ಚೆನ್ನೈ: ತಮಿಳುನಾಡಿನ ಶಿವಗಂಗೈ ಜಿಲ್ಲೆಯ ಮಾದಾಪುರಂ ದೇವಸ್ಥಾನದ ಭದ್ರತಾ ಸಿಬ್ಬಂದಿ ಅಜಿತ್ ಕುಮಾರ್ (27) ಲಾಕಪ್ ಡೆತ್ (Tamil Nadu Custodial Death) ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ತನಿಖಾ ದಳ (CBI) ಪೊಲೀಸ್ (Police )ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಿದೆ.
ಲಾಕಪ್ ಡೆತ್ ಪ್ರಕರಣಕ್ಕೆ ಸಂಬಂಧಿಸಿದಂತೆ ತಿರುಪ್ಪುವನಂ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಬಳಿಕ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಸರ್ಕಾರ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಿತ್ತು. ಈ ವೇಳೆ, ಮಧ್ಯ ಪ್ರವೇಶಿಸಿದ್ದ ನ್ಯಾಯಾಲಯ ಹೆಚ್ಚಿನ ತನಿಖೆಗೆ ಆದೇಶಿಸಿ, ಸಿಬಿಐಗೆ ತನಿಖಾಧಿಕಾರಿ ನೇಮಿಸುವಂತೆ ಸೂಚಿಸಿತ್ತು. ಇದೀಗ ಹಲ್ಲೆ ನಡೆಸಿದ್ದ ಪೊಲೀಸರ ವಿರುದ್ಧ ಸಿಬಿಐ ಎಫ್‌ಐಆರ್ ದಾಖಲಿಸಿದೆ. ಇದನ್ನೂ ಓದಿ: Custodial Death Case | ದೇಹದ ಮೇಲೆ 44 ಗಾಯದ ಗುರುತು, ಮೆದುಳಿನಲ್ಲಿ ರಕ್ತಸ್ರಾವ – ಮರಣೋತ್ತರ ಪರೀಕ್ಷಾ ವರದಿ ಔಟ್
ನಿಕಿತಾ ಎಂಬ ಮಹಿಳೆ ನೀಡಿದ್ದ ಆಭರಣ ಕಳ್ಳತನದ ದೂರಿನ ಮೇರೆಗೆ ಅಜಿತ್ ಅವರನ್ನು ವಿಚಾರಣೆಗಾಗಿ ಪೊಲೀಸರು ಕರೆದುಕೊಂಡು ಹೋಗಿದ್ದರು. ಅವರಿಗೆ ಪೊಲೀಸ್ ಠಾಣೆಯಲ್ಲಿ ಚಿತ್ರಹಿಂಸೆ ನೀಡಲಾಗಿತ್ತು. ಇದರಿಂದ ಅವರು ಸಾವನ್ನಪ್ಪಿದ್ದರು. ಅವರ ಮರಣೋತ್ತರ ಪರೀಕ್ಷೆಯಲ್ಲಿ 40 ಕ್ಕೂ ಹೆಚ್ಚು ಗಾಯಗಳು ಪತ್ತೆಯಾಗಿತ್ತು.
ನ್ಯಾಯಾಂಗ ತನಿಖಾ ವರದಿಯಲ್ಲೂ ಅಜಿತ್‌ಗೆ ಚಿತ್ರಹಿಂಸೆ ನೀಡಲಾಗಿದೆ ಎಂದು ಉಲ್ಲೇಖಿಸಲಾಗಿತ್ತು. ಇದಾದ ಬಳಿಕ ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠ, ಇದು ಅಕ್ರಮ ಬಂಧನ ಮತ್ತು ಕಸ್ಟಡಿಯಲ್ಲಿ ನಡೆದ ಹಿಂಸಾಚಾರದ ಸ್ಪಷ್ಟ ಪ್ರಕರಣವಾಗಿದೆ ಎಂದು ಹೇಳಿತ್ತು. ಇದೇ ವೇಳೆ, ಒಂದು ವಾರದೊಳಗೆ ತನ್ನ ತನಿಖಾ ತಂಡವನ್ನು ನೇಮಿಸಿ ಆಗಸ್ಟ್ 20 ರೊಳಗೆ ಅಂತಿಮ ವರದಿಯನ್ನು ಸಲ್ಲಿಸುವಂತೆ ಸಿಬಿಐಗೆ ನಿರ್ದೇಶಿಸಿತ್ತು.
ಪ್ರಕರಣ ಸಂಬಂಧ ತಮಿಳುನಾಡು (Tamil Nadu) ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಶಂಕರ್ ಜಿವಾಲ್ ಶುಕ್ರವಾರ ಕ್ಷಮೆಯಾಚಿಸಿದ್ದರು. ಇದನ್ನೂ ಓದಿ: ತಮಿಳುನಾಡು ಲಾಕಪ್ ಡೆತ್ ಪ್ರಕರಣ – ಕ್ಷಮೆಯಾಚಿಸಿದ ಪೊಲೀಸ್ ಮುಖ್ಯಸ್ಥ