ನವದೆಹಲಿ: ಪ್ರಶ್ನೆಗಾಗಿ ಹಣ ಪಡೆದ ಆರೋಪದ ಮೇಲೆ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್‍ನ (Trinamool Congress) ಮಾಜಿ ಸಂಸದೆ ಮಹುವಾ ಮೊಯಿತ್ರಾ (Mahua Moitra) ಅವರಿಗೆ ಸಂಬಂಧಿಸಿದ ಕೋಲ್ಕತ್ತಾದ ಹಲವು ಸ್ಥಳಗಳಲ್ಲಿ ಕೇಂದ್ರೀಯ ತನಿಖಾ ದಳ (CBI) ಶೋಧ ಕಾರ್ಯ ನಡೆಸುತ್ತಿದೆ. ಮಹುವಾ ಮೊಯಿತ್ರಾ ವಿರುದ್ಧ ಎಫ್‍ಐಆರ್ ದಾಖಲಾದ ಬಳಿಕ ಈ ಬೆಳವಣಿಗೆ ನಡೆದಿದೆ.
ಬಿಜೆಪಿ ಲೋಕಸಭಾ ಸದಸ್ಯ ನಿಶಿಕಾಂತ್ ದುಬೆ ಅವರು ಮೊಯಿತ್ರಾ ವಿರುದ್ಧ ಪ್ರಶ್ನೆಗಾಗಿ ಹಣ ಪಡೆದ ಆರೋಪ ಮಾಡಿದ್ದರು. ಇದೀಗ ಮೊಯಿತ್ರಾ ವಿರುದ್ಧ ಲೋಕಪಾಲ್ ನಿರ್ದೇಶನದ ಮೇರೆಗೆ ಎಫ್‍ಐಆರ್ ದಾಖಲಿಸಲಾಗಿದ್ದು, ಪ್ರಕರಣದ ವಿರುದ್ಧ ತನಿಖೆ ಆರಂಭಗೊಂಡಿದೆ.
Advertisement
Advertisement
ಕೈಗಾರಿಕೋದ್ಯಮಿ ಗೌತಮ್ ಅದಾನಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ಪ್ರಶ್ನೆಗಳ ದಾಳಿ ಮಾಡಲು ದುಬೈ ಮೂಲದ ಉದ್ಯಮಿ ದರ್ಶನ್ ಹಿರಾನಂದನಿ ಅವರಿಂದ ನಗದು ಮತ್ತು ಉಡುಗೊರೆಗಳನ್ನು ಪಡೆದು ಟಿಎಂಸಿ ನಾಯಕಿ ಲೋಕಸಭೆಯಲ್ಲಿ ಪ್ರಶ್ನೆಗಳನ್ನು ಕೇಳಿದ್ದಾರೆ ಎಂದು ನಿಶಿಕಾಂತ್ ದುಬೆ ಆರೋಪಿಸಿದ್ದರು. ಈ ಆರೋಪಗಳನ್ನು ಮೊಯಿತ್ರಾ ಅವರು ನಿರಾಕರಿಸಿದ್ದಾರೆ.
Advertisement
Advertisement
ಲೋಕಪಾಲ್ ಸಿಬಿಐನಿಂದ ಆರು ತಿಂಗಳೊಳಗೆ ತನಿಖಾ ವರದಿ ಕೇಳಿದೆ. ತನಿಖೆಯ ಸ್ಥಿತಿಗತಿ ಕುರಿತು ಮಾಸಿಕ ವರದಿ ಸಲ್ಲಿಸುವಂತೆ ಸಿಬಿಐಗೆ ಸೂಚಿಸಲಾಗಿದೆ. ಮಹುವಾ ಮೊಯಿತ್ರಾ ಅವರನ್ನು ಕಳೆದ ವರ್ಷ ಲೋಕಸಭೆಯಿಂದ ಉಚ್ಛಾಟನೆ ಮಾಡಲಾಗಿತ್ತು. ಉಚ್ಚಾಟನೆಯನ್ನು ಪ್ರಶ್ನಿಸಿ ಮಹುವಾ ಮೊಯಿತ್ರಾ ಸುಪ್ರೀಂ ಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಈ ಹಿಂದೆ ಗೆದ್ದಿದ್ದ ಕೃಷ್ಣನಗರ ಕ್ಷೇತ್ರದಿಂದ ಟಿಎಂಸಿಯಿಂದ ಅವರನ್ನು ಕಣಕ್ಕಿಳಿಸಲಾಗಿದೆ.