ಚೆನ್ನೈ: ಇತ್ತೀಚೆಗೆ ತಮಿಳುನಾಡಿನ (Tamil Nadu) ಕಡಲೂರಿನಲ್ಲಿ ಶಾಲಾ ವಾಹನ (School Bus Accident) ಹಾಗೂ ರೈಲಿನ (Train) ನಡುವೆ ಸಂಭವಿಸಿದ್ದ ಅಪಘಾತದಿಂದ ಎಚ್ಚೆತ್ತ ರೈಲ್ವೇ ಇಲಾಖೆ (Indian Railways) ಸುರಕ್ಷತಾ ಕ್ರಮಗಳನ್ನು ಬಿಗಿಗೊಳಿಸಲು ಮುಂದಾಗಿದೆ. ಕ್ರಾಸಿಂಗ್‌ಗಳಲ್ಲಿನ ಸಿಸಿಟಿವಿಗಳು ಹಾಗೂ ಸ್ಪೀಡ್ ಬ್ರೇಕರ್‌ಗಳ ಮಾಹಿತಿ ಕಲೆಹಾಕಲು ಹಾಗೂ ಅಗತ್ಯ ಕ್ರಮಕೈಗೊಳ್ಳಲು ಇಲಾಖೆ ಮುಂದಾಗಿದೆ.
ನೈಜ-ಸಮಯದ ಮೇಲ್ವಿಚಾರಣೆ ಮತ್ತು ಮಾಹಿತಿ ಸಂಗ್ರಹಕ್ಕಾಗಿ ಎಲ್ಲಾ ಲೆವೆಲ್ ಕ್ರಾಸಿಂಗ್ ಗೇಟ್‌ಗಳಲ್ಲಿ ಸೌರಶಕ್ತಿ ಚಾಲಿತ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತದೆ. ಹೈ-ಸ್ಪೀಡ್ ರೈಲು ಮಾರ್ಗಗಳಲ್ಲಿ, ಸ್ವಯಂಚಾಲಿತ ಗೇಟ್‌ಗಳ ಇಂಟರ್‌ಲಾಕಿಂಗ್ ಮಿತಿಯನ್ನು 20,000 ರಿಂದ 10,000 ರೈಲು ಘಟಕಗಳಿಗೆ ಇಳಿಸಲಾಗುತ್ತದೆ. ಗೇಟ್‌ಗಳಲ್ಲಿ ಸ್ಪೀಡ್ ಬ್ರೇಕರ್‌ಗಳು ಮತ್ತು ಎಚ್ಚರಿಕೆ ಫಲಕಗಳನ್ನು ಮರುವಿನ್ಯಾಸಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಶಾಲಾ ವಾಹನಕ್ಕೆ ರೈಲು ಡಿಕ್ಕಿ – 3 ವಿದ್ಯಾರ್ಥಿಗಳು ಸಾವು, ಹಲವರಿಗೆ ಗಾಯ
ಸಾರ್ವಜನಿಕರಿಂದ ಒತ್ತಡವನ್ನು ಎದುರಿಸುತ್ತಿರುವ ಗೇಟ್‌ಕೀಪರ್‌ಗಳ ಬೆಂಬಲಕ್ಕೆ ರೈಲ್ವೆ ರಕ್ಷಣಾ ಪಡೆ (RPF) ಮತ್ತು ಗೃಹರಕ್ಷಕ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತದೆ. ಈ ಎಲ್ಲಾ ಕ್ರಮಗಳು ಪ್ರಸ್ತುತ ನಡೆಯುತ್ತಿರುವ 15 ದಿನಗಳ ರಾಷ್ಟ್ರವ್ಯಾಪಿ ಸುರಕ್ಷತಾ ತಪಾಸಣೆ ಡ್ರೈವ್‌ನ ಜೊತೆಗೆ ನಡೆಯಲಿದೆ. ಕಡಲೂರು ಘಟನೆಯಂತಹ ದುರಂತಗಳು ಪುನರಾವರ್ತನೆಯಾಗದಂತೆ ತಡೆಯಲು, ಅಂತಹ ಕ್ರಾಸಿಂಗ್‌ಗಳಲ್ಲಿ ಹೆಚ್ಚಿನ ಗಮನ ವಹಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜು.8ರಂದು ತಮಿಳುನಾಡಿನ ಕಡಲೂರು ಜಿಲ್ಲೆಯ ಸೆಮ್ಮಂಗುಪ್ಪಂನಲ್ಲಿ ಶಾಲಾ ಬಸ್ ಹಾಗೂ ರೈಲಿನ ನಡುವೆ ಅಪಘಾತ ಸಂಭವಿಸಿತ್ತು. ಈ ಅಪಘಾತದಲ್ಲಿ ಮೂವರು ವಿದ್ಯಾರ್ಥಿಗಳು ಸಾವಿಗೀಡಾಗಿದ್ದರು. ಈ ಅವಘಡದಲ್ಲಿ ಹಲವು ವಿದ್ಯಾರ್ಥಿಗಳು ಗಾಯಗೊಂಡಿದ್ದರು. ಇದನ್ನೂ ಓದಿ: ಏಕಾಏಕಿ ಕಾಣಿಸಿಕೊಂಡ ಎದೆನೋವು – ಹೃದಯಾಘಾತಕ್ಕೆ ಲಾರಿ ಚಾಲಕ ಬಲಿ