ಬೆಂಗಳೂರು: ಉದ್ಯಮಿ ಲೋಕನಾಥ್ ಪುತ್ರ ವಿದ್ವತ್ ಮೇಲಿನ ಮಾರಣಾಂತಿಕ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಕಾಂಗ್ರೆಸ್ ಶಾಸಕ ಹ್ಯಾರೀಸ್ ಮಗ ನಲಪಾಡ್ ಹಾಗೂ ಆತನ ಸ್ನೇಹಿತರ ವಿರುದ್ಧ ಸಿಸಿಬಿ ತನಿಖಾಧಿಕಾರಿಗಳು ಕೋರ್ಟ್ ಗೆ 600 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.
ಫೆಬ್ರವರಿ 17ರಂದು ನಗರದ ಯುಬಿ ಸಿಟಿಯ ಫರ್ಜಿ ಕೆಫೆಯಲ್ಲಿ ವಿದ್ವತ್ ಮೇಲೆ ಶಾಸಕ ಹ್ಯಾರೀಸ್ ಪುತ್ರ ನಲಪಾಡ್ ಗ್ಯಾಂಗ್ ಗಂಭೀರವಾಗಿ ಹಲ್ಲೆ ಮಾಡಿತ್ತು. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಸಿಸಿಬಿ ತನಿಖಾಧಿಕಾರಿಗಳು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.
ಚಾರ್ಜ್ ಶೀಟ್‍ನಲ್ಲಿ ಏನಿದೆ?: ಆರೋಪಿಗಳ ಮತ್ತು ವಿದ್ವತ್ ವೈದ್ಯಕೀಯ ವರದಿ, ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಹಾಗೂ ಕೆಫೆ, ಆಸ್ಪತ್ರೆಯ ಸಿಸಿಟಿವಿ ದೃಶ್ಯಗಳನ್ನು ಲಗತ್ತಿಸಲಾಗಿದೆ. ಆರೋಪಕ್ಕೆ ಸಂಬಂಧಿಸಿದಂತೆ ವಿದ್ವತ್ ಆತನ ಸ್ನೇಹಿತರು, ಫರ್ಜಿ ಕೆಫೆ ಸಿಬ್ಬಂದಿ, ಮಲ್ಯ ಆಸ್ಪತ್ರೆ ಸಿಬ್ಬಂದಿ ಸೇರಿದಂತೆ 60 ಸಾಕ್ಷಿಗಳಿಂದ ಹೇಳಿಕೆಗಳನ್ನು ಚಾರ್ಜ್ ಶೀಟ್‍ನಲ್ಲಿ ದಾಖಲಿಸಲಾಗಿದೆ ಎಂದು ಪಬ್ಲಿಕ್ ಟಿವಿಗೆ ಮಾಹಿತಿ ಲಭ್ಯವಾಗಿದೆ.
ನಲಪಾಡ್, ಅರುಣ್ ಬಾಬು, ಶ್ರೀಕೃಷ್ಣ, ಮಂಜುನಾಥ್, ಅಶ್ರಫ್, ಬಾಲಕೃಷ್ಣ, ಅಭಿಷೇಕ್ ಮತ್ತು ನಾಸಿರ್ ವಿರುದ್ಧ ಆರೋಪ ಪಟ್ಟಿ ಸಲ್ಲಿಕೆಯಾಗಿದೆ. ಸದ್ಯ ಎಲ್ಲ ಆರೋಪಿಗಳನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರಿಸಲಾಗಿದೆ. ಆರೋಪಿ ಕೃಷ್ಣ 2004 ರಿಂದಲೂ ಮೊಬೈಲ್ ಬಳಕೆ ಮಾಡುತ್ತಿಲ್ಲ. ಅವನು ವಿದೇಶಕ್ಕೆ ಹೋಗಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ ಎಂದು ಹೇಳಲಾಗ್ತಿದೆ.