ನವದೆಹಲಿ: ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆ ವಿಚಾರವಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವ ತಮಿಳುನಾಡು ರಾಜ್ಯ ಸರ್ಕಾರದ ಮನವಿಯನ್ನು ಸ್ವೀಕರಿಸಿದ ನ್ಯಾಯಪೀಠ ಸ್ಕೀಂ ರಚನೆ ಗೊಂದಲದ ಬಗ್ಗೆ ಸ್ಪಷ್ಟನೆ ನೀಡಿದೆ.
ತಮಿಳುನಾಡು ಸರ್ಕಾರ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ಇಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠದಲ್ಲಿ ನಡೆಯಿತು. ಈ ವೇಳೆ ಫೆ.16 ರ ಆದೇಶದಲ್ಲಿ ಉಲ್ಲೇಖಿಸಲಾಗಿರುವ `ಸ್ಕೀಂ’ ಎಂದರೆ ನೀರು ನಿರ್ವಹಣಾ ಮಂಡಳಿಯನ್ನು ಸ್ಥಾಪಿಸಬೇಕು ಎಂದರ್ಥವಲ್ಲ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಸ್ಪಷ್ಟನೆ ನೀಡಿದರು.
ಸುಪ್ರಿಂಕೊರ್ಟ್ ನೀಡಿರುವ ತೀರ್ಪು ವ್ಯವಸ್ಥಿತವಾಗಿ ಅನುಷ್ಠಾನ ಆಗಬೇಕಾದರೆ ಅದಕ್ಕೊಂದು ವ್ಯವಸ್ಥಿತ ಸ್ಕೀಂ ಅವಶ್ಯಕತೆ ಇದೆ. ಅದನ್ನು ಮಂಡಳಿ ಎನ್ನಲಾಗದು. ಸ್ಕೀಂ ರಚನೆ ಹಾಗೂ ಅಧಿಕಾರದ ಬಗ್ಗೆ ಮುಂದಿನ ವಿಚಾರಣೆಯಲ್ಲಿ ಚರ್ಚಿಸುವುದಾಗಿ ಎಂದು ಪೀಠ ಅಭಿಪ್ರಾಯಪಟ್ಟಿತು.
ತಮಿಳುನಾಡಿನ ಕಷ್ಟವನ್ನು ನಾವು ಅರ್ಥಮಾಡಿಕೊಳ್ಳುತ್ತೇವೆ. ತಮಿಳುನಾಡಿಗೆ ಸಿಗಬೇಕಾದ ನ್ಯಾಯ ಸಿಗಲಿದೆ. ನಾವು ಕಾವೇರಿ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸುತ್ತೇವೆ. ಸಮಸ್ಯೆ ಬಗೆಹರಿಸಲು ಪೀಠವೊಂದನ್ನು ರಚಿಸಲಿದೆ ಎಂದು ಹೇಳಿ ಅರ್ಜಿ ವಿಚಾರಣೆಯನ್ನು ಏಪ್ರಿಲ್ 9ಕ್ಕೆ ಮುಂದೂಡಿತು.
ನಿರ್ವಹಣಾ ಮಂಡಳಿ ರಚನೆಗೆ ತಮಿಳುನಾಡು ಪಟ್ಟುಹಿಡಿದಿರುವ ಬೆನ್ನಲ್ಲೇ ಮುಖ್ಯ ನ್ಯಾಯಮೂರ್ತಿಗಳ ಈ ಅಭಿಪ್ರಾಯ ಮಹತ್ವ ಪಡೆದುಕೊಂಡಿದ್ದು, ಕರ್ನಾಟಕಕ್ಕೆ ಕೊಂಚ ನಿರಾಳವಾಗುವ ಸಾಧ್ಯತೆ ಕಂಡು ಬಂದಿದೆ.
#Cauvery water matter: Supreme Court to hear the contempt petition filed by Tamil Nadu Government on April 9 pic.twitter.com/k1mH9nxfXY
— ANI (@ANI) April 2, 2018
ಏನಿದು ನ್ಯಾಯಾಂಗ ನಿಂದನೆ ಅರ್ಜಿ?
ಫೆ. 16 ಕಾವೇರಿ ಜಲವಿವಾದ ಕುರಿತು ನ್ಯಾಯಾಧಿಕರಣದ ಐತೀರ್ಪು ಪ್ರಶ್ನಿಸಿ ಮೂರು ರಾಜ್ಯಗಳು ಸಲ್ಲಿಸಿದ್ದ ವಿಶೇಷ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂ ತನ್ನ ತೀರ್ಪಿನಲ್ಲಿ ಆರು ವಾರಗಳಲ್ಲಿ ಸ್ಕೀಂ ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು. ಆದರೆ ಈ ಆದೇಶವನ್ನು ಕೇಂದ್ರ ಸರ್ಕಾರ ಪಾಲಿಸಿರಲಿಲ್ಲ. ಹೀಗಾಗಿ ಕೇಂದ್ರ ಸರ್ಕಾರದ ವಿರುದ್ಧ 1971 ರ ನ್ಯಾಯಾಂಗ ನಿಂದನೆ ಕಾಯ್ದೆಯಡಿಯಲ್ಲಿ ನ್ಯಾಯಾಂಗ ನಿಂದನೆ ಕ್ರಮ ಜರುಗಿಸುವಂತೆ ಮತ್ತು ಶೀಘ್ರ ಕಾವೇರಿ ನಿರ್ವಹಣಾ ಮಂಡಳಿಯನ್ನು ರಚನೆ ಮಾಡುವಂತೆ ತಮಿಳುನಾಡು ಸರ್ಕಾರ ಸುಪ್ರೀಂ ಮೆಟ್ಟಲು ಏರಿತ್ತು.
ತಮಿಳುನಾಡಿನ ರೈತರ ಹಿತಾಸಕ್ತಿಯ ವಿಚಾರವಾಗಿ ಕೇಂದ್ರ ಸರ್ಕಾರದ ನಿರ್ಲಕ್ಷ್ಯವನ್ನು ರಾಜ್ಯ ಸರ್ಕಾರ ಸಹಿಸುವುದಿಲ್ಲ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು. ಅಷ್ಟೇ ಅಲ್ಲದೇ ಕರ್ನಾಟಕದಲ್ಲಿ ಚುನಾವಣೆ ನಡೆಯುತ್ತಿರುವ ಕಾರಣ ಕೇಂದ್ರ ಸರ್ಕಾರ ಉದ್ದೇಶ ಪೂರ್ವಕವಾಗಿ ಮಂಡಳಿ ರಚನೆಗೆ ಮುಂದಾಗುತ್ತಿಲ್ಲ ಎಂದು ತಮಿಳುನಾಡು ಆರೋಪಿಸಿತ್ತು.