ಬೆಂಗಳೂರು: ಕೊಬ್ಬರಿ ಎಣ್ಣೆ ಡಬ್ಬಿಯಲ್ಲಿ ಡ್ರಗ್ಸ್ ಇಟ್ಟುಕೊಂಡು ಬೆಂಗಳೂರಿಗೆ ತರುತ್ತಿದ್ದ ಇಬ್ಬರು ಅಂತರರಾಜ್ಯ ಡ್ರಗ್ಸ್ ಪೆಡ್ಲರ್‌ಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಮಾದಕ ವಸ್ತುಗಳ ಸಾಗಾಟ ಮಾಡೋದಕ್ಕೆ ಪೊಲೀಸರು ಬಿಡುತ್ತಿಲ್ಲ. ಏನೇ ಮಾಡಿದರು ಪೊಲೀಸರ ಬಳಿ ಸಿಕ್ಕಿಬೀಳ್ತೀವಿ ಅಂತ ಖತರ್ನಾಕ್ ಉಪಾಯ ಮಾಡಿ ಆರೋಪಿಗಳು ಕೊಬ್ಬರಿ ಎಣ್ಣೆ ಡಬ್ಬಿಯಲ್ಲಿ ಡ್ರಗ್ಸ್ ಇಟ್ಟುಕೊಂಡು ಬೆಂಗಳೂರಿಗೆ ತರುತ್ತಿದ್ದರು. ಆದರೆ ಡ್ರಗ್ಸ್ ಪೆಡ್ಲರ್‌ಗಳಾದ ಸಿಂಟೋ ಥಾಮಸ್(35) ಹಾಗೂ ತಾಜುದ್ದೀನ್ ತಲಾತ್(29) ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರಿಗೆ ಅನುಮಾನ ಬರಬಾರದು ಎಂದು ಪ್ಯಾರಚೂಟ್ ಕೊಬ್ಬರಿ ಎಣ್ಣೆ ಡಬ್ಬಿಯಲ್ಲಿ ಡ್ರಗ್ಸ್ ಇಟ್ಟು ಆರೋಪಿಗಳು ಮಾರಾಟಕ್ಕೆ ಯತ್ನಿಸಿದ್ದರು.
Advertisement
Advertisement
ವಿಶಾಖಪಟ್ಟಣಂನಿಂದ ಬೆಂಗಳೂರಿಗೆ ಡ್ರಗ್ಸ್ ತರಿಸಿ ಮಾರಾಟ ಮಾಡ್ತಿದ್ದ ಪೆಡ್ಲರ್‌ಗಳು, ಹ್ಯಾಶಿಶ್ ಆಯಿಲ್ ಎನ್ನುವ ಡ್ರಗ್ಸ್ ಮಾರಾಟ ಮಾಡುತ್ತಿದ್ದರು. 1 ಗ್ರಾಂ ಡ್ರಗ್ಸ್ ಅನ್ನು ಸುಮಾರು 3 ಸಾವಿರ ರೂಪಾಯಿಗೆ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಮಾಹಿತಿ ತಿಳಿದ ಸಿಸಿಬಿ ಪೊಲೀಸರು ಆರೋಪಿಗಳ್ನು ಬಂಧಿಸಿ, ಅವರಿಂದ 4,500 ಗ್ರಾಂ ಹ್ಯಾಶಿಶ್ ಆಯಿಲ್ ವಶಪಡಿಸಿಕೊಂಡಿದ್ದಾರೆ. ಡ್ರಗ್ಸ್ ಜೊತೆಗೆ 22 ಕೆ.ಜಿ ಗಾಂಜಾವನ್ನು ಕೂಡ ವಶಕ್ಕೆಪಡೆದಿರುವ ಪೊಲೀಸರು ಆರೋಪಿಗಳನ್ನು ವಿಚಾರಣೆ ನಡೆಸುತ್ತಿದ್ದಾರೆ.