ್ಟ್ ಮಾಡಿರುವುದಾಗಿ ತಿಳಿಸಿದ್ದರು.ಇದನ್ನೂ ಓದಿ: ಮಾಜಿ ಸಚಿವ ಭೀಮಣ್ಣ ಖಂಡ್ರೆ ಆರೋಗ್ಯದಲ್ಲಿ ಏರುಪೇರು – ತಂದೆಯ ಆರೋಗ್ಯ ವಿಚಾರಿಸಿದ ಈಶ್ವರ್ ಖಂಡ್ರೆ

