Latest
ಮುಂದಿನ ವರ್ಷದಿಂದ ಸಿಬಿಎಸ್‍ಇ 10ನೇ ತರಗತಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಹೊರೆ- 6 ಪೇಪರ್ ಕಡ್ಡಾಯ

ನವದೆಹಲಿ: ಸಿಬಿಎಸ್‍ಇ 10ನೇ ತರಗತಿ ವಿದ್ಯಾರ್ಥಿಗಳಿಗೆ ಮುಂದಿನ ಶೈಕ್ಷಣಿಕ ವರ್ಷದಿಂದ ಹೆಚ್ಚಿನ ಹೊರೆಯಾಗಲಿದೆ. 10ನೇ ತರಗತಿ ವಿದ್ಯಾರ್ಥಿಗಳು ಐದು ವಿಷಯಗಳ ಬದಲು ಕಡ್ಡಾಯವಾಗಿ 6 ವಿಷಯಗಳನ್ನು ಅಭ್ಯಾಸ ಮಾಡಬೇಕಾಗಿದೆ.
ಸಿಬಿಎಸ್‍ಇನಲ್ಲಿ ಸದ್ಯ ಎರಡು ಭಾಷಾ ವಿಷಯಗಳು, ಸಾಮಾಜ ವಿಜ್ಞಾನ, ಗಣಿತ ಹಾಗೂ ವಿಜ್ಞಾನ ವಿಷಯಗಳಿವೆ. ಆದ್ರೆ 2017-18ನೇ ಶೈಕ್ಷಣಿಕ ವರ್ಷದಿಂದ ವೃತ್ತಿಪರ ವಿಷಯ ಕೂಡ ಸೇರ್ಪಡೆಯಾಗ್ತಿದೆ.
ನ್ಯಾಷನಲ್ ಸ್ಕಿಲ್ ಕ್ವಾಲಿಫಿಕೇಷನ್ ಫ್ರೇಮ್‍ವರ್ಕ್(ಎನ್‍ಎಸ್‍ಕ್ಯೂಎಫ್) ಅಡಿ ಸಿಬಿಎಸ್‍ಇ ವೃತ್ತಿಪರ ವಿಷಯವನ್ನ ಕಡ್ಡಾಯಗೊಳಿಸಿದೆ. ವಿದ್ಯಾರ್ಥಿಯು ವಿಜ್ಞಾನ, ಗಣಿತ ಅಥವಾ ಸಮಾಜ ವಿಜ್ಞಾನ ಈ ಮೂರರಲ್ಲಿ ಯಾವುದೇ ಒಂದು ವಿಷಯದಲ್ಲಿ ಅನುತ್ತೀರ್ಣವಾದ್ರೆ ಆಗ ಅದನ್ನು 6ನೇ ವಿಷಯದೊಂದಿಗೆ ಬದಲಾಯಿಸಲ್ಪಡುತ್ತದೆ. ಅದರಂತೆ ಫಲಿತಾಂಶವನ್ನು ಲೆಕ್ಕ ಹಾಕಲಾಗುತ್ತದೆ ಎಂದು ಸಿಬಿಎಸ್‍ಇ ಸುತ್ತೋಲೆಯಲ್ಲಿ ಹೇಳಿದೆ. ಒಂದು ವೇಳೆ ವಿದ್ಯಾರ್ಥಿಯು ಅನುತ್ತೀರ್ಣವಾದ ವಿಷಯದ ಪರೀಕ್ಷೆಯನ್ನು ಮತ್ತೊಮ್ಮೆ ಬರೆಯಲು ಇಚ್ಛಿಸಿದ್ರೆ ವಿಭಾಗೀಯ ಪರೀಕ್ಷೆಯಲ್ಲಿ ಬರೆಯಬಹುದು ಎಂದು ಹೇಳಲಾಗಿದೆ.
6ನೇ ಪತ್ರಿಕೆಗೆ 13 ವಿಷಯಗಳ ಆಯ್ಕೆಯನ್ನು ವಿದ್ಯಾರ್ಥಿಗಳಿಗೆ ನೀಡಲಾಗಿದೆ. ಡೈನಮಿಕ್ ರೀಟೇಲಿಂಗ್, ಇನ್ಫರ್ಮೇಷನ್ ಟೆಕ್ನಾಲಜಿ, ಸೆಕ್ಯೂರಿಟಿ, ಆಟೋಮೊಬೈಲ್, ಬ್ಯೂಟಿ ಅಂಡ್ ವೆಲ್‍ನೆಸ್, ಬ್ಯಾಂಕಿಂಗ್ ಮತ್ತು ಇನ್ಶೂರೆನ್ಸ್ ಹೀಗೆ ನೀಡಲಾಗಿರುವ 13 ವಿಷಯಗಳಲ್ಲಿ ಒಂದನ್ನು ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳಬೇಕಿದೆ.
ಪರೀಕ್ಷೆಯ ಗರಿಷ್ಠ ಅಂಕ 100, ಅದರಲ್ಲಿ 50 ಅಂಕ ಬೋರ್ಡ್ ಪರೀಕ್ಷೆ ಹಾಗು ಇನ್ನುಳಿದ 50 ಅಂಕ ಆಂತರಿಕ ಮೌಲ್ಯಮಾಪನವಾಗಿ ವಿಂಗಡಿಸಲಾಗಿದೆ. ಇದರಲ್ಲಿ ವಿದ್ಯಾರ್ಥಿಯು ಉತ್ತೀರ್ಣವಾಗಲು ಬೋರ್ಡ್ ಪರೀಕ್ಷೆ ಹಾಗೂ ಆಂತರಿಕ ಮೌಲ್ಯಮಾಪನ ಎರಡರಲ್ಲೂ ಶೇ. 33ರಷ್ಟು ಅಂಕ ಪಡೆಯಬೇಕಿದೆ.
