ಬೆಂಗಳೂರು: ಹೊರ ರಾಜ್ಯಗಳಿಂದ ಅಮಾಯಕ ಯುವತಿಯರನ್ನು ಕರೆ ತಂದು ಮಾಂಸದ ದಂಧೆ ನಡೆಸುತ್ತಿದ್ದ ಮನೆಯ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ದಾಳಿಯ ವೇಳೆ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಇಬ್ಬರು ಹೊರ ರಾಜ್ಯದ ಯುವತಿಯರನ್ನು ಪೊಲೀಸರು ರಕ್ಷಣೆ ಮಾಡಿ ಅವರ ಮನೆಗಳಿಗೆ ಕಳುಹಿಸಿಕೊಡುವ ಕೆಲಸ ಮಾಡಿದ್ದಾರೆ. ಯುವತಿಯರಿಗೆ ಉದ್ಯೋಗ ಕೊಡಿಸುವುದಾಗಿ ಬೇರೆ ಬೇರೆ ರಾಜ್ಯದಿಂದ ಕರೆ ತಂದು ಶ್ರೀರಾಂಪುರದಲ್ಲಿ ಮನೆ ಮಾಡಿ ಇರಿಸಿಕೊಳ್ಳುತ್ತಿದ್ದರು.
ಮಾಂಸದ ದಂಧೆಯಲ್ಲಿ ತೊಡಗಿಕೊಂಡರೆ ಕಡಿಮೆ ಅವಧಿಯಲ್ಲಿ ಕೈ ತುಂಬಾ ಹಣ ಮಾಡಬಹುದೆಂದು ಆರೋಪಿಗಳು ಯುವತಿಯರಿಗೆ ಹಣದ ಆಮೀಷ ತೋರುತ್ತಿದ್ದರು. ಅಲ್ಲದೆ ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿಕೊಳ್ಳುವಂತೆ ಯುವತಿಯರಿಗೆ ಪ್ರೇರಣೆ ನೀಡುತ್ತಿದ್ದರು.
ಆರೋಪಿಗಳಾದ ಪ್ರಜ್ವಲ್, ಸುಭೇಂದ್ರ ಫೋನ್ ಮೂಲಕ ಗಿರಾಕಿಗಳನ್ನು ಸಂಪರ್ಕ ಮಾಡಿ ಯುವತಿಯರ ಫೋಟೋ ಕಳುಹಿಸುತ್ತಿದ್ದರು. ಗಿರಾಕಿಗಳು ಯುವತಿಯರ ಫೋಟೋ ನೋಡಿ ಓಕೆ ಮಾಡಿದ ಮೇಲೆ ಆರೋಪಿಗಳು 2 ಸಾವಿರದಿಂದ 3 ಸಾವಿರ ಹಣ ಫಿಕ್ಸ್ ಮಾಡಿ ಯುವತಿಯರನ್ನು ಗಿರಾಕಿ ಬಳಿ ಕಳುಹಿಸಿಕೊಡುತ್ತಿದ್ದರು.
ಆರೋಪಿಗಳು ಯುವತಿಯರನ್ನು ಹೊರ ರಾಜ್ಯದಿಂದ ಕರೆ ತಂದು ಮಾಂಸದ ದಂಧೆಗೆ ದೂಡಿ ಅಕ್ರಮವಾಗಿ ಹಣ ಸಂಪಾದಿಸುತ್ತಿರುವ ಬಗ್ಗೆ ಸ್ಥಳೀಯರು ದೂರು ನೀಡಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸಿಸಿಬಿ ಪೊಲೀಸರು ಖಚಿತ ಮಾಹಿತಿ ಮೆರೆಗೆ ದಾಳಿ ಮಾಡಿ ಇಬ್ಬರು ಆರೋಪಿಗಳನ್ನು ಬಂಧಿಸಿ ಯುವತಿಯರನ್ನು ರಕ್ಷಣೆ ಮಾಡಿದ್ದಾರೆ.
ಸದ್ಯ ಬಂಧಿತ ಆರೋಪಿ ಸುಭೇಂದ್ರ ಹಾಗೂ ಪ್ರಜ್ವಲ್‍ನಿಂದ 35 ಸಾವಿರ ನಗದು ಹಾಗೂ ಮೊಬೈಲ್ ವಶಪಡಿಕೊಂಡಿದ್ದಾರೆ. ಈ ಬಗ್ಗೆ ಸುಬ್ರಮಣ್ಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ.