ಬೆಂಗಳೂರು : ಜನಸಂಖ್ಯೆ ಮಾಹಿತಿ ಸಂಗ್ರಹ ಮಾಡೋ ಜನಗಣತಿ ಕಾರ್ಯಕ್ಕೆ ರಾಜ್ಯ ಸರ್ಕಾರ ಚಾಲನೆ ನೀಡಿದೆ. ಏಪ್ರಿಲ್ 15 ರಿಂದ ಮೇ 29 ವರೆಗೆ 8ನೇ ಜನಗಣತಿ ಮಾಡಲು ಸರ್ಕಾರ ನಿರ್ಧರಿಸಿದೆ. ಇದೇ ಮೊದಲ ಬಾರಿಗೆ ಮೊಬೈಲ್ ಆಪ್ ಮೂಲಕ ಜನಗಣತಿಗೆ ಸರ್ಕಾರ ಮುಂದಾಗಿದೆ. ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್ ಜನಗಣತಿ ಬಗ್ಗೆ ಮಾಹಿತಿ ನೀಡಿದ್ರು.
2011ರಲ್ಲಿ ರಾಜ್ಯ ಸರ್ಕಾರ 7ನೇ ಜನಗಣತಿ ಮಾಡಿತ್ತು. ಈಗ 9 ವರ್ಷದ ಬಳಿಕ 8ನೇ ಜನಗಣತಿ ಮಾಡಲು ನಿರ್ಧಾರ ಮಾಡಿದೆ. ರಾಜ್ಯದ ಜನಸಂಖ್ಯೆ, ಜಾತಿ, ಕುಟುಂಬದ ಮಾಹಿತಿ, ಅಸ್ತಿಗಳ ವಿವರ ಸೇರಿದಂತೆ ಕುಟುಂಬದ ಸಂಪೂರ್ಣ ಮಾಹಿತಿ ಸಂಗ್ರಹ ಮಾಡೋದು ಈ ಜನಗಣತಿಯ ವಿಶೇಷ.
Advertisement
ಈ ಜನಗಣತಿ ಇನ್ನೊಂದು ವಿಶೇಷ ಅಂದ್ರೆ ಇಡೀ ಜನಗಣತಿ ಮೊಬೈಲ್ ಆಪ್ ಮೂಲಕವೇ ನಡೆಯಲಿದೆ. ಇದಕ್ಕಾಗಿ ವಿಶೇಷ ಪರಿಣಿತರ ತಂಡ ರಚನೆ ಮಾಡಲಾಗಿದೆ. ದೇಶದಲ್ಲಿ ಮೊದಲ ಬಾರಿಗೆ ಇಂತಹ ವ್ಯವಸ್ಥೆ ಜಾರಿಗೆ ತರೋದಕ್ಕೆ ರಾಜ್ಯ ಸರ್ಕಾರ ಮುಂದಾಗಿದ್ದು, ಕಾಗದ ರಹಿತ ಸಮೀಕ್ಷೆ ಇದಾಗಲಿದೆ. ಎಲ್ಲಾ ಜಿಲ್ಲಾಧಿಕಾರಿಗಳಿಗೆ ಮೊಬೈಲ್ ಆಪ್ ನೀಡುವ ಮೂಲಕ ಜನಗಣತಿ ನಡೆಸಲಾಗುತ್ತೆ. ಜನಗಣತಿ ರೂಪುರೇಷೆಗಳನ್ನ ಸಿದ್ಧ ಮಾಡಲಾಗ್ತಿದ್ದು, ಆದಷ್ಟು ಬೇಗ ಜನಗಣತಿ ಮಾಹಿತಿ ಸಾರ್ವಜನಿಕರಿಗೆ ಲಭ್ಯವಾಗಲಿದೆ.