ಬೆಂಗಳೂರು: ಪ್ರಿಯತಮೆಯ ಭೇಟಿಗೆ ಬಂದು ನಕ್ಸಲನೊಬ್ಬ (Naxal) ಸಿಸಿಬಿ ಪೊಲೀಸರ (CCB) ಬಲೆಗೆ ಬಿದ್ದಿರುವ ಘಟನೆ ನಗರದ (Bengaluru) ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ನಡೆದಿದೆ.
ತಮಿಳುನಾಡು ಮೂಲದ ಅನಿರುದ್ದ್ ರಾಜನ್ ಬಂಧಿತ ನಕ್ಸಲ್ ಆಗಿದ್ದು, ಈತ ಸಿಪಿಐ ಮಾವೋವಾದಿಗಳ ಪರವಾಗಿ ಕೊರಿಯರ್ ರೀತಿ ಕೆಲಸ ಮಾಡುತ್ತಿದ್ದ. ಹಣ ಸಂಗ್ರಹಣೆ, ವಸ್ತುಗಳ ಸಾಗಾಟ, ಗುಪ್ತ ಸಭೆಗಳು. ಆಸಕ್ತ ಯುವಕರನ್ನು ಒಗ್ಗೂಡಿಸಿ ತರಬೇತಿ ನೀಡುತ್ತಿದ್ದ. ಅಲ್ಲದೇ ಆರೋಪಿ ನಿಷೇಧಿತ ಬರಹಗಳನ್ನು ಹಂಚುತ್ತಿದ್ದ ಎಂದು ತಿಳಿದು ಬಂದಿದೆ. ಆದರೆ ಇದುವರೆಗೂ ಈತ ಯಾವ ಪೊಲೀಸರಿಗೂ ಸಿಕ್ಕಿಬಿದ್ದಿರಲಿಲ್ಲ.
ಪ್ರೇಯಸಿಯನ್ನು ನೋಡಲು ಬೆಂಗಳೂರಿಗೆ ಗುರುವಾರ ಬಂದಿದ್ದ ಎಂಬ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಆತನನ್ನು ಬಂಧಿಸಿದ್ದಾರೆ.
ಬಂಧಿತನಿಂದ 2 ಬ್ಯಾಗ್‍ಗಳಲ್ಲಿ ದಾಖಲೆಗಳು, 2 ಲ್ಯಾಪ್ ಟಾಪ್, ಪೆನ್‍ಡ್ರೈವ್‍ಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿ ವಿರುದ್ಧ ಯುಎಪಿಎ ಕಾಯ್ದೆ ಅಡಿ ಪ್ರಕರಣ ದಾಖಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ.