ಬೆಂಗ್ಳೂರಲ್ಲಿ ರೇವ್ ಪಾರ್ಟಿ ಮೇಲೆ ಸಿಸಿಬಿ ದಾಳಿ- ಅಪಾರ ಪ್ರಮಾಣದ ಡ್ರಗ್ಸ್ ಪತ್ತೆ

Public TV
1 Min Read
Electronic RaveParty CCB CrimeNews Bengaluru

– ತೆಲುಗು ನಟಿಯರು, ಮಾಡೆಲ್‍ಗಳು ಭಾಗಿ

ಬೆಂಗಳೂರು: ನಗರದ ಎಲೆಕ್ಟ್ರಾನಿಕ್ ಸಿಟಿ (Electronic City) ಹೊರಭಾಗದ ಸಿಂಗೇನಾ ಅಗ್ರಹಾರದ ಫಾರಂ ಹೌಸ್‍ನಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿ (Rave Party) ಮೇಲೆ ಸಿಸಿಬಿ (CCB) ಅಧಿಕಾರಿಗಳು ದಾಳಿ ನಡೆಸಿದ್ದು, ಅಪಾರ ಪ್ರಮಾಣದ ಮಾದಕ ವಸ್ತುಗಳು ಪತ್ತೆಯಾಗಿವೆ. ಪಾರ್ಟಿಯಲ್ಲಿ ತೆಲುಗು ನಟ-ನಟಿಯರು, ಮಾಡೆಲ್‍ಗಳು ಹಾಗೂ ಟೆಕ್ಕಿಗಳು ಭಾಗಿಯಾಗಿದ್ದರು ಎಂದು ತಿಳಿದು ಬಂದಿದೆ.

ಕಾನ್ ಕಾರ್ಡ್ ಮಾಲೀಕ ಗೋಪಾಲ ರೆಡ್ಡಿ ಎಂಬವರಿಗೆ ಸೇರಿದ ಜಿ.ಆರ್‌ ಫಾರಂ ಹೌಸ್‍ನಲ್ಲಿ ಹೈದರಾಬಾದ್ ಮೂಲದ ವಾಸು ಎಂಬಾತ ರೇವ್ ಪಾರ್ಟಿ ಆಯೋಜಿಸಿದ್ದ. ಪಾರ್ಟಿಯಲ್ಲಿ ಆಂಧ್ರಪ್ರದೇಶ ಹಾಗೂ ಬೆಂಗಳೂರು (Bengaluru) ಮೂಲದ 100ಕ್ಕೂ ಅಧಿಕ ಮಂದಿ ಯುವಕ ಯುವತಿಯರಿದ್ದರು. ಖಚಿತ ಮಾಹಿತಿ ಆಧರಿಸಿ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅವಧಿ ಮೀರಿ ಪಾರ್ಟಿ ನಡೆದಿದ್ದಲ್ಲದೇ ಪಾರ್ಟಿಯಲ್ಲಿ ಎಂಡಿಎಂಎ, ಕೋಕೆನ್ ಸೇರಿ ಹಲವು ಮಾದರಿಯ ಮಾದಕ ವಸ್ತುಗಳು ಪತ್ತೆಯಾಗಿವೆ. ಇದನ್ನೂ ಓದಿ: ಇರಾನ್‌ ಅಧ್ಯಕ್ಷರಿದ್ದ ಹೆಲಿಕಾಪ್ಟರ್‌ ಪತನ- ಸುರಕ್ಷಿತವಾಗಿ ವಾಪಸ್‌ ಆಗಲು ಮೋದಿ ಪ್ರಾರ್ಥನೆ

ಸ್ಥಳದಲ್ಲಿದ್ದ ಬೆಂಜ್ ಕಾರಿನಲ್ಲಿ ಆಂಧ್ರದ ಎಂಎಲ್‍ಎ ಕಾಕನಿ ಗೋವರ್ಧನ ರೆಡ್ಡಿ ಎಂಬವರ ಹೆಸರಿನ ಪಾಸ್ ಪತ್ತೆಯಾಗಿದೆ. ಪಾರ್ಟಿಗೆ ಯುವಕರು ಜಾಗ್ವಾರ್ ಹಾಗೂ ಆಡಿ ಕಾರುಗಳಲ್ಲಿ ಬಂದಿದ್ದು, ಕೆಲವರನ್ನು ಹೈದರಾಬಾದ್‍ನಿಂದ ಕರೆಸಿಕೊಳ್ಳಲಾಗಿತ್ತು. ಸನ್ ಸೆಟ್ ಟು ಸನ್ ರೈಸ್ ಪಾರ್ಟಿ ಎಂಬ ಹೆಸರಿನಲ್ಲಿ ಪಾರ್ಟಿ ಆಯೋಜಿಸಲಾಗಿದ್ದು, ಭಾನುವಾರ ಸಂಜೆ 5 ಗಂಟೆಯಿಂದ ಬೆಳಗ್ಗೆ 6 ಗಂಟೆ ವರೆಗೂ ಪಾರ್ಟಿ ನಡೆಸಲು ಮುಂದಾಗಿದ್ದರು. ಪಾರ್ಟಿಗೆ ಸುಮಾರು 30 ರಿಂದ 50 ಲಕ್ಷ ರೂ. ಹಣ ಖರ್ಚು ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಸಿಸಿಬಿ ಅಧಿಕಾರಿಗಳು ನಾರ್ಕೊಟಿಕ್ಸ್ ಸ್ನಿಫರ್ ಡಾಗ್‍ಗಳಿಂದ ಸ್ಥಳ ಪರಿಶೀಲನೆ ನಡೆಯತ್ತಿದೆ. ಕಾರುಗಳ ಮಾಲೀಕರ ಸಮಕ್ಷಮದಲ್ಲಿ ಕಾರುಗಳನ್ನು ಪರಿಶೀಲಿಸಲಾಗುತ್ತಿದೆ. ಈ ಸಂಬಂಧ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಶಿವರಾಮೇಗೌಡ ಮನೆ ಮೇಲೆ ಮೊಟ್ಟೆ ಎಸೆತ- ಪೊಲೀಸರಿಂದ ಬಿಗಿಭದ್ರತೆ

Share This Article