ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಅಕ್ರಮವಾಗಿ ನಡೆಸುತ್ತಿದ್ದ ರೇವ್ ಪಾರ್ಟಿ ಮೇಲೆ ಶನಿವಾರ ತಡರಾತ್ರಿ ಸಿಸಿಬಿ ಪೊಲೀಸರು ದಾಳಿ ಮಾಡಿದ್ದಾರೆ.
ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ನೇತೃತ್ವದಲ್ಲಿ 50 ಕ್ಕೂ ಹೆಚ್ಚು ಮಂದಿ ಪೊಲೀಸರು ನಗರದ ಮಹಾಲಕ್ಷ್ಮೀ ಲೇಔಟ್ ಬಳಿಯ ಆರ್.ಜೆ ರಾಯಲ್ಸ್ ಹೋಟೆಲ್ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ 50 ಮಂದಿ ವಿದೇಶೀಯರು ಸೇರಿ 150 ಜನರನ್ನು ಬಂಧಿಸಲಾಗಿದೆ.
ಬೆಳಗ್ಗಿನ ಜಾವ 4 ಗಂಟೆಯವರೆಗೂ ರೇವ್ ಪಾರ್ಟಿ ನಡೆಯುತ್ತಿತ್ತು. ಪಾರ್ಟಿ ವೇಳೆ ಮಾದಕ ದ್ರವ್ಯಗಳ ಬಳಕೆ ಬಗ್ಗೆ ಸಿಸಿಬಿ ಅಧಿಕಾರಿಗಳ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇತ್ತ ಹಾಡುಗಳನ್ನ ಹಾಕಿ ಗ್ರಾಹಕರಿಗೆ ನೃತ್ಯ ಮಾಡಲು ಅವಕಾಶ ನೀಡಿದ ಆರೋಪ ಸಂಬಂಧ ಅಶೋಕ ನಗರದ ಬೈಚಾನ್ಸ್ ಬಾರ್ ಅಂಡ್ ರೆಸ್ಟೋರೆಂಟ್ ಮೇಲೂ ದಾಳಿ ಮಾಡಲಾಗಿದೆ. ಧ್ವನಿವರ್ಧಕ ಬಳಸಿ ಮಿತಿ ಮೀರಿದ ಸದ್ದಿನಲ್ಲಿ ಕುಣಿತಕ್ಕೆ ಅವಕಾಶ ನೀಡಲಾಗುತ್ತಿತ್ತು. ಹೋಟೆಲ್ ಮಾಲೀಕ, ಮ್ಯಾನೇಜರ್ ಸೇರಿ 25ಕ್ಕೂ ಹೆಚ್ಚು ಮಂದಿ ಗ್ರಾಹಕರನ್ನು ಬಂಧಿಸಲಾಗಿದೆ. ಈ ಕುರಿತು ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.