ಇದುವರೆಗೂ ಭಿನ್ನ ಪಥದ ಮೂಲಕ ತಮ್ಮದೇ ಆದ ಛಾಪು ಮೂಡಿಸಿರುವವರು ಅಶೋಕ್ ಕಡಬ. ಇದೀಗ ಅವರು ‘ಸತ್ಯಂ’ (Sathyam Film) ಚಿತ್ರದ ಮೂಲಕ ಮತ್ತೊಂದು ಜಾಡಿನತ್ತ ಹೊರಳಿಕೊಂಡಿರುವ ಸ್ಪಷ್ಟ ಸೂಚನೆಯೊಂದು ಸಿಕ್ಕಿಬಿಟ್ಟಿದೆ. ಈ ಹಿಂದೆ ಸತ್ಯಂ ಟೀಸರ್ ಬಿಡುಗಡೆಯಾದಾಗಲೇ ಅದು ಸ್ಪಷ್ಟವಾಗಿತ್ತು. ಆ ಟೀಸರ್‌ಗೆ ಮಿಲಿಯನ್ನುಗಟ್ಟಲೆ ವೀಕ್ಷಣೆಗಳು ಸಿಕ್ಕಿ, ಎಲ್ಲ ಕಡೆಗಳಿಂದಲೂ ಮೆಚ್ಚುಗೆಗಳೂ ವ್ಯಕ್ತವಾಗಿತ್ತು. ಇದೀಗ ಬಿಡುಗಡೆಯ ಹೊಸ್ತಿಲಿನಲ್ಲಿರುವ ‘ಸತ್ಯಂ’ ಸೆನ್ಸಾರ್ ಸರ್ಟಿಫಿಕೇಟ್ ಪಡೆದುಕೊಂಡಿದೆ. ಈ ವಿಚಾರವನ್ನು ನಿರ್ಮಾಪಕರಾದ ಮಹಾಂತೇಶ್ ವಿ.ಕೆ ಹಂಚಿಕೊಂಡಿದ್ದಾರೆ. ಯು\ಎ ಸರ್ಟಿಫಿಕೇಟಿನೊಂದಿಗೆ, ಸೆನ್ಸಾರ್ ಅಧಿಕಾರಿಗಳ ತುಂಬು ಮೆಚ್ಚುಗೆಯೂ ಎದುರುಗೊಂಡಿರೋದರಿಂದ ಚಿತ್ರತಂಡ ಖುಷಿಗೊಂಡಿದೆ.
Advertisement
ಇದು ಗಣಪ ನಂತರ ಸಂತೋಷ್ ಬಾಲರಾಜ್ (Santhosh Balaraj) ನಾಯಕನಾಗಿ ನಟಿಸಿರುವ ಚಿತ್ರ. ‘ಕನ್ನಡತಿ’ ಸೀರಿಯಲ್ ಖ್ಯಾತಿಯ ರಂಜನಿ ರಾಘವನ್ (Ranjani Raghavan) ನಾಯಕಿಯಾಗಿ ಜೊತೆಯಾಗಿದ್ದಾರೆ. ಈ ಹಿಂದೆ ರಂಗಿತರಂಗ, ಕಾಂತಾರ ಚಿತ್ರಗಳಲ್ಲಿ ತುಳುನಾಡಿನ ದೈವಾರಾಧನೆಯ ಕಥೆಯಿತ್ತು. ಆ ಎರಡು ಸಿನಿಮಾಗಳ ದೊಡ್ಡ ಮಟ್ಟದ ಗೆಲುವಿನ ಶಕ್ತಿಯೂ ಅದೇ. ಅಂಥಾದ್ದೊಂದು ನೆಲದ ಘಮಲಿನ ಕಥೆಯನ್ನೊಳಗೊಂಡಿರುವ ಚಿತ್ರ ಸತ್ಯಂ. ಹಾಗೆಂದ ಮಾತ್ರಕ್ಕೆ ಇದು ಆ ಎರಡು ಸಿನಿಮಾಗಳ ಗೆಲುವಿನ ಪ್ರಭೆಯಲ್ಲಿ ರೂಪುಗೊಂಡಿರುವ ಚಿತ್ರ ಅಂದುಕೊಳ್ಳುವಂತಿಲ್ಲ. ಕಾಂತಾರಕ್ಕೂ ಮುನ್ನವೇ ಸತ್ಯಂ ಕಥೆ ಸಿದ್ಧವಾಗಿತ್ತೆಂಬ ವಿಚಾರವನ್ನು ಖುದ್ದು ನಿರ್ದೇಶಕರು ಖಚಿತಪಡಿಸಿದ್ದಾರೆ. ಇಂಥಾ ಭಿನ್ನ ಕಥಾನಕವನ್ನು ಕಂಡು ಸೆನ್ಸಾರ್ ಅಧಿಕಾರಿಗಳು ಖುಷಿಗೊಂಡಿದ್ದಾರೆ. ಒಂದು ಅತ್ಯಪರೂಪದ ಚಿತ್ರ ನೋಡಿದ ತುಂಬು ಖುಷಿಯನ್ನು ವ್ಯಕ್ತಪಡಿಸಿದ್ದಾರೆ.
Advertisement
Advertisement
ಸಾಮಾನ್ಯವಾಗಿ, ಸೆನ್ಸಾರ್ ಅಧಿಕಾರಿಗಳು ಅದೆಷ್ಟೋ ಸಿನಿಮಾಗಳನ್ನು ವೀಕ್ಷಿಸುತ್ತಾರೆ. ಅವರ ಪಾಲಿಗೆ ಅದೊಂದು ಯಾಂತ್ರಿಕ ಕೆಲಸದಂತಾಗಿ ಬಿಡುವ ಸಾಧ್ಯತೆಗಳೇ ಹೆಚ್ಚು. ಅಂಥಾದ್ದರ ನಡುವೆ ಒಂದು ಸಿನಿಮಾ ಎಲ್ಲ ರೀತಿಯಿಂದಲೂ ಹೊಸತನದಿಂದ ಕಂಗೊಳಿಸಿದಾಗ ಅವರಲ್ಲೊಂದು ಖುಷಿ ಮೂಡಿಕೊಳ್ಳುತ್ತೆ. ಅಂಥಾದ್ದೊಂದು ಅನುಭೂತಿಯನ್ನು ಅಶೋಕ್ ಕಡಬ ನಿರ್ದೇಶನದ ಸತ್ಯಂ ಚಿತ್ರ ಕೊಡಮಾಡಿದೆ. ಹೀಗೆ ಒಟ್ಟಾರೆ ಚಿತ್ರದ ಬಗ್ಗೆ ತುಂಬು ಮೆಚ್ಚುಗೆ ಸೂಚಿಸುತ್ತಲೇ, ಸೆನ್ಸಾರ್ ಮಂಡಳಿ ಕಡೆಯಿಂದ ಸತ್ಯಂಗೆ ಯು\ಎ ಸರ್ಟಿಫಿಕೇಟು ಸಿಕ್ಕಿದೆ. ಅಂದಹಾಗೆ, ಯಾವುದೇ ಕಟ್, ಎಡಿಟ್ ಇಲ್ಲದೆಯೇ ಈ ಸಿನಿಮಾ ಸೆನ್ಸಾರ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದೆ.
Advertisement
ಇದುವರೆಗೂ ನಿರ್ದೇಶಕರಾಗಿ ಒಂದಷ್ಟು ಪ್ರಯೋಗಗಳನ್ನು ಮಾಡುತ್ತಾ ಬಂದವರು, ಅದರಲ್ಲಿಯೂ ತಮ್ಮತನದ ಮೂಲಕ ಗೆಲುವು ದಾಖಲಿಸಿರುವವರು ಅಶೋಕ್ ಕಡಬ. ಇಂಥಾ ನಿರ್ದೇಶಕರು ಪಕ್ಕಾ ಮಾಸ್ ಕಥನದತ್ತ ಹೊರಳಿದಾಗ ಸಹಜವಾಗಿಯೇ ಕುತೂಹಲ ಮೂಡಿಕೊಳ್ಳುತ್ತೆ. ಅಶೋಕ್ ಕಡಬ ‘ಸತ್ಯಂ’ ಎಂಬ ಪಕ್ಕಾ ಮಾಸ್ ಥ್ರಿಲ್ಲರ್ ಕಥಾನಕವನ್ನು ಕೈಗೆತ್ತಿಕೊಂಡಾಗಲೂ ಇಂಥಾದ್ದೇ ಛಳುಕು ಮೂಡಿಕೊಂಡಿತ್ತು. ಅದು ಟೀಸರ್ ಬಿಡುಗಡೆಯಾದಾಕ್ಷಣ ಮತ್ತಷ್ಟು ತೀವ್ರಗೊಂಡಿತ್ತು. ಮಿಲಿಯನ್ನುಗಟ್ಟಲೆ ವೀವ್ಸ್ ಪಡೆದುಕೊಳ್ಳುವ ಮೂಲಕ ಸತ್ಯಂ ಸೃಷ್ಟಿಸಿದ್ದ ಸಂಚಲನ ಸಣ್ಣದ್ದೇನಲ್ಲ. ವಿಶೇಷವೆಂದರೆ, ಈ ಸಿನಿಮಾದಲ್ಲಿಯೂ ಪಂಜುರ್ಲಿ ದೈವದ ಆರಾಧನೆಯ ಕಥೆಯಿದೆ. ಅದರ ಸುತ್ತಾ ಮೈನವಿರೇಳಿಸುವ, ಸಲೀಸಾಗಿ ಅಂದಾಜಿಸಲಾಗದ ಕಥನವನ್ನು ಅಶೋಕ್ ಕಡಬ ದೃಷ್ಯವಾಗಿಸಿದ್ದಾರಂತೆ.
ಶ್ರೀ ಮಾತಾ ಕ್ರಿಯೇಷನ್ಸ್ ಬ್ಯಾನರಿನಡಿಯಲ್ಲಿ ಮಹಾಂತೇಶ್ ವಿ.ಕೆ ನಿರ್ಮಾಣ ಮಾಡಿರುವ ‘ಸತ್ಯಂ’ ಕುಟುಂಬ ಸಮೇತರಾಗಿ ನೋಡುವ, ಎಲ್ಲ ವರ್ಗದ ಪ್ರೇಕ್ಷಕರನ್ನೂ ಆವರಿಸಿಕೊಳ್ಳುವ ಗುಣ ಹೊಂದಿರುವ ಚಿತ್ರವಂತೆ. ವಿಶೇಷವೆಂದರೆ, ಕೆಜಿಎಫ್ ಖ್ಯಾತಿಯ ರವಿ ಬಸ್ರೂರು ಸತ್ಯಂಗೂ ಸಂಗೀತ ನಿರ್ದೇಶನ ಮಾಡಿದ್ದಾರೆ. ಸಿನೆಟೆಕ್ ಸೂರಿ ಛಾಯಾಗ್ರಹಣ, ಸಂತೋಷ್ ಬಾಲರಾಜ್, ರಂಜನಿ ರಾಘವನ್, ಸುಮನ್, ಸೈಯಾಜಿ ಶಿಂಧೆ, ಪವಿತ್ರಾ ಲೋಕೇಶ್, ಅವಿನಾಶ್, ವಿನಯಾ ಪ್ರಸಾದ್, ಮುಖ್ಯಮಂತ್ರಿ ಚಂದ್ರು, ಎಂ.ಎನ್ ಲಕ್ಷ್ಮಿದೇವಿ, ಶೃಂಗೇರಿ ರಾಮಣ್ಣ, ತನುಶ್ರೀ, ಎಂ.ಎಸ್ ಉಮೇಶ್, ಬಸವರಾಜ್ ಕಟ್ಟಿ, ಮೀನಾಕ್ಷಿ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ. ಇದೀಗ ಪೋಸ್ಟ್ ಪ್ರೊಡಕ್ಷನ್ ಕೆಲಸ ಕಾರ್ಯ ಸಂಪೂರ್ಣವಾಗಿ ಮುಗಿದಿದೆ. ಚುನಾವಣಾ ಭರಾಟೆ, ಐಪಿಎಲ್ ಹಂಗಾಮದ ನಡುವೆ ತಿಂಗಳೊಪ್ಪತ್ತಿನಲ್ಲಿಯೇ ಸತ್ಯಂ ಅನ್ನು ತೆರೆಗಾಣಿಸಲು ಚಿತ್ರ ತಂಡ ತಯಾರಿ ನಡೆಸುತ್ತಿದೆ. ಅತೀ ಶೀಘ್ರದಲ್ಲಿ ‘ಸತ್ಯಂ’ ಬಿಡುಗಡೆ ದಿನಾಂಕ ಜಾಹೀರಾಗಲಿದೆ.