ನವದೆಹಲಿ: 20 ಲಕ್ಷ ರೂ. ಲಂಚ (Bribe) ಸ್ವೀಕರಿಸಿದ ಜಾರಿ ನಿರ್ದೇಶನಾಲಯದ (Enforcement Directorate) ಸಹಾಯಕ ನಿರ್ದೇಶಕನನ್ನು ಕೇಂದ್ರ ತನಿಖಾ ದಳ (CBI) ಗುರುವಾರ ಬಂಧಿಸಿದೆ.
ಬಂಧಿತ ಇ.ಡಿ ಅಧಿಕಾರಿಯನ್ನು ಸಂದೀಪ್ ಸಿಂಗ್ ಯಾದವ್ ಎಂದು ಗುರುತಿಸಲಾಗಿದೆ. ಪ್ರಕರಣವೊಂದರ ವಿಚಾರವಾಗಿ ಆಭರಣ ವ್ಯಾಪಾರಿಯಿಂದ ಇ.ಡಿ ಅಧಿಕಾರಿ ಲಂಚ ಸ್ವೀಕರಿಸುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಸಿಬಿಐ ಅಧಿಕಾರಿಗಳು ಬಲೆ ಬೀಸಿದ್ದರು. ಈ ವೇಳೆ ಸಂದೀಪ್ ಸಿಂಗ್ ರೆಡ್‍ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಇಡಿ ಅಧಿಕಾರಿಯನ್ನು ದೆಹಲಿಯ ಲಜಪತ್ ನಗರ ಪ್ರದೇಶದಲ್ಲಿ ಬಂಧಿಸಲಾಗಿದೆ ಎಂದು ಸಿಬಿಐ ಹಿರಿಯ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‍ಐಆರ್ ದಾಖಲಾಗಿದ್ದು, ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಆಗಸ್ಟ್ 2023ರಲ್ಲಿ, ದೆಹಲಿ ಮದ್ಯ ಹಗರಣ ಪ್ರಕರಣದಲ್ಲಿ ದೆಹಲಿಯ ಉದ್ಯಮಿ ಅಮನ್ ಧಾಲ್ ಅವರನ್ನು ರಕ್ಷಿಸಲು 5 ಕೋಟಿ ರೂ. ಲಂಚ ಸ್ವೀಕರಿಸಿದ್ದಕ್ಕಾಗಿ ಇಡಿಯ ಸಹಾಯಕ ನಿರ್ದೇಶಕ ಮತ್ತು ಇತರ ಆರು ಅಧಿಕಾರಿಗಳನ್ನು ಸಿಬಿಐ ಬಂಧಿಸಿತ್ತು.