ಚಂಢೀಗಡ: ತಂದೆ-ತಾಯಿ ಜೊತೆ ಮಲಗಿದ್ದ ಪುಟ್ಟ ಕಂದಮ್ಮನನ್ನು ವ್ಯಕ್ತಿಯೊಬ್ಬ ಅಪಹರಣ ಮಾಡಲು ಯತ್ನಿಸಿದ ಘಟನೆ ಪಂಜಾಬಿನ ಲೂಧಿಯಾನದಲ್ಲಿ ನಡೆದಿದೆ.
ವ್ಯಕ್ತಿ 4 ವರ್ಷದ ಹೆಣ್ಣು ಮಗುವನ್ನು ಕಿಡ್ನಾಪ್ ಮಾಡಲು ಯತ್ನಿಸಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆ ಸಂಬಂಧ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ವಿಡಿಯೋದಲ್ಲೇನಿದೆ..?
ಕಳೆದ ರಾತ್ರಿ ಸೈಕಲ್ ಏರಿ ಬಂದ ವ್ಯಾಪಾರಿಯೊಬ್ಬ ಮನೆಯ ಹೊರಗಡೆ ತಂದೆ-ತಾಯಿ ಜೊತೆ ಮಂಚದಲ್ಲಿ ಮಲಗಿದ್ದ ಪುಟ್ಟ ಕಂದಮ್ಮನನ್ನು ಮೆಲ್ಲನೆ ಎತ್ತಿಕೊಂಡು ಸೈಕಲ್ ನಲ್ಲಿ ಮಲಗಿಸುತ್ತಾನೆ. ಈ ವೇಳೆ ಮಗುವಿನ ತಾಯಿ ಎಚ್ಚರಗೊಂಡು ಮಗುವನ್ನು ಆತನಿಂದ ಎಳೆದುಕೊಳ್ಳುತ್ತಾರೆ. ಇಷಾಗುವಾಗ ಮಗುವಿನ ತಂದೆಯೂ ಎಚ್ಚರಗೊಳ್ಳುತ್ತಾರೆ. ತಂದೆ ಎಚ್ಚರಗೊಂಡಂತೆಯೇ ವ್ಯಾಪಾರಿ ಸ್ಥಳದಿಂದ ಸೈಕಲ್ ಮೂಲಕ ಪರಾರಿಯಾಗಲು ಯತ್ನಿಸುತ್ತಾನೆ. ಈ ಸಂದರ್ಭದಲ್ಲಿ ಮಗುವಿನ ತಂದೆ ಕಳ್ಳನನ್ನು ಬೆನ್ನಟ್ಟುವುದನ್ನು ವಿಡಿಯೋದಲ್ಲಿ ಕಾಣಬಹುದು. ಮಗು ಕಳ್ಳತನ ಮಾಡಲು ಯತ್ನಿಸಿದ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳೀಯರು ಸೇರಿ ಆರೋಪಿ ವ್ಯಾಪಾರಿಯನ್ನು ಹಿಡಿದು ಪೊಲೀಸರ ಕೈಗೆ ಒಪ್ಪಿಸಿದ್ದಾರೆ.
#WATCH Punjab: A man attempts to steal a 4-year-old child while she was sleeping with her family members outside her residence in Ludhiana’s Rishi Nagar area. However, the attempt was foiled as family members woke up and rescued the child. The accused has been arrested. (17.09) pic.twitter.com/DB6ZfXnSt7
— ANI (@ANI) September 18, 2019
ಸುಮಾರು 40 ವರ್ಷ ವಯಸ್ಸಿನ ಆರೋಪಿ ಮೊದಲು ಕುಟುಂಬ ಮಲಗಿದೆಯೋ ಇಲ್ಲವೋ ಎಂದು ಬಂದು ಪರಿಶೀಲಿಸಿ ಹೋಗಿದ್ದಾನೆ. ಸ್ವಲ್ಪ ಹೊತ್ತಿನ ನಂತರ ತನ್ನ ಸೈಕಲ್ ಸಮೇತ ಬಂದು ಮಗುವನ್ನು ಅಪಹರಿಸುವ ಪ್ಲಾನ್ ಮಾಡಿದ್ದಾನೆ. ಆರೋಪಿ ಮಗುವನ್ನು ಎತ್ತಿಕೊಳ್ಳುತ್ತಿದ್ದಂತೆಯೇ ಅದರ ತಾಯಿ ಎಚ್ಚರಗೊಂಡು ಕಿರುಚಾಡಿದ ಪರಿಣಾಮ ಸ್ಥಳೀಯರು ಆರೋಪಿಯನ್ನು ಹಿಡಿದಿದ್ದಾರೆ ಎಂದು ಹಿರಿಯ ಪೊಲೀಸ್ ಆದಿಕಾರಿ ರಮನ್ ದೀಪ್ ಸಿಂಗ್ ಅವರು ರಾಷ್ಟ್ರೀಯ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.
ಆರೋಪಿ ಮಗುವನ್ನು ಯಾಕೆ ಕಿಡ್ನಾಪ್ ಮಾಡಲು ಯತ್ನಿಸಿದ್ದಾನೆ ಎಂಬುದರ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ. ಆದರೆ ಸಿಸಿಟಿವಿ ದೃಶ್ಯವನ್ನಾಧರಿಸಿ ಮಗು ಕಳ್ಳತನ ಸಂಬಂಧ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.