Connect with us

Bengaluru City

ಕಪಾಲಿ ಮೋಹನ್ ಮನೆ ಮೇಲೆ ಸಿಸಿಬಿ ದಾಳಿ-20 ಲೀಟರ್ ವಿದೇಶಿ ಮದ್ಯ ವಶ

Published

on

Share this

ಬೆಂಗಳೂರು: ನಗರದ ಮಹಾಲಕ್ಷ್ಮಿ ಲೇಔಟ್‍ನ ಇಸ್ಪೀಟ್ ಅಡ್ಡೆ ಮೇಲೆ ಶನಿವಾರ ರಾತ್ರಿ ದಾಳಿ ನಡೆಸಿದ್ದ ಸಿಸಿಬಿ ಪೊಲೀಸರು ಇಂದು ಗ್ಯಾಂಬ್ಲಿಂಗ್ ರೂವಾರಿ, ಮೀಟರ್ ಬಡ್ಡಿ ಆರೋಪ ಇರುವ ಕಪಾಲಿ ಮೋಹನ್ ಅವರ ಮನೆ ಮೇಲೆ ದಾಳಿ ನಡೆಸಿ ಅಕ್ರಮವಾಗಿ ಸಂಗ್ರಹಿಸಿದ್ದ ವಿದೇಶಿ ಮದ್ಯವನ್ನು ವಶಕ್ಕೆ ಪಡೆದಿದ್ದಾರೆ.

ಸ್ಯಾಂಡಲ್‍ವುಡ್‍ನಲ್ಲಿ ಹಲವು ಚಿತ್ರಗಳಿಗೆ ಫೈನಾನ್ಸ್ ಮಾಡುತ್ತಿದ್ದ ಕಪಾಲಿ ಮೋಹನ್, ಶೀಘ್ರ ಹಣ ಸಂಪಾದನೆಗೆ ಅಕ್ರಮದ ದಾರಿ ಹಿಡಿದಿದ್ದರು ಎಂಬ ಆರೋಪದ ಮೇಲೆ ಸದಾಶಿವನಗರದ ಮನೆ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಪರಿಶೀಲನೆ ನಡೆಸಿದರು. ಆದರೆ ಈ ವೇಳೆ ಕಪಾಲಿ ಮೋಹನ್ ಮನೆಯಲ್ಲಿ ಇರಲಿಲ್ಲ ಎಂಬ ಮಾಹಿತಿ ಲಭಿಸಿದ್ದು, ಮನೆಯಲ್ಲಿ ದುಬಾರಿ ಬೆಲೆಯ ವಿದೇಶಿ ಮದ್ಯದ ಬಾಟೆಲ್‍ಗಳು ಪತ್ತೆಯಾಗಿವೆ. ಸುಮಾರು 20 ಲೀಟರ್ ನಷ್ಟಿದ್ದ ಅಕ್ರಮ ವಿದೇಶಿ ಮದ್ಯವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಅಂದಹಾಗೇ ಸದ್ಯ ಜಾರಿ ಇರುವ ನಿಯಮದ ಪ್ರಕಾರ 9 ಲೀಟರ್‍ಗಿಂತ ಹೆಚ್ಚಿನ ಪ್ರಮಾಣದಲ್ಲಿ ವಿದೇಶಿ ಮದ್ಯ ಸಂಗ್ರಹ ಮಾಡಿದ್ದರೆ ಅದು ಅಪರಾಧವಾಗುತ್ತದೆ. ಇದರೊಂದಿಗೆ ನಗರದ ಪ್ಯಾಲೇಸ್ ಗುಟ್ಟಹಳ್ಳಿಯ ಬಾಲಾಜಿ ಫೈನಾನ್ಸ್ ಮೇಲೆಯೂ ಸಿಸಿಬಿ ದಾಳಿ ನಡೆಸಿ ಹಲವು ದಾಖಲೆ ವಶಕ್ಕೆ ಪಡೆದಿರುವುದಾಗಿ ಉತ್ತರ ವಿಭಾಗ ಅಬಕಾರಿ ಡಿಸಿ ಕೆಎಸ್ ಮುರಳಿ ತಿಳಿಸಿದ್ದಾರೆ. ಬಾಲಾಜಿ ಫೈನಾನ್ಸ್ ಕಪಾಲಿ ಮೋಹನ್ ಒಡೆತನದಲ್ಲಿ ಸಂಸ್ಥೆಯಾಗಿದೆ.

ಉಳಿದಂತೆ ಶನಿವಾರ ನಡೆಸಿದ ಸಿಸಿಬಿ ದಾಳಿಗೆ ಸಂಬಂಧಿಸಿದಂತೆ ಆರ್ ಜಿ ಹೋಟೆಲ್ ಬಿಲ್ಡಿಂಗ್ ಮಾಲೀಕನ ಮೇಲೆ ಸಹ ದೂರು ದಾಖಲು ಮಾಡಲಾಗಿದೆ ಎಂದು ಸಿಸಿಬಿ ಡಿಸಿಪಿ ಗಿರೀಶ್ ಹೇಳಿಕೆ ನೀಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Click to comment

Leave a Reply

Your email address will not be published. Required fields are marked *

Advertisement