– ವಿದ್ಯಾರ್ಥಿಯಾಗಿದ್ದಾಗ ಕಾರ್ಲ್ ಮಾರ್ಕ್ಸ್ ಅಭಿಮಾನಿ
– 35 ಸಾವಿರ ನೀಡಿ ದೂರವಾಣಿ ಖರೀದಿ
– ಬೆಂಗ್ಳೂರಲ್ಲಿ 5 ಲಕ್ಷಕ್ಕೆ 1 ಸೈಟ್
ಬೆಂಗಳೂರು: ಕೆಫೆ ಕಾಫಿ ಡೇ ಮಾಲೀಕ ಸಿದ್ದಾರ್ಥ್ ಯುವಕರಾಗಿದ್ದಾಗ ಭಾರತೀಯ ಸೇನೆ ಸೇರುವ ಕನಸು ಕಂಡು ಪರೀಕ್ಷೆ ಸಹ ಬರೆದಿದ್ದರು. ಆದರೆ ಸೇನೆ ಸೇರುವ ಕನಸು ನನಸಾಗಲಿಲ್ಲ. ನಾನೊಬ್ಬ ಉದ್ಯಮಿ ಆಗುತ್ತೇನೆ ಎನ್ನುವ ಕನಸನ್ನು ಕಾಣದ ಸಿದ್ದಾರ್ಥ್ ಹಂತ ಹಂತವಾಗಿ ಬೆಳೆಯುತ್ತಾ ದೇಶದ ಅತಿ ದೊಡ್ಡ ಕಾಫಿ ಉದ್ಯಮಿಯಾಗಿ ಬೆಳೆದದ್ದೇ ಒಂದು ರೋಚಕ ಕಥೆ.
ಕಾನ್ಪುರದ ಐಐಟಿನಲ್ಲಿ ನಡೆದ 2016ರ ಇ-ಸಮಿತ್ ಕಾರ್ಯಕ್ರಮದಲ್ಲಿ ವಿ.ಜಿ ಸಿದ್ಧಾರ್ಥ್ ಅವರು ತಾವು ಉದ್ಯಮಿಯಾಗಲು ಏನು ಪ್ರೇರಣೆ ಎನ್ನುವುದರ ಬಗ್ಗೆ ಹಂಚಿಕೊಂಡಿದ್ದರು.
Advertisement
Advertisement
ನಾನು 18 ವರ್ಷದವನಿದ್ದಾಗ ಉದ್ಯಮಿ ಆಗುತ್ತೇನೆ ಎಂದು ಭಾವಿಸಿರಲಿಲ್ಲ. ನಾನೂ ಭಾರತೀಯ ಸೇನೆಗೆ ಸೇರಿ ಯೋಧನಾಗಿ ದೇಶಕ್ಕಾಗಿ ಹೋರಾಡಲು ಬಯಸಿದ್ದೆ. ನಾನು ಎನ್‍ಡಿಎ ಪರೀಕ್ಷೆಯನ್ನು ಕೂಡ ಬರೆದಿದ್ದೆ. ಆದರೆ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ವಿಫಲನಾದೆ. ಇದೊಂದು ನನ್ನ ಜೀವನದಲ್ಲಿ ದೊಡ್ಡ ವಿಷಾದಕರ ಸಂಗತಿಯಾಗಿ ಇಂದಿಗೂ ಉಳಿದುಬಿಟ್ಟಿದೆ.
Advertisement
ನಂತರ 20ರ ವಯಸ್ಸಿನಲ್ಲಿ ನಾನು ಮಂಗಳೂರಿನ ಸೆಂಟ್ ಅಲೋಶಿಯಸ್ ಕಾಲೇಜಿನಲ್ಲಿ ಓದುತ್ತಿದ್ದಾಗ ಕಾರ್ಲ್ ಮಾರ್ಕ್ಸ್ ಅವರಿಂದ ಪ್ರೇರಣೆಗೊಂಡು ಕಮ್ಯೂನಿಸ್ಟ್ ಪರ ಚಿಂತನೆ ಬೆಳೆಸಿದ್ದೆ. ಕಾರ್ಲ್ ಮಾರ್ಕ್ಸ್ ಅವರ ಸಿದ್ಧಾಂತ ನಿಜಕ್ಕೂ ಅದ್ಭುತವಾದಂತದ್ದು. ಅವರ ಸಿದ್ಧಾಂಗಳು ನನ್ನನ್ನು ಎಷ್ಟರ ಮಟ್ಟಿಗೆ ಪ್ರೇರೆಪಿಸಿತ್ತು ಎಂದರೆ ಆ ದಶಕದಲ್ಲಿ ನಾನು ಕಮ್ಯೂನಿಸ್ಟ್ ಪಕ್ಷದ ಸದಸ್ಯನಾಗಿದ್ದೆ. ರಷ್ಯಾದ ಇತಿಹಾಸ ಓದಿದಾಗ ಜನರು ಅಧಿಕಾರ ಸಿಕ್ಕ ಮೇಲೆ ಯಾವ ಕಾರಣಕ್ಕೆ ಅವರು ಅಧಿಕಾರಕ್ಕೆ ಬಂದಿದ್ದಾರೋ ಅದನ್ನು ಮರೆತು ಬಿಡುತ್ತಾರೆ ಎನ್ನುವುದು ಗೊತ್ತಾಯಿತು. ರಷ್ಯಾದ ಇತಿಹಾಸ ಓದಿದ ಬಳಿಕ ನಾನೂ ಕೂಡ ರಾಬಿನ್‍ಹುಡ್ ಆಗಬಹುದು, ಶ್ರೀಮಂತರಿಂದ ಸಂಪತ್ತನ್ನು ಪಡೆದು ಬಡವರಿಗೆ ನೀಡಬಹುದು ಎಂಬುದನ್ನ ತಿಳಿದೆ. ಅದನ್ನೇ ಯೋಚಿಸುತ್ತ ಅಂತಿಮ ವರ್ಷದ ಪದವಿ ಮುಗಿಸಿದೆ. ಈ ಸಂದರ್ಭದಲ್ಲಿ ದುಡ್ಡು ಮಾಡಲು ಆಗುವುದಿಲ್ಲ ಅಂತ ತಿಳಿಯಿತು.
Advertisement
ನಾನು ಮೊದಲು ಜೆಮ್ ಫೈನಾಸ್‍ನಲ್ಲಿ ರಿಸರ್ಚ್ ಅನಾಲಿಸ್ಟ್ ಆಗಿ ಕೆಲಸ ಮಾಡಲು ಆರಂಭಿಸಿದೆ. 1983-84ರಲ್ಲಿ ನಾನು ಡೈರಿ ಬರೆಯಲು ಶುರುಮಾಡಿದೆ. ಆಗ ಈ ದೇಶದ ಮಾರ್ಕೆಟ್ ಕ್ಯಾಪಿಟಲೈಸೆಷನ್ 30 ಸಾವಿರ ಕೋಟಿ ಇತ್ತು. ಆದರೆ ಈಗ ಫ್ಲಿಪ್‍ಕಾರ್ಟ್ ಮೌಲ್ಯವೇ ಅದಕ್ಕಿಂತ ಹೆಚ್ಚಾಗಿದೆ. ದೇಶದಲ್ಲಿ ಮಾರ್ಕೆಟ್ ಕ್ಯಾಪಿಟಲೈಸೆಷನ್ ಕಡಿಮೆ ಇತ್ತು. ರಿಸರ್ಚ್ ಅನಾಲಿಸ್ಟ್ ಆಗಿದ್ದರಿಂದ ಸುಮಾರು 30-40 ವಿವಿಧ ಉದ್ಯಮಗಳ ಬಗ್ಗೆ ತಿಳಿಯಲು ಅವಕಾಶ ದೊರಕಿತ್ತು. 1985ರ ಸಮಯದಲ್ಲಿ ತಂತ್ರಜ್ಞಾನಿಕ ಉದ್ಯಮಗಳು ಹೆಚ್ಚಾಗಿ ಇರಲಿಲ್ಲ. ಟೆಲಿಕಾಂ ಉದ್ಯಮ ಇರಲಿಲ್ಲ, ದೊಡ್ಡ ಮಟ್ಟದಲ್ಲಿ ರಿಟೇಲ್ ಇರಲಿಲ್ಲ. ಅಲ್ಲದೆ ಮುಂದಿನ 20 ವರ್ಷಕ್ಕೆ ಜಗತ್ತು ಹೇಗಿರುತ್ತೆ ಎನ್ನುವ ಬಗ್ಗೆ ಕಲ್ಪನೆ ಕೂಡ ಇರಲಿಲ್ಲ.
2 ವರ್ಷ ಕೆಲಸ ಮಾಡಿದ ಬಳಿಕ ಕೆಲಸ ಬಿಟ್ಟು ನಾನು ನನ್ನ ಊರಿಗೆ ಹೋದೆ. ಅಲ್ಲಿ ನಾನು ಸ್ವಂತ ಉದ್ಯಮ ಆರಂಭಿಸಲು ಹಿಂದೆಯೇ ನಿರ್ಧರಿಸಿದ್ದೆ. 1870ನಿಂದಲೂ ನಮ್ಮ ಕುಟುಂಬ ಕಾಫಿ ಬೆಳೆ ಬೆಳೆದುಕೊಂಡು ಬಂದಿತ್ತು. ಸುಮಾರು 300 ಎಕ್ರೆಯಷ್ಟು ಕಾಫಿ ಬೆಳೆ ಹೊಂದಿದ್ದೆವು. ಅಲ್ಲದೆ ನಮ್ಮ ತಂದೆಗೆ ನಾನೊಬ್ಬನೇ ಮಗ ಆಗಿದ್ದರಿಂದ ಬೇರೆ ಕಡೆ ಹೋಗಿ ಕೆಲಸ ಮಾಡುವುದು ಬೇಡ ಎಂದಿದ್ದರು. ಯಾಕೆಂದರೆ ಸುಮಾರು 15 ರಿಂದ 20 ಲಕ್ಷ ವಾರ್ಷಿಕ ಆದಾಯವನ್ನು ತಮ್ಮ ತಂದೆ ಗಳಿಸುತ್ತಿದ್ದರು. ಆದರೆ 21 ವರ್ಷಕ್ಕೆ ಜೀವನಲ್ಲಿ ನಿವೃತ್ತಿ ಪಡೆಯಲು ನನಗೆ ಇಷ್ಟವಿರಲಿಲ್ಲ. ಜೀವನದಲ್ಲಿ ಏನಾದರೂ ಸಾಧಿಸಬೇಕು ಎನ್ನುವ ಆಸೆ ನನಗಿತ್ತು. ಆಗ ತಂದೆ ಹತ್ತಿರ ನಾನು ಏನಾದರೂ ಸ್ವಂತ ಉದ್ಯಮ ಮಾಡಬೇಕು ಎಂದು ಹೇಳಿದಾಗ ಅವರು ನನಗೆ ಸುಮಾರು 7.5 ಲಕ್ಷ ರೂ. ಕೊಟ್ಟು, ಒಂದುವೇಳೆ ನೀನು ಸೋತರೆ ವಾಪಸ್ ಬಂದುಬಿಡು. ಗೆದ್ದರೆ ನಿನಗೆ ಒಳ್ಳೆಯದಾಗಲಿ ಎಂದು ಆಶೀರ್ವಾದ ಮಾಡಿ ಕಳುಹಿಸಿದರು.
ನಮ್ಮ ಕಡೆಯ ಜನರಿಗೆ ಸ್ವಲ್ಪ ಸ್ವಾಭಿಮಾನ ಹೆಚ್ಚು, ಹೀಗಾಗಿ ಎಲ್ಲಾ ಹಣವನ್ನು ನಾನು ಕಳೆದುಕೊಳ್ಳಲು ಇಚ್ಛಿಸದೇ 1985ರಲ್ಲಿಯೇ ಬೆಂಗಳೂರಿನಲ್ಲಿ 5 ಲಕ್ಷಕ್ಕೆ 1 ಸೈಟ್ ಖರೀದಿಸಿದೆ. ಒಂದುವೇಳೆ ಬಿಸಿನೆಸ್‍ನಲ್ಲಿ ಹಣ ಕಳೆದುಕೊಂಡರೂ ಸ್ಪಲ್ಪ ಹಣ ಸೈಟ್‍ನಿಂದ ಮುಂದೆ ಸಿಗುತ್ತದೆ ಎಂದು ಯೋಚಿಸಿ ಉಪಾಯ ಮಾಡಿದ್ದೆ. ನನ್ನನ್ನು ನಂಬಿ ತಂದೆ ಹಣ ನೀಡಿದ್ದಾರೆ. ಆ ನಂಬಿಕೆಯನ್ನು ಉಳಿಸಿಕೊಳ್ಳಬೇಕು ಎಂದು ನಿರ್ಧರಿಸಿದ್ದೆ. ಉಳಿದ 2.5 ಲಕ್ಷ ಹಣವನ್ನು ಇಟ್ಟುಕೊಂಡು ಬಿಸಿನೆಸ್ ಆರಂಭಿಸಬೇಕು ಅಂದುಕೊಂಡೆ. ಬ್ರಿಟಾನಿಯಾ ಕಂಪನಿ ಮೇಲೆ ಇಕ್ವಿಟಿ ಮಾರ್ಕೆಟ್‍ನಿಂದ ಹಣ ಹೂಡಿದೆ. 1985-92ರವರೆಗೆ ಇಕ್ವಿಟಿ ಮಾರ್ಕೆಟ್‍ನಿಂದ ಸಾಕಷ್ಟು ಹಣ ಮಾಡಿದೆ. ಆಗ ತಂತ್ರಜ್ಞಾನ ಹೆಚ್ಚು ಮುಂದುವರಿದಿರಲಿಲ್ಲ. ಮೊಬೈಲ್ ಫೋನ್‍ಗಳು ಇರಲಿಲ್ಲ. ಕೇವಲ ಲ್ಯಾಂಡ್‍ಲೈನ್ಸ್ ಮಾತ್ರ ಇತ್ತು. ಆಗ ನಾನು 50 ಸಾವಿರ ಹಣವನ್ನು ಬ್ಯಾಂಕಿನಲ್ಲಿಟ್ಟು, 35 ಸಾವಿರ ನೀಡಿ ಲ್ಯಾಂಡ್‍ಲೈನ್ ಕನೆಕ್ಷನ್ ಪಡೆದೆ. ಬಳಿಕ ನನ್ನ ಕೈಯಲ್ಲಿ ಅಂದಾಜು 50 ಸಾವಿರ ಮಾತ್ರ ಉಳಿದಿತ್ತು. ಈ ಫೋನ್ ಮೂಲಕವೇ ಮುಂಬೈ, ದೆಹಲಿಯ ಜನರ ಜೊತೆ ಮಾತನಾಡುತ್ತಿದ್ದೆ.
ಸಾಕಷ್ಟು ಹಣ ಮಾಡಿದ ಬಳಿಕ ನಾನು ಕಾಫಿ ಹಿನ್ನೆಲೆಯಿಂದ ಬಂದವನು, ಆ ಕ್ಷೇತ್ರದಲ್ಲೇ ಏನಾದರೂ ಮಾಡಬೇಕು ಎನ್ನುವ ಯೋಚನೆ ಬಂತು. ವಿಯೆಟ್ನಾಂ, ಬ್ರೆಜಿಲ್, ಕೊಲಂಬಿಯಾ, ಭಾರತ ಹೀಗೆ ಹಲವು ದೇಶಗಳಲ್ಲಿ ಅಂದಾಜು 40 ಲಕ್ಷ ಕಾಫಿ ಬೆಳೆಗಾರರು ಇದ್ದಾರೆ. ಅಲ್ಲದೆ ಭಾರತದಲ್ಲಿರುವ ಕಾಫಿ ಬೆಳೆಗಾರರಲ್ಲಿ 90 ಶೇ.ದಷ್ಟು ಮಂದಿ 5 ಹೆಕ್ಟೇರ್ ಗಿಂತ ಕಡಿಮೆ ಭೂಮಿಯಲ್ಲಿ ಬೆಳೆ ಬೆಳೆಯುತ್ತಿದ್ದರು.
ಆಗಿನ ಕಾಲದಲ್ಲಿ ಕಾಫಿಗಾಗಿ ರಿಟೇಲ್ ಮಾರ್ಕೆಟಿಂಗ್ ಇರಲಿಲ್ಲ. ಸರ್ಕಾರ ನಡೆಸುತ್ತಿದ್ದ ಕಾಫಿ ಬೋರ್ಡಿಗೆ ಬೆಳೆಗಾರರು ಕಾಫಿ ನೀಡುತ್ತಿದ್ದರು. ಆದರೆ ಭಾರತ ಸರ್ಕಾರ ರಷ್ಯಾದಿಂದ ಯುದ್ಧ ಟ್ಯಾಂಕ್ ಖರೀದಿಸಲು ಅವರಿಗೆ ಕಾಫಿ ಮಾರಾಟ ಮಾಡುತಿತ್ತು. ಹೀಗಾಗಿ ಆಗ 1 ಪೌಂಡ್ ಕಾಫಿಗೆ 35 ಸೆನ್ಸ್ ಬೆಲೆ ಮಾತ್ರ ಭಾರತೀಯ ಬೆಳೆಗಾರರಿಗೆ ಸಿಗುತ್ತಿತ್ತು. ಆದರೆ ವಿದೇಶದ 1 ಪೌಂಡ್ ಕಾಫಿಗೆ ಸುಮಾರು 1 ಡಾಲರ್ 29 ಸೆನ್ಸ್ ಬೆಲೆ ನೀಡಲಾಗುತ್ತಿತ್ತು. ಇಕ್ವೀಟಿ ಮಾರ್ಕೆಟ್‍ನಲ್ಲಿ ಹಣ ಮಾಡುತ್ತಲೇ ನಾನು ಸ್ಪಲ್ಪ ಹಣವನ್ನು ಕಾಫಿ ಪ್ಲಾಂಟೆಷನ್‍ಗೆ ಹಾಕಿದ್ದೆ. ಆದ್ದರಿಂದ 1992-93ರ ಹೊತ್ತಿಗೆ ನಾನು 5 ಸಾವಿರ ಎಕ್ರೆ ಕಾಫಿ ಪ್ಲಾಂಟೆಷನ್ ಮಾಡಿಕೊಂಡೆ. ಆಗ ಅರ್ಥಶಾಸ್ತ್ರಜ್ಞರಾಗಿದ್ದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ನನ್ನನ್ನು ಶ್ಲಾಘಿಸಿದ್ದರು. ನಾನು ಹಾಗೂ ನನ್ನ ಕೆಲ ಸ್ನೇಹಿತರು ಅವರ ಬಳಿ ಹೋಗಿ ಕಾಫಿ ಬೆಳೆಗಾರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ತಿಳಿಸಿ ಭಾರತೀಯ ಕಾಫಿ ಬೆಲೆ ಹಾಗೂ ವಿದೇಶಿ ಬೆಲೆಯ ಚಾರ್ಟ್ ನೀಡಿದೆವು. ಆಗ ಅವರು ಈ ಬಗ್ಗೆ ಮೊದಲೇ ಯಾಕೆ ತಿಳಿಸಲಿಲ್ಲ ಎಂದಿದ್ದರು.
ನಾನು ಆಕಸ್ಮಿಕವಾಗಿ ಉದ್ಯಮ ಕ್ಷೇತ್ರಕ್ಕೆ ಕಾಲಿಟ್ಟವನು ಆದರೆ 1995ರ ಹೊತ್ತಿಗೆ ನಾನು ಭಾರತದ ದೊಡ್ಡ ಟ್ರೇಡರ್ ಆದೆ. 15-20 ಲಕ್ಷ ಕೋಟಿ ರೂ. ಟ್ರೇಡಿಂಗ್‍ನಲ್ಲಿ ಲಾಭ ಬರುತ್ತಿತ್ತು. ಎಲ್ಲಿಯೂ ಕೂಡ ಸುಲಭವಾಗಿ ಹಣ ಬರಲ್ಲ. 3 ವರ್ಷದಲ್ಲಿ ಅತ್ಯಂತ ಹೆಚ್ಚು ಕಾಫಿ ಕಮಡಿಟಿ ಟ್ರೇಡಿಂಗ್ ಮಾಡುವ ಉದ್ಯಮಿಯಾಗುವುದು ಸುಲಭ ಇರಲಿಲ್ಲ. ನಂತರ ಸ್ವಂತ ಕಾಫಿ ಬ್ರಾಂಡ್ ಶುರುಮಾಡಿ ಯಶಸ್ವಿಯಾದೆ. ಸದ್ಯ ನಾನು ಸುಮಾರು 11 ರಾಷ್ಟ್ರಗಳಲ್ಲಿ ಕಾಫಿ ಟ್ರೇಡಿಂಗ್ ನಡೆಸುತ್ತಿದ್ದೇನೆ. ಅದರಿಂದ ಪ್ರತಿದಿನ ಸುಮಾರು 2.5 ಬಿಲಿಯನ್ ಡಾಲರ್ ಲಾಭ ಪಡೆಯುತ್ತಿದ್ದೇನೆ ಎಂದು ತಮ್ಮ ಉದ್ಯಮ ಹೇಗೆ ಆರಂಭವಾಯ್ತು ಎನ್ನುವುದನ್ನು ಸಿದ್ದಾರ್ಥ್ ವಿವರಿಸಿದ್ದರು.