– ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ ಕಟ್ಟುನಿಟ್ಟಿನ ಕ್ರಮ
ನವದೆಹಲಿ: ‘ಐದೇ ನಿಮಿಷದಲ್ಲಿ ಆಟೋ ಅಥವಾ ಪಡೆಯಿರಿ ಅಥವಾ 50 ರೂ. ಪಡೆಯಿರಿ’ (AUTO IN 5 MIN OR GET Rs 50) ಹೀಗೆ ಆಫರ್ ನೀಡಿ ಗ್ರಾಹಕರನ್ನು ವಂಚಿಸುತ್ತಿದ್ದ ‘ರಾಪಿಡೋ’ (Rapido) ಸಂಸ್ಥೆಗೆ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (CCPA) ಬರೋಬ್ಬರಿ 10 ಲಕ್ಷ ರೂ. ದಂಡ ವಿಧಿಸುವ ಮೂಲಕ ಕಠಿಣ ಕ್ರಮ ಕೈಗೊಂಡಿದೆ. ಇಂಥ ಮೋಸದ ಜಾಹೀರಾತು ನೀಡುವಂಥ ಸಂಸ್ಥೆಗಳಿಗೆ ಈ ಮೂಲಕ ಎಚ್ಚರಿಕೆ ನೀಡಿದೆ.
ಸದಾ ಗ್ರಾಹಕರ ದಾರಿ ತಪ್ಪಿಸುವ ಜಾಹೀರಾತು ನೀಡಿ ವಂಚಿಸುತ್ತಿದ್ದ ಕಾರಣಕ್ಕೆ ರಾಪಿಡೋ ಸಂಸ್ಥೆ ವಿರುದ್ಧ ಅತ್ಯಧಿಕ ದೂರುಗಳು ಬಂದಿದ್ದರಿಂದ ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ ಸಚಿವ ಪ್ರಹ್ಲಾದ್ ಜೋಶಿ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚಿಸಿದ್ದರು. ಅದರಂತೆ ಕಾರ್ಯಾಚರಣೆಗಿಳಿದ ಸಿಸಿಪಿಎ ಪರಿಶೀಲನೆ ನಡೆಸಿ ಕ್ರಮ ಕೈಗೊಂಡಿದ್ದು, ತಕ್ಷಣದಿಂದಲೇ ಇಂಥ ದಾರಿ ತಪ್ಪಿಸುವ ಜಾಹೀರಾತುಗಳನ್ನು ನಿಲ್ಲಿಸುವಂತೆ ಆದೇಶ ಸಹ ನೀಡಿದೆ.
ಗ್ರಾಹಕರ ಹಕ್ಕುಗಳ ರಕ್ಷಣೆ ವಿಚಾರದಲ್ಲಿ ಒಂದು ಹೆಜ್ಜೆ ಮುಂದಿರುವ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ ಜನರ ದಾರಿ ತಪ್ಪಿಸುವ ಜಾಹೀರಾತು ಹಾಗೂ ಅನ್ಯಾಯದ ವ್ಯಾಪಾರ ಪದ್ಧತಿ ಅನುಸರಿಸುತ್ತಿದ್ದ ಕಾರಣಕ್ಕೆ ರಾಪಿಡೋ ಟ್ರಾನ್ಸ್ಪೋರ್ಟೇಷನ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್‌ಗೆ 10 ಲಕ್ಷ ರೂ. ದಂಡ ವಿಧಿಸಿದೆ.
ಮೋಸದ ಜಾಹೀರಾತು ನಿಲ್ಲಿಸಲು ರಾಪಿಡೋಗೆ ಸ್ಪಷ್ಟ ನಿರ್ದೇಶನ:
‘5 ನಿಮಿಷದಲ್ಲಿ ಆಟೋ ಸೇವೆ ಅಥವಾ 50 ರೂ. ಪಡೆಯಿರಿ’ ಹಾಗೂ ‘ಗ್ಯಾರಂಟಿ ಆಟೋ’ ಎಂದೆಲ್ಲಾ ಭರವಸೆ ನೀಡುತ್ತಿದ್ದ ರಾಪಿಡೋ ಜಾಹೀರಾತು ಮತ್ತು ಸಂಬಂಧಿತ ದೂರುಗಳನ್ನು ಗಂಭೀರವಾಗಿ ಪರಿಗಣಿಸಿದ ಸಿಸಿಪಿಎ ಇದೊಂದು ಮೋಸದ ಜಾಹೀರಾತು ಎಂಬುದನ್ನು ಖಚಿತಪಡಿಸಿಕೊಂಡಿದೆ. ಈ ಜಾಹೀರಾತು ವಂಚನೆಯಿಂದ ಕೂಡಿದ್ದು, ಜನರ ದಾರಿ ತಪ್ಪಿಸುವುದಾಗಿದೆ. ಅಲ್ಲದೇ, ಗ್ರಾಹಕರನ್ನು ಮೋಸಗೊಳಿಸುವುದಾಗಿದೆ. ಹಾಗಾಗಿ ತಕ್ಷಣವೇ ಇದನ್ನು ನಿಲ್ಲಿಸುವಂತೆ ರಾಪಿಡೋಗೆ ಸ್ಪಷ್ಟ ನಿರ್ದೇಶನ ನೀಡಿದೆ.
ಗ್ರಾಹಕರಿಂದ 1799 ದೂರುಗಳು:
ರಾಪಿಡೋ ಸಂಸ್ಥೆಯ ಮೋಸದ ಜಾಹೀರಾತು ವಿರುದ್ಧ ರಾಷ್ಟ್ರೀಯ ಗ್ರಾಹಕ ಸಹಾಯವಾಣಿ (ಎನ್‌ಸಿಹೆಚ್) ಮೂಲಕ ಅತ್ಯಧಿಕ ದೂರುಗಳು ದಾಖಲಾಗಿವೆ. 2023ರ ಏಪ್ರಿಲ್‌ನಿಂದ 2024ರ ಮೇ ವರೆಗೆ 575 ದೂರುಗಳು ಬಂದಿವೆ. 2024 ಜೂನ್‌ನಿಂದ 2025ರ ಜುಲೈವರೆಗೆ ಹಿಂದಿನಕ್ಕಿಂತ ದುಪ್ಟಟ್ಟು ಅಂದರೆ 1,224 ದೂರುಗಳು ಬಂದಿವೆ. ಹೀಗಾಗಿ ಸಚಿವ ಪ್ರಹ್ಲಾದ್ ಜೋಶಿ ಅವರು ಇದನ್ನು ಗಂಭೀರವಾಗಿ ಪರಿಗಣಿಸಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವಂತೆ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರಕ್ಕೆ ಸೂಚನೆ ನೀಡಿದ್ದರು.
ಸಿಸಿಪಿಎ ತನಿಖೆ ವೇಳೆ ರಾಪಿಡೋ ಜಾಹೀರಾತುಗಳಲ್ಲಿ ಟಿ&ಸಿ ಅನ್ವಯ ಎಂಬುದು ಓದಲಾಗದಂಥ ಅತ್ಯಂತ ಚಿಕ್ಕ ಗಾತ್ರದ ಅಕ್ಷರದಲ್ಲಿ ಪ್ರದರ್ಶಿಸಲ್ಪಟ್ಟಿತ್ತು. ಅಲ್ಲದೇ, ಭರವಸೆ ನೀಡಿದಂತೆ 50 ರೂ. ಮೊತ್ತವೂ ಸಿಗುತ್ತಿರಲಿಲ್ಲ. ಬದಲಿಗೆ ‘ರಾಪಿಡೋ ನಾಣ್ಯಗಳು’ ರೂಪದಲ್ಲಿ ಅದೂ ಕೇವಲ 7 ದಿನಗಳ ಮಾನ್ಯತೆ ಹೊಂದಿತ್ತು. ಇದಲ್ಲದೆ, ಈ ಆಫರ್ ಅನ್ನು ‘ವೈಯಕ್ತಿಕ ಕ್ಯಾಪ್ಟನ್‌ಗಳು ನೀಡುತ್ತಿದ್ದಾರೆಯೇ ಹೊರತು ರಾಪಿಡೋ’ ಅಲ್ಲ ಎಂದು ಹೇಳಿ ಕಂಪನಿ ಹೊಣೆಗಾರಿಕೆಯಿಂದ ಜಾರಿಕೊಳ್ಳತೊಡಗಿತ್ತು.
ರಾಪಿಡೋ ವಿರುದ್ಧ ಗ್ರಾಹಕರಿಂದ ಹೆಚ್ಚಿನ ಸಂಖ್ಯೆಯಲ್ಲಿ ದೂರುಗಳು ಬರುತ್ತಲೇ ಇದ್ದವು. ಸೇವಾ ನ್ಯೂನತೆ, ಪಾವತಿಸಿದ ಮೊತ್ತ ಮರುಪಾವತಿ ಮಾಡದೇ ಇರುವುದು, ಅಧಿಕ ಶುಲ್ಕ ವಿಧಿಸುವುದು, ಭರವಸೆ ನೀಡಿದಂತೆ ಸೇವೆ ಒದಗಿಸುವಲ್ಲಿ ವಿಫಲ ಹಾಗೂ ಖಾತರಿಪಡಿಸಿದ ‘5 ನಿಮಿಷ’ ಸೇವೆ ಪೂರೈಸದಿರುವ ಬಗ್ಗೆ ದೂರುಗಳು ವ್ಯಾಪಕವಾಗಿದ್ದವು. ಈ ಬಗ್ಗೆ ಸಂಸ್ಥೆಯ ಗಮನ ಸೆಳೆದರೂ ಪರಿಹರಿಸದೆ ಕಡೆಗಣಿಸಿತ್ತು ರಾಪಿಡೋ.
ದೊಡ್ಡ ದೊಡ್ಡ ಭರವಸೆ ನೀಡುವ ಅಥವಾ ಷರತ್ತುಗಳನ್ನು ವಿವರಿಸದೆ ‘ಖಾತರಿ’ ಅಥವಾ ‘ಖಚಿತ’ದಂತಹ ನುಡಿಗಟ್ಟು ಬಳಸುವ ಜಾಹೀರಾತುಗಳ ಬಗ್ಗೆ ಗ್ರಾಹಕರು ಜಾಗರೂಕರಾಗಿರಬೇಕು ಎಂದು ಸಿಸಿಪಿಎ ಸಲಹೆ ನೀಡಿದೆ. ಅಲ್ಲದೇ, ಇಂಥ ದಾರಿ ತಪ್ಪಿಸುವ ಜಾಹೀರಾತು, ಅನ್ಯಾಯದ ವ್ಯಾಪಾರ ಪದ್ಧತಿಗಳಿಂದ ಸಮಸ್ಯೆ ಎದುರಿಸಿದರೆ ರಾಷ್ಟ್ರೀಯ ಗ್ರಾಹಕ ಸಹಾಯವಾಣಿ ‘1915’ ಕರೆ ಮಾಡಿ ದೂರು ಸಲ್ಲಿಸಲು ಅಥವಾ ಎನ್‌ಸಿಹೆಚ್ ಅಪ್ಲಿಕೇಶನ್ ಅಥವಾ ವೆಬ್‌ಸೈಟ್ ಮೂಲಕ ದೂರು ಸಲ್ಲಿಸುವಂತೆ ತಿಳಿಸಿದೆ.