Connect with us

Latest

ಸಿಬಿಐ ಅಧಿಕಾರಿಗಳಿಗೆ ಕಡ್ಡಾಯ ರಜೆ: ಕಿತ್ತಾಟ ಆರಂಭವಾಗಿದ್ದು ಹೇಗೆ? ಇಬ್ಬರ ಮೇಲಿರುವ ಆರೋಪ ಏನು?

Published

on

ನವದೆಹಲಿ: ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ಸಿಬಿಐ ಅಧಿಕಾರಿಗಳು ಕಿತ್ತಾಟ ನಡೆಸಿದ್ದು, ಇಬ್ಬರನ್ನು ಸರ್ಕಾರ ಕಡ್ಡಾಯ ರಜೆ ಮೇಲೆ ಕಳುಹಿಸಿದೆ.

ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಹಾಗೂ ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ಆಸ್ಥಾನರನ್ನು ಕಡ್ಡಾಯ ರಜೆ ಮೇಲೆ ಕಳುಹಿಸಿ, ಸಿಬಿಐನ ಹಂಗಾಮಿ ನಿರ್ದೇಶಕರನ್ನಾಗಿ ಎಂ ನಾಗೇಶ್ವರ್ ರಾವ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಕಾರ್ಯಾಲಯ ನೇಮಕ ಮಾಡಿದೆ.

ಕಿತ್ತಾಟ ಆರಂಭಗೊಂಡಿದ್ದು ಹೇಗೆ?
1979ರ ಐಪಿಎಸ್ ಅಧಿಕಾರಿಯಾಗಿರುವ ಅಲೋಕ್ ಕುಮಾರ್ ವರ್ಮಾ 2017ರ ಫೆಬ್ರವರಿಯಲ್ಲಿ ಸಿಬಿಐ ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿದ್ದರು. 2016ರಲ್ಲಿ ಸಿಬಿಐಗೆ ನೇಮಕವಾಗಿದ್ದ ರಾಕೇಶ್ ಆಸ್ಥಾನಾ 2017ರಲ್ಲಿ ಸಿಬಿಐ ವಿಶೇಷ ನಿರ್ದೇಶಕರನ್ನಾಗಿ ಕೇಂದ್ರ ಸರ್ಕಾರ ಭಡ್ತಿ ನೀಡಿತು. ಸಿಬಿಐಗೆ ವಿಶೇಷ ನಿರ್ದೇಶಕರನ್ನಾಗಿ ನೇಮಕವಾಗಿದ್ದು ಇದೇ ಮೊದಲು. ಭ್ರಷ್ಟಾಚಾರ ಆರೋಪವಿರುವ ರಾಕೇಶ್ ಆಸ್ಥಾನಾ ನೇಮಕಕ್ಕೆ ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಆರಂಭದಿಂದಲೂ ವಿರೋಧ ವ್ಯಕ್ತಪಡಿಸಿದರು. ಆಸ್ಥಾನಾ ಅವರನ್ನ ಕೇಂದ್ರ ಸರ್ಕಾರ ನೇಮಕ ಮಾಡಿದ ದಿನದಿಂದಲೂ ಶುರುವಾದ ಈ ಒಳ ಜಗಳ ಈಗ ಇಲ್ಲಿಯವರೆಗೆ ತಲುಪಿದೆ ಎಂದು ಮೂಲಗಳನ್ನು ಆಧಾರಿಸಿ ಮಾಧ್ಯಮಗಳು ವರದಿ ಮಾಡಿವೆ.

ರಾಕೇಶ್ ಆಸ್ಥಾನಾ ಮೇಲಿರುವ ಆರೋಪ ಏನು?
ಅಕ್ರಮ ಹಣ ವರ್ಗಾವಣೆ ಪ್ರಕರಣ ಎಸಗಿದ ಆರೋಪದ ಅಡಿ ಸ್ಟರ್ಲಿಂಗ್ ಬಯೋಟಿಕ್ ಕಂಪನಿ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದೆ. ದಾಳಿ ವೇಳೆ ವಶಪಡಿಸಿಕೊಳ್ಳಲಾದ ಡೈರಿಯಲ್ಲಿ ರಾಕೇಶ್ ಆಸ್ಥಾನಾ ಹೆಸರಿದೆ. ಈ ಪ್ರಕರಣದಲ್ಲಿ ಆಸ್ಥಾನಾ 3 ಕೋಟಿ ರೂ. ಲಂಚ ಪಡೆದುಕೊಂಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಸಿಬಿಐ ಎಫ್‍ಐಆರ್ ದಾಖಲಿಸಿ ತನಿಖೆ ನಡೆಸುತ್ತಿದ್ದು, ಈ ಎಫ್‍ಐಆರ್ ನಲ್ಲಿ ಆಸ್ಥಾನಾ ಹೆಸರು ಇಲ್ಲ.

ಕಿತ್ತಾಟ ಜಾಸ್ತಿಯಾಗಿದ್ದು ಹೇಗೆ?
ಭ್ರಷ್ಟಾಚಾರ ಆರೋಪವಿರುವ ರಾಕೇಶ್ ಆಸ್ಥಾನಾ ನೇಮಕಕ್ಕೆ ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಆರಂಭದಿಂದಲೂ ವಿರೋಧ ವ್ಯಕ್ತಪಡಿಸಿದ್ದರು. ಸ್ಟರ್ಲಿಂಗ್ ಬಯೋಟಿಕ್ ಕಂಪನಿಯ ತನಿಖೆ ವೇಳೆ ಮೂಗು ತೂರಿಸದಂತೆ ಸಿಬಿಐ ನಿರ್ದೇಶಕ ಅಲೋಕ್ ವರ್ಮಾ, ರಾಕೇಶ್ ಆಸ್ಥಾನಾಗೆ ಸೂಚಿಸಿದ್ದರು. ವರ್ಮಾ ಮಾತನ್ನೇ ಪರಿಗಣಿಸದೇ ಆಸ್ಥಾನಾ ಸಿಬಿಐ ಕಚೇರಿಯಲ್ಲಿ ಪೂರ್ಣ ಪ್ರಮಾಣದ ಮುಖ್ಯಸ್ಥರಂತೆ ವರ್ತಿಸಲು ಆರಂಭಿಸಿದ್ದರು. ಸಿಬಿಐನಲ್ಲಿ ವಿಚಾರಣೆ ಹಂತದಲ್ಲಿರುವ ಪ್ರಕರಣಗಳ ಕುರಿತು ಸಭೆ ಕರೆಯುವುದು, ಅಧಿಕಾರಗಳ ಜೊತೆ ಚರ್ಚೆ ನಡೆಸಲು ಆರಂಭಿಸಿದ್ದರು. ಅಸ್ಥಾನ ಅಲೋಕ್ ವರ್ಮಾ ಅವರನ್ನ ಟಾರ್ಗೆಟ್ ಮಾಡಲು ಶುರು ಮಾಡಿದ್ದು ಸಿಬಿಐ ಕಚೇರಿಯೋಳಗೆ ಪರಿಸ್ಥಿತಿ ಕೆಟ್ಟು ಈ ಹಂತಕ್ಕೆ ಬಂದು ನಿಲ್ಲಲು ಬಹುದೊಡ್ಡ ಕಾರಣ ಎಂದು ವರದಿಯಾಗಿದೆ.

ರಾಕೇಶ್ ಆಸ್ಥಾನಾ ಯಾರು?
ಅಸ್ಥಾನ 1984 ರ ಗುಜರಾತ್ ಕೇಡರ್ನ ಐಪಿಎಸ್ ಅಧಿಕಾರಿ. ಆರ್‍ಜೆಡೆ ಮುಖ್ಯಸ್ಥ ಲಾಲುಪ್ರಸಾದ್ ಯಾದವ್ ಅವರ ಬಹುಕೋಟಿ ಮೇವು ಹಗರಣ, ಗುಜರಾತ್ ನ ಗೋದ್ರಾ ಹತ್ಯಾಕಾಂಡ, ಹಾಗೂ 2008 ರಲ್ಲಿ ನಡೆದ ಅಹ್ಮದಾಬಾದ್ ಬಾಂಬ್ ಬ್ಲಾಸ್ಟ್ ಪ್ರಕರಣಗಳ ತನಿಖೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕಾಂಗ್ರೆಸ್ ಸರ್ಕಾರದ ಬಹುದೊಡ್ಡ ಹಗರಣ ಎಂದು ಕರೆಯಲಾಗುವ ಅಗಸ್ತವೆಸ್ಟ್‍ಲ್ಯಾಂಡ್, ಕಲ್ಲಿದ್ದಲು ಹಗರಣ ಹಾಗೂ ಬ್ಯಾಂಕುಗಳಿಗೆ ವಂಚಿಸಿ ವಿದೇಶ ಸೇರಿರುವ ಉದ್ಯಮಿ ವಿಜಯ ಮಲ್ಯ ಪ್ರಕರಣಗಳ ತನಿಖೆಯನ್ನು ನಡೆಸುತ್ತಿದ್ದಾರೆ. ಗುಜರಾತ್ ಕೇಡರ್ ಐಪಿಎಸ್ ಅಧಿಕಾರಿಯಾದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಆಪ್ತ ಅಧಿಕಾರಿಯೂ ಆಗಿದ್ದರು. ಜಾರಿ ನಿರ್ದೇಶನಾಲಯ(ಇಡಿ)ಯಲ್ಲೂ ಆಸ್ಥಾನಾ ಉತ್ತಮ ಸಂಪರ್ಕ ಇಟ್ಟುಕೊಂಡಿದ್ದರು.

ಅಲೋಕ್ ವರ್ಮಾ ಯಾರು?
ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಕೂಡಾ ಪ್ರಧಾನಿ ಆಪ್ತ ವಲಯದ ಅಧಿಕಾರಿ. 2016 ರಲ್ಲಿ ಸಿಬಿಐ ಹೆಚ್ಚುವರಿ ನಿರ್ದೇಶಕರಾಗಿದ್ದ ಆರ್.ಕೆ ದತ್ತಾ ಅವರನ್ನ ಕೇಂದ್ರ ಗೃಹ ಇಲಾಖೆಗೆ ತುರ್ತು ವರ್ಗಾವಣೆ ಮಾಡಲಾಗಿತ್ತು. ಆಗ ನಿರ್ದೇಶಕರಾಗಿದ್ದ ಅನಿಲ್ ಸಿನ್ಹಾ ಅವಧಿ ಬಳಿಕ ದತ್ತಾ ಅವರನ್ನು ಸಿಬಿಐ ನಿರ್ದೇಶಕ ಸ್ಥಾನಕ್ಕೆ ಬಡ್ತಿ ನೀಡಲು ಪ್ಲಾನ್ ಮಾಡಲಾಗಿತ್ತು ಆದರೆ ಗೃಹ ಇಲಾಖೆಗೆ ದತ್ತಾ ವರ್ಗಾವಣೆಯಾದ ಹಿನ್ನೆಲೆಯಲ್ಲಿ ಖಾಲಿಯಾಗಿದ್ದ ಸಿಬಿಐ ನಿರ್ದೇಶಕ ಹುದ್ದೆಗೆ 2017ರ ಜನವರಿಯಲ್ಲಿ ವರ್ಮಾ ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿತ್ತು. ಅಲೋಕ್ ವರ್ಮಾ ಕೂಡಾ ಪ್ರಭಾವಿ ಅಧಿಕಾರಿಯಾಗಿದ್ದು ರಾಷ್ಟ್ರೀಯ ಭದ್ರತಾ ಸಲಹೆಗಾರ ಹಾಗೂ ಮೋದಿ ಆಪ್ತ ಎಂದು ಕರೆಯಲ್ಪಡುವ ಅಜಿತ್ ದೊವೇಲ್ ಅವರ ಆಪ್ತ.

ಕಿತ್ತಾಟ ಬಯಲಾಗಿದ್ದು ಹೇಗೆ?
ಸಿಬಿಐ ಕಚೇರಿ ಒಳಗೆ ಆತಂರಿಕವಾಗಿ ನಡೆಯುತ್ತಿದ್ದ ಈ ಜಗಳ ಮೊದಲು ಹೊರ ಬಂದಿದ್ದು ಈ ವರ್ಷದ ಜುಲೈನಲ್ಲಿ. ಕೇಂದ್ರ ವಿಚಕ್ಷಣ ದಳ(ಸಿವಿಸಿ) ಜುಲೈ 12 ರಂದು ಸಿಬಿಐ ನೇಮಕಾತಿ ಸಂಬಂಧಿಸಿದ ಸಭೆಗೆ ಭಾಗವಹಿಸುವಂತೆ ಸಿಬಿಐ ನಿರ್ದೇಶಕರಿಗೆ ಪತ್ರ ಬರೆದಿತ್ತು. ಈ ವೇಳೆ ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ರಜೆ ಮೇಲಿದ್ದ ಕಾರಣ ಸಭೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಿಲ್ಲ ಜುಲೈ 19ಕ್ಕೆ ಸಭೆ ನಿಗದಿಪಡಿಸುವಂತೆ ಸಿವಿಸಿಗೆ ಮರು ಪತ್ರ ಬರೆದಿದ್ದರು. ವಿಶೇಷ ನಿರ್ದೇಶಕರಾಗಿದ್ದ ರಾಕೇಶ್ ಆಸ್ಥಾನಾ ಅವರ ಹೆಸರು ಭ್ರಷ್ಟಾಚಾರ ಪ್ರಕರಣದಲ್ಲಿ ಕೇಳಿ ಬಂದ ಹಿನ್ನೆಲೆ ಅವರು ಸಭೆಯಲ್ಲಿ ಪಾಲ್ಗೊಳ್ಳುವ ಅಧಿಕಾರವಿಲ್ಲ ಎಂದು ವರ್ಮಾ ಪತ್ರದಲ್ಲಿ ಉಲ್ಲೇಖಿಸಿದ್ದರು. ಇದರಿಂದ ಆಕ್ರೋಶಗೊಂಡ ಆಸ್ಥಾನಾ ಭ್ರಷ್ಟಾಚಾರ ಪ್ರಕರಣದಲ್ಲಿ ಅಲೋಕ್ ವರ್ಮಾ ಸಹ ಭಾಗಿಯಾಗಿದ್ದಾರೆ ಎಂದು ಪ್ರತ್ಯಾರೋಪ ಮಾಡಿ ಕ್ಯಾಬಿನೆಟ್ ಕಾರ್ಯದರ್ಶಿ ಪತ್ರ ಬರೆದಿದ್ದರು ಈ ಮೂಲಕ ನಾಲ್ಕು ಗೋಡೆ ಮಧ್ಯೆ ನಡೆಯುತ್ತಿದ್ದ ಇಬ್ಬರು ಉನ್ನತ ಅಧಿಕಾರಿಗಳ ಬಯಲಿಗೆ ಬಂದಿತ್ತು.

ಅಲೋಕ್ ವರ್ಮಾ ಮೇಲಿರುವ ಆರೋಪ ಏನು?
ಕ್ಯಾಬಿನೆಟ್ ಕಾರ್ಯದರ್ಶಿ ಬರೆದ ಪತ್ರದಲ್ಲಿ, ದೇಶದ ಬಹುದೊಡ್ಡ ಮಾಂಸ ರಫ್ತುದಾರ, ಹವಾಲಾ ದಂಗೆಕೋರ, ಉದ್ಯಮಿ ಮೋಯಿನ್ ಖುರೇಷಿ ಪ್ರಕರಣ ತನಿಖೆ ನಡೆಸಲು ಹೈದರಾಬಾದ್ ಮೂಲದ ಉದ್ಯಮಿ ಸತೀಶ್ ಸಾನಾ ಅವರಿಂದ ಎರಡು ಕೋಟಿ ಲಂಚ ಪಡೆದಿದ್ದಾರೆ ಎಂದು ಅಸ್ತಾನಾ ಆರೋಪಿಸಿದ್ದರು. ಖರೇಷಿ ಪ್ರಕರಣದಲ್ಲಿ ಸಾನಾ ಭಾಗಿಯಾಗಿದ್ದು ಪ್ರಕರಣದಿಂದ ಕೈ ಬಿಡಲು ವರ್ಮಾ ಲಂಚ ಪಡೆದಿದ್ದಾರೆ. ಈ ಪ್ರಕರಣದ ಆರೋಪಿಯಾದ ಸತೀಶ್ ಸಾನಾ ಬಂಧಿಸಲು ಹೋದಾಗ ಪ್ರಕ್ರಿಯೆ ನಡೆಸದಂತೆ ಅಲೋಕ್ ವರ್ಮಾ ಸೂಚಿಸಿದ್ದರು ಎಂದು ಅಸ್ಥಾನಾ ಕ್ಯಾಬಿನೆಟ್ ಕಾರ್ಯದರ್ಶಿ ಅವರಿಗೆ ಪತ್ರ ಬರೆದಿದ್ದರು.

ಪ್ರಕರಣ ದಿಢೀರ್ ತಿರುವು ಪಡೆದಿದ್ದು ಹೇಗೆ?
ಬಂಧಿಸಿ ವಿಚಾರಣೆ ವೇಳೆ ಸತೀಶ್ ಸಾನಾ ನಾನು ಆಸ್ಥಾನಗೆ ಪ್ರಕರಣದಿಂದ ಕೈ ಬಿಡುವಂತೆ 3 ಕೋಟಿ ರೂ. ಹಣದ ಡೀಲ್ ನಡೆದಿದೆ ಎಂದು ಬಾಯಿಬಿಟ್ಟಿದ್ದ. ಈ ಪ್ರಕರಣ ಸಂಬಂಧ ದುಬೈ ಮೂಲದ ಮಧ್ಯವರ್ತಿ ಮನೋಜ್ ಪ್ರಸಾದ್ ಎಂಬಾತನನ್ನು ದೆಹಲಿಯಲ್ಲಿ ಬಂಧಿಸಲಾಗಿತ್ತು. ಆತನ ವಿಚಾರಣೆ ವೇಳೆ 1.75 ಕೋಟಿ ಲಂಚದ ಹಣವನ್ನು ಸಂಗ್ರಹಿಸಲು ದೆಹಲಿಗೆ ಬಂದಿರುವುದಾಗಿ ಮನೋಜ್ ಪ್ರಸಾದ್ ತಿಳಿಸಿದ್ದ. ಅಷ್ಟೇ ಅಲ್ಲದೇ ಕಳೆದ ವರ್ಷ ಅಸ್ಥಾನಾ ಲಂಡನ್ ಗೆ ಬಂದಿದ್ದಾಗ ಮನೋಜ್ ಜೊತೆ ನನ್ನ ನಿವಾಸದಲ್ಲಿ ತಂಗಿದ್ದರು ಎಂಸು ಸತೀಶ್ ಸಾನಾ ಹೇಳಿದ್ದ ಎನ್ನಲಾಗಿದೆ. ಈ ಹೇಳಿಕೆಯನ್ನು ಆಧಾರಿಸಿ ಸಿಬಿಐ ರಾಕೇಶ್ ಅಸ್ಥಾನಾ ವಿರುದ್ಧ ಎಫ್‍ಐಆರ್ ದಾಖಲಿಸುತ್ತದೆ. ಪ್ರಕರಣದಲ್ಲಿ ಅಸ್ಥಾನಾಗೆ ಸಹಾಯ ಮಾಡಿದ ಆರೋಪದ ಮೇಲೆ ಸಿಬಿಐ ಅಧಿಕಾರಿ ಡಿಎಸ್ಪಿ ದೇವೇಂದ್ರ ಕುಮಾರ್ ಅವರ ದೆಹಲಿಯ ಸಿಬಿಐ ಪ್ರಧಾನ ಕಚೇರಿ ಮೇಲೆ ಸಿಬಿಐ ಸೋಮವಾರ ದಾಳಿ ನಡೆಸಿ ಬಂಧಿಸಲಾಗಿದೆ.
– ಶಬ್ಬೀರ್ ನಿಡಗುಂದಿ

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Click to comment

Leave a Reply

Your email address will not be published. Required fields are marked *