ಚಂಡೀಗಢ: ಅಮೃತಸರದಲ್ಲಿ ಕಾಲ್ ಸೆಂಟರ್ ಮಾಡಿಕೊಂಡು, ಅಮೆರಿಕದ ಪ್ರಜೆಗಳನ್ನು ಟಾರ್ಗೆಟ್ ಮಾಡಿ ಸುಮಾರು 350 ಕೋಟಿ ರೂ.ಗಳಿಗೂ ಹೆಚ್ಚಿನ ಹಣ ವಂಚಿಸಿದ ಮೂವರು ಆರೋಪಿಗಳನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ.
ಖಾಲ್ಸಾ ಮಹಿಳಾ ಕಾಲೇಜಿನ ಎದುರಿನ ಗ್ಲೋಬಲ್ ಟವರ್‌ನಲ್ಲಿ ‘ಡಿಜಿಕಾಪ್ಸ್ ದಿ ಫ್ಯೂಚರ್ ಆಫ್ ಡಿಜಿಟಲ್’ ಹೆಸರಿನಲ್ಲಿ ಆರೋಪಿಗಳು ಕಾಲ್ ಸೆಂಟರ್ ಮಾಡಿಕೊಂಡಿದ್ದರು. 2023 ರಿಂದಲೂ ಅಮೆರಿಕದ ನಾಗರಿಕರಿಗೆ ಕೋಟಿ ಕೋಟಿ ಹಣವನ್ನು ವಂಚಿಸಿದ್ದಾರೆ. ಅಮೆರಿಕದ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್‌ನೊಂದಿಗೆ ಸಿಬಿಐ ನಿರಂತರ ಸಂಪರ್ಕದಲ್ಲಿ ಇದ್ದುಕೊಂಡು ವಂಚನೆ ಜಾಲದ ಗ್ಯಾಂಗ್‌ನ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ವರದಕ್ಷಿಣೆ ಕಿರುಕುಳ – 3 ವರ್ಷದ ಮಗಳೊಂದಿಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾದ ಶಿಕ್ಷಕಿ
ಬಂಧಿತರನ್ನು ಜಿಗರ್ ಅಹ್ಮದ್, ಯಶ್ ಖುರಾನಾ ಮತ್ತು ಇಂದರ್ ಜೀತ್ ಸಿಂಗ್ ಬಾಲಿ ಎಂದು ಗುರುತಿಸಲಾಗಿದೆ. ಆರೋಪಿಗಳು ಸಾಫ್ಟ್‌ವೇರ್ ಬಳಸಿಕೊಂಡು ಅಮೆರಿಕದ ಪ್ರಜೆಗಳ ಕಂಪ್ಯೂಟರ್ ಮತ್ತು ಬ್ಯಾಂಕ್ ಖಾತೆಗಳನ್ನು ಹ್ಯಾಕ್ ಮಾಡುತ್ತಿದ್ದರು. ಬಳಿಕ, ಬ್ಯಾಂಕ್‌ನಲ್ಲಿರೋ ನಿಮ್ಮ ಹಣಕ್ಕೆ ತೊಂದರೆ ಇದೆ, ಕ್ರಿಪ್ಟೋ ಕರೆನ್ಸಿಗೆ ವರ್ಗಾಯಿಸಿ ಎಂದು ಹೇಳುತ್ತಿದ್ದರು. ಕ್ರಿಪ್ಟೋ ಕರೆನ್ಸಿಗೆ ವರ್ಗಾಯಿಸುತ್ತಿದ್ದಂತೆ ವಂಚಕರು ಹಣ ಎಗರಿಸುತ್ತಿದ್ದರು.
ಬಂಧಿತರಿಂದ 54 ಲಕ್ಷ ರೂ., ಎಂಟು ಮೊಬೈಲ್‌ಗಳು ಮತ್ತು ಲ್ಯಾಪ್‌ಟಾಪ್‌ಗಳು ಸೇರಿದಂತೆ ಡಿಜಿಟಲ್ ಸಾಕ್ಷ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ. ಆ.18 ರಂದು ಈ ಸಂಬಂಧ ಎಫ್‌ಐಆರ್ ದಾಖಲಿಸಲಾಗಿತ್ತು. ಬಳಿಕ ಸಿಬಿಐ ಆ.20 ರಿಂದ ಅಮೃತಸರ ಮತ್ತು ದೆಹಲಿಯಲ್ಲಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿತ್ತು. ಇದನ್ನೂ ಓದಿ: ಹಾವೇರಿ | ಕತ್ತು ಸೀಳಿ ಡ್ಯಾನ್ಸ್ ಮಾಸ್ಟರ್ ಬರ್ಬರ ಹತ್ಯೆ – ಲಾಂಗ್‌ಡ್ರೈವ್ ಹೋಗಿ ಬರುತ್ತೇನೆ ಅಂದಾತ ಶವವಾಗಿ ಪತ್ತೆ