ನವದೆಹಲಿ: ಮಕ್ಕಳ ಪೋರ್ನ್ ವಿಡಿಯೋಗಳನ್ನು ಅಪ್ಲೋಡ್ ಮಾಡಿ ಸೆಂಡ್ ಮಾಡ್ತಿದ್ದ ವಾಟ್ಸಪ್ ಗ್ರೂಪ್ ಒಂದರ ಮುಖ್ಯ ಅಡ್ಮಿನ್ ನನ್ನು ಸಿಬಿಐ ಬಂಧಿಸಿದೆ.
ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 67-ಬಿ ಅಡಿ 5 ಮಂದಿ ಅಡ್ಮಿನ್ ಮತ್ತು 119 ಮಂದಿ ಸದಸ್ಯರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ. ಈ ಗುಂಪಿನಲ್ಲಿ ಭಾರತ ಅಲ್ಲದೇ, ಅಮೆರಿಕ, ಪಾಕಿಸ್ತಾನ, ಚೀನಾ, ಬ್ರೆಜಿಲ್ ದೇಶದ ಸದಸ್ಯರು ಇದ್ದರು ಎನ್ನುವ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.
ಈ ಗ್ರೂಪ್ ನ ಮುಖ್ಯ ಅಡ್ಮಿನ್ ಆಗಿದ್ದ ಉತ್ತರಪ್ರದೇಶ ಕನೌಜ್ ನಿವಾಸಿ 20 ವರ್ಷದ ನಿಖಿಲ್ ವರ್ಮಾ ನನ್ನು ಸಿಬಿಐ ಬಂಧಿಸಿದೆ. ಈತನ ಜೊತೆ ಸತ್ಯೇಂದ್ರ ಚೌಹಾಣ್, ನಫೀಸ್ ರಾಜ, ಜಾಹೀದ್ ಮತ್ತು ಆದರ್ಶ್ ಅವರು ಅಡ್ಮಿನ್ ಗಳಾಗಿದ್ದು ದೆಹಲಿ, ಉತ್ತರಪ್ರದೇಶ, ಮಹರಾಷ್ಟ್ರದಲ್ಲಿ ಇವರ ಬಂಧನಕ್ಕೆ ಶೋಧ ಕಾರ್ಯ ಆರಂಭವಾಗಿದೆ.
“KidsXXX” ಹೆಸರಿನಲ್ಲಿ ಗ್ರೂಪ್ ಇದಾಗಿದ್ದು ಕಂಪ್ಯೂಟರ್ ನಲ್ಲಿದ್ದ ಹಾರ್ಡ್ ಡಿಸ್ಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಶೂಟ್ ಮಾಡಿ ಮಕ್ಕಳ ವಿಡಿಯೋವನ್ನು ಇವರು ಅಪ್ಲೋಡ್ ಮಾಡುತ್ತಿದ್ದರು ಎನ್ನುವ ಶಂಕೆ ವ್ಯಕ್ತವಾಗಿದ್ದು, ಎಲ್ಲ ಕೋನದಲ್ಲಿ ತನಿಖೆ ನಡೆಸಲಾಗುವುದು ಎಂದು ಸಿಬಿಐ ತಿಳಿಸಿದೆ.
ಸಿಬಿಐ ಅಮೆರಿಕ, ಪಾಕಿಸ್ತಾನ, ಬ್ರೆಜಿಲ್, ಅಫ್ಘಾನಿಸ್ತಾನ, ಶ್ರೀಲಂಕಾ, ಕೀನ್ಯಾ, ನೈಜಿರಿಯಾ, ಮೆಕ್ಸಿಕೋ, ನ್ಯೂಜಿಲೆಂಡ್ ದೇಶಗಳಿಗೆ ಪತ್ರ ಬರೆದು ತನಿಖೆಗೆ ಸಹಕಾರ ನೀಡುವಂತೆ ಕೋರಲಿದೆ. ಎರಡು ವರ್ಷಗಳ ಹಿಂದೆ ಈ ಗ್ರೂಪ್ ಕ್ರಿಯೆಟ್ ಆಗಿದ್ದು, ವಿಡಿಯೋದಲ್ಲಿ ಸೆರೆಯಾಗಿರುವ ಮಕ್ಕಳು ಯಾರು ಎನ್ನುವುದು ತಿಳಿದು ಬಂದಿಲ್ಲ ಎಂದು ಸಿಬಿಐ ತಿಳಿಸಿದೆ.
ಗುಪ್ತಚರ ಇಲಾಖೆಯೊಂದು ವಾಟ್ಸಪ್ ಗ್ರೂಪಿಗೆ ವಿವಿಧ ದೇಶಗಳಿಂದ ಬರುತ್ತಿರುವ ಟ್ರಾಫಿಕ್ ಆಧಾರಿಸಿ ಸಿಬಿಐಗೆ ಮಾಹಿತಿ ನೀಡಿತ್ತು. ಈ ಮಾಹಿತಿಯ ಆಧಾರದಲ್ಲಿ ಸಿಬಿಐ ಐಪಿ ಅಡ್ರೆಸ್ ಆಧಾರಸಿ ಆರೋಪಿಯ ಸ್ಥಳವನ್ನು ಪತ್ತೆ ಹಚ್ಚಿ ಬಂಧಿಸಿತ್ತು. ಇದನ್ನೂ ಓದಿ: ಈಗ ವಾಟ್ಸಪ್ ನಲ್ಲೂ ಹಣವನ್ನು ಸೆಂಡ್ ಮಾಡಿ!