– ಚಮಚ, ತಟ್ಟೆಯಿಂದ ಮಾರಕಾಸ್ತ್ರ ತಯಾರಿ
– 37 ಚಾಕು, ಡ್ರ್ಯಾಗರ್ ಪತ್ತೆ
ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನ ಮೇಲೆ ಕೇಂದ್ರ ಅಪರಾಧ ವಿಭಾಗದ(ಸಿಸಿಬಿ) ಅಧಿಕಾರಿಗಳು ದಾಳಿ ನಡೆಸಿದ್ದು, ರಾಶಿ ರಾಶಿ ಮಾರಕಾಸ್ತ್ರಗಳು ಪತ್ತೆಯಾಗಿವೆ.
ಪರಪ್ಪನ ಅಗ್ರಹಾರದಲ್ಲಿ ಆರೋಪಿಗಳು ಗಾಂಜಾ ಹಾಗೂ ಮೊಬೈಲ್ ಫೋನ್ ಬಳಕೆ ಮಾಡುತ್ತಿದ್ದ ಕಾರಣ ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಸೇರಿದಂತೆ ಕ್ರೈಂ ಡಿಸಿಪಿಗಳ ನೇತೃತ್ವದಲ್ಲಿ ಸುಮಾರು 60ಕ್ಕೂ ಹೆಚ್ಚು ಸಿಬ್ಬಂದಿ ತಂಡದಿಂದ ದಾಳಿ ನಡೆಸಲಾಗಿದೆ. ಸಿಸಿಬಿ ತಂಡ ಬೆಳಗ್ಗೆಯಿಂದ ಶೋಧಕಾರ್ಯ ನಡೆಸುತ್ತಿದೆ.
Advertisement
Advertisement
ಪರಿಶೀಲನೆ ವೇಳೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಶಿ ರಾಶಿ ಮಾರಾಕಾಸ್ತ್ರಗಳು ಸಿಕ್ಕಿದ್ದು, ಜೈಲಿನಲ್ಲಿರುವ ಖೈದಿಗಳ ಬಳಿ ರಾಶಿ ರಾಶಿ ಮೊಬೈಲ್ ಹಾಗೂ ಸಿಮ್ ಕಾರ್ಡ್ ಗಳು ಪತ್ತೆಯಾಗಿವೆ. ಗಾಂಜಾ ಸೇದಲು ಬಳಸುವ ಪೈಪ್ ಗಳು ಸಹ ಸಿಸಿಬಿ ದಾಳಿಯ ವೇಳೆ ಪತ್ತೆಯಾಗಿವೆ.
Advertisement
ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಿಕ್ಕಿರುವ ಬಹುತೇಕ ಮಾರಾಕಾಸ್ತ್ರಗಳನ್ನು ಜೈಲಿನಲ್ಲೇ ತಯಾರು ಮಾಡಿಕೊಂಡಿದ್ದಾರೆ. ಜೈಲಿನಲ್ಲಿರುವ ಚಮಚ, ತಟ್ಟೆಗಳು, ಗ್ಯಾಸ್ ಲೈಟರ್ ಸೇರಿದಂತೆ ವಿವಿಧ ವಸ್ತುಗಳಿಂದ ತಯಾರು ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
Advertisement
ದಾಳಿ ಬಳಿಕ ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಮಾಹಿತಿ ನೀಡಿ, ಬೆಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು, ರೌಡಿ ಚಟುವಟಿಕೆಗೆ ಬ್ರೇಕ್ ಹಾಕಲು ಆಯುಕ್ತರು ಸೂಚಿಸಿದ್ದಾರೆ. ಬೆಳಗ್ಗೆಯೇ ಕಾರಾಗೃಹದ ಮೇಲೆ ದಾಳಿ ಮಾಡಿದ್ದು, ಪ್ರತಿ ಬ್ಯಾರಕ್ ನಲ್ಲೂ ತಪಾಸಣೆ ಮಾಡಲಾಗಿದೆ ಎಂದು ತಿಳಿಸಿದರು.
ದಾಳಿ ವೇಳೆ 37 ಚಾಕು ಮತ್ತು ಡ್ರ್ಯಾಗರ್ ಗಳು ಸಿಕ್ಕಿವೆ. ಗಾಂಜಾ ಮತ್ತು ಗಾಂಜಾ ಸೇವನೆ ಮಾಡುವ ಪೈಪುಗಳನ್ನೂ ಜಪ್ತಿ ಮಾಡಲಾಗಿದೆ. ಮೊಬೈಲ್ ಮತ್ತು ಸಿಮ್ ಕಾರ್ಡ್ ಗಳು ಸಿಕ್ಕಿದ್ದು, ಅದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗಿ ಒಳಗಿದ್ದು, ಅಲ್ಲಿಂದಲೇ ಅಪರಾಧ ಚಟುವಟಿಕೆ ಮಾಡುತ್ತಿದ್ದಾರೆ ಎಂಬ ಬಗ್ಗೆ ಮಾಹಿತಿ ಲಭಿಸಿದ ಹಿನ್ನಲೆಯಲ್ಲಿ ದಾಳಿ ನಡೆಸಲಾಗಿದೆ. ತನಿಖೆಯ ದೃಷ್ಟಿಯಿಂದ ಕೆಲ ವಿಷಯಗಳನ್ನು ಗೌಪ್ಯವಾಗಿಡಬೇಕಾಗುತ್ತದೆ. ಪರಿಶೀಲನೆ ವೇಳೆ ಜೈಲು ಅಧೀಕ್ಷಕರು ಜೊತೆಗಿದ್ದರು. ಈ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸಲಾಗುತ್ತದೆ ಎಂದು ಸಂದೀಪ್ ಪಟೇಲ್ ತಿಳಿಸಿದರು.