ನವದೆಹಲಿ: ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಕರ್ನಾಟಕಕ್ಕೆ (Karnataka) ಮುಂದಿನ 18 ದಿನಗಳ ಕಾಲ ಪ್ರತಿ ದಿನ 3 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಆದೇಶಿಸಿದೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ಸಿಡಬ್ಲ್ಯೂಆರ್‌ಸಿ ಸಭೆ ನಡೆಸಿ ಅಕ್ಟೋಬರ್ 15ರವರೆಗೆ 3 ಸಾವಿರ ಕ್ಯೂಸೆಕ್ ನೀರನ್ನು ತಮಿಳುನಾಡಿನ (Tamil Nadu) ಬಿಳಿಗುಂಡ್ಲುಗೆ ಹರಿಸುವಂತೆ ಆದೇಶಿಸಿದೆ. ಇದನ್ನೂ ಓದಿ: ಇದೇನು ಕನ್ನಡಿಗರ ಸರ್ಕಾರವೋ? ಸ್ಟಾಲಿನ್ ಅಧೀನದಲ್ಲಿರುವ ಬಾಡಿಗೆ ಸರ್ಕಾರವೋ? – ಕಾಂಗ್ರೆಸ್ ವಿರುದ್ಧ ಹೆಚ್‌ಡಿಕೆ ಕಿಡಿ
Advertisement
ಕರ್ನಾಟಕದ ವಾದ ಏನಿತ್ತು?
ಇಂದಿನ ಸಭೆಯಲ್ಲಿ ಕರ್ನಾಟಕ ಸರ್ಕಾರ ರಾಜ್ಯದ 161 ತಾಲೂಕುಗಳನ್ನು ತೀವ್ರ ಬರ ಪೀಡಿತ ಮತ್ತು 34 ತಾಲೂಕುಗಳನ್ನು ಮಧ್ಯಮ ಬರ ಪೀಡಿತ ಎಂದು ಘೋಷಿಸಿದೆ. ಈ ಪೈಕಿ 32 ತೀವ್ರ ಬರ ಪೀಡಿತ ತಾಲೂಕುಗಳು ಮತ್ತು 15 ಮಧ್ಯಮ ಬರ ಪೀಡಿತ ತಾಲೂಕುಗಳು ಕಾವೇರಿ ಜಲಾನಯನ ಪ್ರದೇಶದಲ್ಲಿವೆ. ಬರ ಇರುವಾಗ ಜಲಾಶಯಗಳಿಂದ ನೀರನ್ನು ಬಿಡುಗಡೆ ಮಾಡುವ ಸ್ಥಿತಿಯಲ್ಲಿ ರಾಜ್ಯ ಸರ್ಕಾರ ಇಲ್ಲ ಎಂದು ಹೇಳಿತ್ತು.
Advertisement
Advertisement
ತಮಿಳುನಾಡು ವಾದ ಏನಿತ್ತು?
ಕಳೆದ ಜೂನ್‌ನಿಂದ ಸೆಪ್ಟೆಂಬರ್‌ವರೆಗೂ 123 ಟಿಎಂಸಿ ನೀರನ್ನು ಹರಿಸಬೇಕಿತ್ತು. ಕರ್ನಾಟಕ (Karnataka) ಈವರೆಗೂ ಕೇವಲ 40 ಟಿಎಂಸಿ ನೀರು ಹರಿಸಿದೆ. ಹೀಗಾಗಿ ಬಾಕಿ 83 ಟಿಎಂಸಿ ನೀರು ಕೂಡಲೇ ಬಿಡುಗಡೆ ಮಾಡಬೇಕು ಎಂದು ತಮಿಳುನಾಡು ವಾದ ಮಂಡಿಸಿತ್ತು.
Advertisement
ಸಮಿತಿ ಯಾವುದೇ ಕಾರಣಕ್ಕೂ ನೀರಿನ ಪ್ರಮಾಣವನ್ನು ಕಡಿಮೆ ಮಾಡಬಾರದು. ಅಕ್ಟೋಬರ್ 22 ಟಿಎಂಸಿ ನೀರನ್ನು ಸಹ ಕರ್ನಾಟಕ ಹರಿಸಬೇಕು. ರಾಜ್ಯಕ್ಕೆ ಹರಿಸಬೇಕಾದ ನೀರನ್ನು ಸಮಿತಿ ಕೊಡುವಂತೆ ಕರ್ನಾಟಕಕ್ಕೆ ಆದೇಶಿಸಬೇಕು ಎಂದು ತಮಿಳುನಾಡು ಬೇಡಿಕೆ ಇಟ್ಟಿತ್ತು.
ಸೆ.21ರ ಸಭೆಯಲ್ಲಿ ಸಿಡಬ್ಲ್ಯೂಆರ್‌ಸಿ ಪ್ರತಿನಿತ್ಯ ಮುಂದಿನ 15 ದಿನಗಳ ಕಾಲ ನಿತ್ಯ 5 ಸಾವಿರ ಕ್ಯೂಸೆಕ್ ನೀರು ಹರಿಸಬೇಕೆಂದು ಆದೇಶಿಸಿತ್ತು.
ತಮಿಳುನಾಡಿಗೆ ಕರ್ನಾಟಕದಿಂದ ನೀರು ಹರಿದಿದೆ ಎಂದು ಪತ್ತೆ ಮಾಡೋದು ಹೇಗೆ?
ತಮಿಳುನಾಡಿನ ಭಾಗದಲ್ಲಿರುವ ಬಿಳಿಗುಂಡ್ಲುವಿನಲ್ಲಿ ಎಷ್ಟು ಪ್ರಮಾಣದ ನೀರು ಹರಿದಿದೆ ಎಂದು ಪತ್ತೆ ಮಾಡಲು ಕೇಂದ್ರ ಜಲ ಆಯೋಗದ ಅಧಿಕಾರಿಗಳು ವರ್ಷವಿಡಿ ನೀರಿನ ಲೆಕ್ಕಾಚಾರ ಹಾಕುತ್ತಾರೆ. ಪ್ರತಿದಿನ ಬೆಳಗ್ಗೆ 8ರಿಂದ 10ರವರೆಗೆ ಎರಡು ಗಂಟೆಗಳ ಕಾಲ 160 ಮೀಟರ್ ಪ್ರದೇಶದ 15 ನಿರ್ದಿಷ್ಟ ಸ್ಥಳಗಳಲ್ಲಿ ಈ ಪರೀಕ್ಷೆ ನಡೆಯುತ್ತದೆ. 7 ಮಂದಿ ಸಿಬ್ಬಂದಿ ದೋಣಿ ಮೂಲಕ ಒಂದು ದಂಡೆಯಿಂದ ಮತ್ತೂಂದು ದಂಡೆಗೆ ಸಾಗಿ ತಮ್ಮ ಜೊತೆ ಇರುವ ಉಪಕರಣವನ್ನು ನೀರಿಗೆ ಬಿಡುತ್ತಾರೆ. ಈ ಮೂಲಕ ಪ್ರತಿ ಸೆಕೆಂಡ್‍ಗೆ ಎಷ್ಟು ನೀರು ಕರ್ನಾಟಕದಿಂದ ತಮಿಳುನಾಡಿಗೆ ಹೋಗುತ್ತಿದೆ ಎಂಬುದನ್ನು ಪತ್ತೆ ಮಾಡುತ್ತಾರೆ. ಈ ಸಿಬ್ಬಂದಿಯನ್ನು ಕರ್ನಾಟಕ, ತಮಿಳುನಾಡಿನ ಅಧಿಕಾರಿಗಳು ನೇರವಾಗಿ ಸಂಪರ್ಕಿಸುವಂತಿಲ್ಲ. ರಾಜ್ಯ ಸರ್ಕಾರಗಳು ಅಥವಾ ನ್ಯಾಯಾಲಯಗಳು ಕೇಳಿದರೆ ಮಾತ್ರ ಮಾಹಿತಿಯನ್ನು ನೀಡಲಾಗುತ್ತದೆ.
ಕ್ಯೂಸೆಕ್ ಮತ್ತು ಟಿಎಂಸಿ ಎಂದರೆ ಎಷ್ಟು?
ಕ್ಯೂಸೆಕ್ ಎಂಬುದು Cubic feet per Second ಹ್ರಸ್ವರೂಪ. ಪ್ರತಿ ಸೆಕೆಂಡಿಗೆ ಒಂದು ಘನ ಅಡಿ ನೀರು ಹರಿದರೆ ಅದು ಒಂದು ಕ್ಯೂಸೆಕ್ ನೀರು ಎಂದು ಕರೆಯಲ್ಪಡುತ್ತದೆ. ಒಂದು ಘನ ಅಡಿ ನೀರನ್ನು ಲೀಟರುಗಳಿಗೆ ಪರಿವರ್ತಿಸಿದರೆ ಸುಮಾರು 28.317 ಲೀಟರುಗಳಾಗುತ್ತವೆ. 11,524 ಕ್ಯೂಸೆಕ್ ನೀರು 24 ಗಂಟೆಯ ಕಾಲ ನಿರಂತರ ಹರಿದರೆ ಒಂದು ಟಿಎಂಸಿ ಎಂದು ಕರೆಯಲಾಗುತ್ತದೆ. 10 ಸಾವಿರ ಕ್ಯೂಸೆಕ್ ನೀರು 24 ಗಂಟೆ ನಿರಂತರ ಹರಿದರೆ 0.864 ಟಿಎಂಸಿ ಅಡಿ ಆಗುತ್ತದೆ. 35.87 ಅಡಿ ಅಳದಷ್ಟು ನೀರನ್ನು ಒಂದು ಚದರ ಮೈಲಿ ಪ್ರದೇಶದಲ್ಲಿ ಸಂಗ್ರಹಿಸಿದರೆ ಒಂದು ಟಿಎಂಸಿ ಅಡಿ ಆಗುತ್ತದೆ.
Web Stories