ಬೆಂಗಳೂರು: ರಾಜ್ಯದಲ್ಲಿ ರಾಹುಲ್ ಗಾಂಧಿ (Rahul Gandhi) ಅವರೊಂದಿಗೆ ಭಾರತ್ ಜೋಡೋ (Bharat Jodo Yatra) ಯಾತ್ರೆಗೆ ಸಜ್ಜಾಗುತ್ತಿರುವ ಹೊತ್ತಿನಲ್ಲೇ ಕೆಪಿಸಿಸಿ (KPCC) ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಅವರಿಗೆ ಸಿಬಿಐ (CBI) ಶಾಕ್ ನೀಡಿದೆ.
ಸ್ಥಳೀಯ ಕಂದಾಯ ಅಧಿಕಾರಿಗಳೊಂದಿಗೆ ಬಂದಿದ್ದ ಸಿಬಿಐ (CBI) ಅಧಿಕಾರಿಗಳು ತಹಶಿಲ್ದಾರ್ ಸಮ್ಮುಖದಲ್ಲಿ ಡಿಕೆ ಶಿವಕುಮಾರ್ ಅವರ ಕನಕಪುರದಲ್ಲಿರುವ ಆಸ್ತಿಯನ್ನು ಸಂಪೂರ್ಣ ಮೌಲ್ಯಮಾಪನ ಮಾಡಿದ್ದಾರೆ. ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೂ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ರಕ್ಷಣಾ ಪಡೆಗಳ ಮುಖ್ಯಸ್ಥರಾಗಿ ಅನಿಲ್ ಚೌಹಾಣ್ ನೇಮಕ
ಕನಕಪುರದ ಆಸ್ತಿ ಸಂಪೂರ್ಣ ಮೌಲ್ಯಮಾಪನ ಮಾಡಿದ ಸಿಬಿಐ ಅಧಿಕಾರಿಗಳು, ಡಿಕೆ ಶಿವಕುಮಾರ್, ಗೌರಮ್ಮ, ತಂದೆ ಕೆಂಪೇಗೌಡ, ಸಹೋದರ ಸುರೇಶ್, ಪತ್ನಿ ಉಷಾ, ಮಕ್ಕಳ ಹೆಸರಿನ ದಾಖಲಾತಿಗಳನ್ನು ಪಡೆದು ಪರಿಶೀಲಿಸಿದ್ದಾರೆ. ಬಳಿಕ ನಕಲು ಪ್ರತಿಗಳನ್ನು ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ – ಇಡಿ ವಿರುದ್ಧ ಡಿಕೆ ಶಿವಕುಮಾರ್ ಕಿಡಿ
5 ವರ್ಷದಲ್ಲಿ 75 ಕೋಟಿಗೂ ಅಧಿಕ ಆಸ್ತಿಗಳಿಸಿರುವ ಸಂಬಂಧ ಡಿಕೆಶಿ ವಿರುದ್ಧ ಸಿಬಿಐ ಎಫ್‌ಐಆರ್ (FIR) ದಾಖಲಿಸಿತ್ತು. ತನ್ನ ಮೇಲಿನ ಪ್ರಕರಣವನ್ನು ರದ್ದು ಮಾಡುವಂತೆ ಡಿಕೆ ಶಿವಕುಮಾರ್ ಹೈಕೋರ್ಟ್ (Karnataka HighCourt) ಮೇಟ್ಟಿಲೇರಿದ್ದರು. ಇದರ ಬೆನ್ನಲ್ಲೇ ಸಿಬಿಐ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಸಿಬಿಐ ಪರ ವಕೀಲರು ಹೆಚ್ಚುವರಿ ಆಕ್ಷೇಪಣೆಗೆ ಕಾಲಾವಧಿ ಕೇಳಿದ ಅರ್ಜಿ ಸಲ್ಲಿಸಿದ್ದರು. ನಂತರ ಆಸ್ತಿ ಮೌಲ್ಯಮಾಪನ ಮಾಡಿ ಹೆಚ್ಚಿನ ಆಕ್ಷೇಪಣೆ ಸಲ್ಲಿಕೆಗೆ ಕಾಲಾವಕಾಶ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಸಿಬಿಐ ಅಧಿಕಾರಿಗಳು ಸಿಪಿಡಬ್ಲ್ಯೂಡಿ ಅಧಿಕಾರಿಗಳ ಜೊತೆ ತೆರಳಿ ಮೌಲ್ಯಮಾಪನ ಮಾಡಿದ್ದಾರೆ.
ಇದು ದಾಳಿಯಲ್ಲ, ತನಿಖೆಯ ಬೆಳವಣಿಗೆ:
ಇದು ದಾಳಿಯಲ್ಲ, ತನಿಖೆಯ ಒಂದು ಬೆಳವಣಿಗೆ. ಇಲ್ಲಿ ಆಸ್ತಿ ಮೌಲ್ಯಮಾಪನ ಮಾಡುತ್ತಾರೆ. ಆದಾಯ ಮೀರಿ ಆಸ್ತಿ ಗಳಿಕೆ ಹಿನ್ನೆಲೆ ಪ್ರಕರಣ ದಾಖಲಾಗಿರುವುದರಿಂದ ಇದರಲ್ಲಿ ಯಾವುದೇ ವಿಚಾರಣೆ ಇರೋದಿಲ್ಲ. ಅದರಂತೆ ಡಿಕೆಶಿ ಆದಾಯದ ಮೂಲಗಳಿಕೆ ವ್ಯತ್ಯಾಸ ಪತ್ತೆ ಮಾಡಲು ಆಸ್ತಿ ಮೌಲ್ಯಮಾಪನ ಮಾಡಲಾಗಿದೆ. ಮೌಲ್ಯಮಾಪನದ ಜೊತೆಗೆ ಲ್ಯಾಟ್ ಲಾಂಗ್ ಮಾಡಿದ ಸಿಬಿಐ ಅಧಿಕಾರಿಗಳು, ಶೀಘ್ರದಲ್ಲಿಯೇ ದೋಷಾರೋಪ ಸಲ್ಲಿಕೆ ಮಾಡಲು ಕ್ರಮ ಕೈಗೊಳ್ಳುತ್ತಾರೆ. 10-15 ದಿನದಲ್ಲಿ ಡಿಕೆಶಿ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಲಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಡಿಕೆ ಶಿವಕುಮಾರ್, ಇಗ ತಾನೆ ನನಗೆ ಮನೆಯಿಂದ ಫೋನ್ ಬಂತು. ತಹಶಿಲ್ದಾರರನ್ನ ಕರೆದುಕೊಂಡು ಬಂದು ಸಿಬಿಐ ಅಧಿಕಾರಿಗಳು ಊರಿನ ಆಸ್ತಿಗಳನ್ನ ಪರಿಶೀಲನೆ ಮಾಡಿದ್ದಾರಂತೆ. ನಾನು ಎಲ್ಲಾ ದಾಖಲೆಗಳನ್ನ ಕೊಟ್ಟಿದ್ದೇನೆ. ಕನಕಪುರ ಮನೆ, ತೋಟದ ಮನೆ, ಎಲ್ಲಾ ಆಸ್ತಿಗಳನ್ನ ನೋಡ್ಕೊಂಡು ಹೋಗಿದ್ದಾರೆ. ಇಷ್ಟು ಮಾತ್ರ ಗೊತ್ತು. ಇದು ನಮ್ಮ ಹಣೆಬರಹ ಎಂದು ಹೇಳಿದ್ದಾರೆ.
ಕೇಂದ್ರ ನಿಮ್ಮನ್ನ ಟಾರ್ಗೆಟ್ ಮಾಡುತ್ತಿದೆಯಾ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ, ಕೇಂದ್ರ ನಮ್ಮನ್ನ ಬಹಳ ಪ್ರೀತಿ ಮಾಡುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ.