-ಜೈಲಾಗಿ ಬದಲಾದ ಸೆಂಟೌರ್ ಹೋಟೆಲ್
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ 50ಕ್ಕೂ ಅಧಿಕ ರಾಜಕೀಯ ಮುಖಂಡರನ್ನು ಶ್ರೀನಗರದ ಹೊರವಲಯದಲ್ಲಿರುವ ಸೆಂಟೌರ್ ಹೋಟೆಲ್ ನಲ್ಲಿ ಇರಿಸಲಾಗಿದೆ. ಹೋಟೆಲ್ ಜೈಲಾಗಿ ಬದಲಾಗಿದೆ ಎಂದು ವರದಿಯಾಗಿದೆ. ಹೋಟೆಲ್ ಬಂಧನದಲ್ಲಿರುವ ಎಲ್ಲ ನಾಯಕರಿಗೆ ಸೋಮವಾರ ತಮ್ಮ ಸಂಬಂಧಿ ಮತ್ತು ಆಪ್ತರನ್ನು ಭೇಟಿಯಾಗಲು ಅವಕಾಶ ಕಲ್ಪಿಸಲಾಗಿತ್ತು.
ಬಟ್ಟೆ, ಹಣ್ಣು, ಆಹಾರ ಇತರೆ ಅಗತ್ಯ ವಸ್ತುಗಳೊಂದಿಗೆ ರಾಜಕೀಯ ನೇತಾರರ ಸಂಬಂಧಿಗಳು ಹೋಟೆಲ್ ಗೆ ಆಗಮಿಸಿ ಯೋಗಕ್ಷೇಮ ವಿಚಾರಿಸಿದರು. ಆಗಸ್ಟ್ 5ರಂದು ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಅನುಚ್ಛೇಧ 370 ರದ್ದುಗೊಳಿಸಲಾಗಿತ್ತು. ಆಗಸ್ಟ್ 5ರಿಂದ 50ಕ್ಕೂ ಅಧಿಕ ಸ್ಥಳೀಯ ಮುಖಂಡರನ್ನು ಹೋಟೆಲ್ ನಲ್ಲಿ ಇರಿಸಲಾಗಿದೆ.
Advertisement
Advertisement
ಸೆಂಟೌರ್ ಹೋಟೆಲ್ ನಲ್ಲಿ ಸಜ್ಜಾದ್ ಲೋನ್, ಇಮ್ರಾನ್ ಅನ್ಸಾರಿ, ಯಾಸಿರ್ ರೆಸಿ, ಇಶ್ಫಾಕ್ ಜಬ್ಬಾರ್, ಅಶ್ರಫ್ ಮೀರ್, ಸಲ್ಮಾನ್ ಸಾಗರ್, ಮುಬಾರಕ್ ಗುಲ್, ನಯೀಂ ಅಖ್ತರ್, ಖುರ್ಷಿದ್ ಅಲಂ, ವಾಹಿದ್ ಪಾರಾ, ಶೇಖ್ ಇಮ್ರಾನ್ ಆದಿ ಸೇರಿದಂತೆ 50ಕ್ಕೂ ಅಧಿಕ ನಾಯಕರನ್ನು ಬಂಧನದಲ್ಲಿ ಇರಿಸಲಾಗಿದೆ. ನಾಯಕರನ್ನು ಭೇಟಿಯಾದ ಓರ್ವ ವೃದ್ಧ, ಹೋಟೆಲ್ ಜೈಲಿನಂತೆಯೇ ಇದೆ. ಆದ್ರೆ ನನ್ನ ಮಗ ಆರೋಗ್ಯವಾಗಿದ್ದಾನೆ ಎಂಬುವುದೇ ನನಗೆ ಖುಷಿ ಎಂದಿದ್ದಾರೆ.
Advertisement
ಹೋಟೆಲ್ ಮುಂಭಾಗದ ಗ್ಯಾಲರಿಯಲ್ಲಿ ಮಗನನ್ನು ಭೇಟಿಯಾಗಲು ಅವಕಾಶ ಕಲ್ಪಿಸಲಾಗಿತ್ತು. ಮುಖಂಡರನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದು, ಹೊರಗಡೆ ಏನಾಗ್ತಿದೆ ಎಂಬುದರ ಮಾಹಿತಿ ನೀಡುತ್ತಿಲ್ಲ. ಭೇಟಿಯಾಗಲು ಬರುತ್ತಿರುವ ಸಂಬಂಧಿ ಮತ್ತು ಆಪ್ತರಿಂದಲೇ ರಾಜಕೀಯ ನಾಯಕರು ಕೆಲ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದಾರೆ. ಹೋಟೆಲ್ ನಲ್ಲಿ ಪಿಡಿಪಿ, ನ್ಯಾಶನಲ್ ಕಾಂಗ್ರೆಸ್ ಮತ್ತು ಕಾಂಗ್ರೆಸ್ ವರಿಷ್ಠ ನಾಯಕರಿದ್ದಾರೆ ಎಂದು ಹೋಟೆಲ್ ಒಳಗೆ ಹೋಗಿ ಬಂದ ವೃದ್ಧರೊಬ್ಬರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
Advertisement
ಜೈಲಿನಲ್ಲಿ ಕೈದಿಗಳನ್ನು ಭೇಟಿಯಾಗಲು ಅನುಸರಿಸುವ ಕ್ರಮಗಳನ್ನು ಇಲ್ಲಿಯೂ ಪಾಲನೆ ಮಾಡಲಾಗುತ್ತಿದೆ. ಆಪ್ತರಿಗೆ ಸಿಗರೇಟ್ ಸೇರಿದಂತೆ ಯಾವುದೇ ಆರೋಗ್ಯಕ್ಕೆ ಹಾನಿಕಾರಕ ಉತ್ಪನ್ನಗಳನ್ನು ತೆಗೆದುಕೊಂಡು ಹೋಗಲು ಸಂಬಂಧಿಗಳಿಗೆ ಬಿಡುತ್ತಿಲ್ಲ. ಇನ್ನು ಹೋಟೆಲ್ ನಲ್ಲಿರುವ ಎಲ್ಲ ಟಿವಿಗಳನ್ನು ಬಂದ್ ಮಾಡಲಾಗಿದೆ. ಕೇವಲ ದಿನಪತ್ರಿಕೆಗಳ ಮೂಲಕವೇ ರಾಜಕೀಯ ನೇತಾರರು ಹೊರಗಿನ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.
ಮಾಧ್ಯಮದ ಜೊತೆ ಮಾತನಾಡಿದ ಓರ್ವ ಭದ್ರತಾ ಸಿಬ್ಬಂದಿ, ಎಲ್ಲ ಮುಖಂಡರನ್ನು ಜೈಲಿನಲ್ಲಿರುವ ಕೈದಿಗಳ ರೀತಿಯಲ್ಲಿ ನೋಡಿಕೊಳ್ಳಲಾಗುತ್ತಿದೆ. ಹೋಟೆಲ್ ನಲ್ಲಿರುವ ಎಲ್ಲ ಟಿವಿಗಳು ಬಂದ್ ಆಗಿದ್ದು, ದಿನಪತ್ರಿಕೆ ಮತ್ತು ಕೆಲ ಪುಸ್ತಕಗಳನ್ನು ಓದಿ ನಾಯಕರು ಸಮಯ ಕಳೆಯುತ್ತಿದ್ದಾರೆ ಎಂದು ಹೇಳಿದ್ದಾರೆ.
ನಾನು ಭಾನುವಾರ ಸಂಜೆ 6ಗಂಟೆಗೆ ಹೋಟೆಲ್ ಬಳಿ ಬಂದೆ. ಅಧಿಕಾರಿಗಳು ಪತಿಯನ್ನು ಭೇಟಿಯಾಗಲು ಅವಕಾಶ ಕಲ್ಪಿಸಲಿಲ್ಲ. ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆವರೆಗೆ ಮಾತ್ರ ಭೇಟಿಯ ಸಮಯ ನಿಗದಿಯಾಗಿದೆ ಎಂದು ಹೇಳುತ್ತಾರೆ. ನನ್ನ ಪತಿ ಎಂದೂ ಕಾನೂನಿನ ಉಲ್ಲಂಘನೆ ಮಾಡಿಲ್ಲ. ಆದ್ರೂ ಅವರನ್ನು ಬಂಧಿಸಲಾಗಿದೆ ಎಂದು ಪಿಡಿಪಿ ಶಾಸಕರೊಬ್ಬರ ಪತ್ನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.