ಬೆಂಗಳೂರು: ದೇಶದಲ್ಲಿ ಈಗ ಪ್ರತಿಮೆ ಪಾಲಿಟಿಕ್ಸ್ ಆರಂಭವಾಗಿದ್ದು, ಗುಜರಾತ್ ಸರ್ಕಾರ ಸರ್ದಾರ್ ಪಟೇಲ್ ಅವರ 182 ಮೀಟರ್ ಎತ್ತರದ ಪ್ರತಿಮೆಯನ್ನು ಲೋಕಾರ್ಪಣೆ ಮಾಡಿದ್ದೇ ತಡ ರಾಜ್ಯದಲ್ಲಿ ಕಾವೇರಿ ಪ್ರತಿಮೆಯನ್ನು ಸ್ಥಾಪಿಸಲು ರಾಜ್ಯ ಸರ್ಕಾರ ಮುಂದಾಗಿದೆ.
ಹೌದು. ಪಟೇಲ್ ಮಾದರಿಯಲ್ಲಿ ಕಾವೇರಿ ಮಾತೆಯ ಬೃಹತ್ ಪ್ರತಿಮೆ ನಿರ್ಮಾಣಕ್ಕೆ ಸಮ್ಮಿಶ್ರ ಸರ್ಕಾರ ಕೈ ಹಾಕಿದೆ. ಮೂಲಸ್ವರೂಪಕ್ಕೆ ಧಕ್ಕೆಯಾಗದಂತೆ ಜಾಗತಿಕ ಮಟ್ಟದ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು ಮಂಡ್ಯ ಜಿಲ್ಲೆಯ ಕೆಆರ್ಎಸ್ ಉದ್ಯಾನದಲ್ಲಿ 125 ಅಡಿ ಎತ್ತರದ ಕಾವೇರಿ ಮಾತೆಯ ಪ್ರತಿಮೆ, 360 ಅಡಿ ಎತ್ತರದ ಮ್ಯೂಸಿಯಂ ನಿರ್ಮಿಸಲು ಯೋಜನೆ ರೂಪಿಸಿದೆ.
ಕೆಆರ್ಎಸ್ ಉದ್ಯಾನ ‘ಬೃಂದಾವನ’ವನ್ನು 1,200 ಕೋಟಿ ರೂ. ವೆಚ್ಚದಲ್ಲಿ ಅಮೆರಿಕದ ಡಿಸ್ನಿಲ್ಯಾಂಡ್ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ. ಥೇಮ್ಸ್ ನದಿಯ ತಟದಲ್ಲಿ ಇರುವಂತೆ ರೀತಿ ಪಾರ್ಕ್ ನಿರ್ಮಾಣವಾಗಲಿದ್ದು, ಇದಕ್ಕೆ 400 ಎಕರೆ ಪ್ರದೇಶ ಬಳಕೆಯಾಗಲಿದೆ. 1200 ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆಯ ಕಾಮಗಾರಿಯನ್ನು 2 ವರ್ಷದಲ್ಲಿ ಪೂರ್ಣಗೊಳಿಸಲು ಯೋಜನೆ ರೂಪಿಸಲಾಗಿದೆ. ವಾರ್ಷಿಕ 300 ಕೋಟಿ ರೂ. ಆದಾಯ, ಸರ್ಕಾರಕ್ಕೆ 30 ಕೋಟಿ ರೂ. ವರಮಾನ ಬರುವ ನಿರೀಕ್ಷೆಯಿದೆ.
ಹೇಗಿರಲಿದೆ ಪ್ರತಿಮೆ?
ಉದ್ದೇಶಿತ ಮಾದರಿಯಂತೆ ಸದ್ಯದ ದೋಣಿ ವಿಹಾರ ಸರೋವರದ ಪಕ್ಕದಲ್ಲಿ ಮತ್ತೊಂದು ಸರೋವರ ನಿರ್ಮಿಸಿ ಅದರ ಮಧ್ಯ ಭಾಗದಲ್ಲಿ 360 ಅಡಿ ಎತ್ತರದ ಮ್ಯೂಸಿಯಂ ಸಮುಚ್ಛಯ ನಿರ್ಮಾಣವಾಗಲಿದೆ. ಈ ಸಮುಚ್ಛಯದ ಮೇಲ್ಭಾಗದಲ್ಲಿ ಕಾವೇರಿ ಮಾತೆಯ 125 ಅಡಿ ಎತ್ತರದ ಪ್ರತಿಮೆ ಇರಲಿದ್ದು, ಕಾವೇರಿ ಮಾತೆ ಪದತಲದಲ್ಲಿ ಮ್ಯೂಸಿಯಂ ಕಟ್ಟಡ ಇರಲಿದೆ.
ಅದೇ ರೀತಿ ಗೋಪುರವುಳ್ಳ ಗಾಜಿನಮನೆ ನಿರ್ಮಾಣವಾಗಲಿದ್ದು, ಈ ಎರಡೂ ಕಟ್ಟಡಗಳಿಂದ ಅಣೆಕಟ್ಟೆಯ ವಿಹಂಗಮ ನೋಟ ಗೋಚರವಾಗಲಿದೆ. ಮ್ಯೂಸಿಯಂನಲ್ಲಿ ಕೆ.ಆರ್.ಎಸ್, ಮೈಸೂರು, ಕರ್ನಾಟಕದ ಐತಿಹ್ಯ ಸಾರುವ ಕಲಾತ್ಮಕ, ಪ್ರಾಚ್ಯವಸ್ತುಗಳು ಇರಲಿವೆ. ಸಮುಚ್ಛಯ, ಗೋಪುರಯುಕ್ತ ವೀಕ್ಷಣಾ ಗೋಪುರ, ಬ್ಯಾಂಡ್ ಸ್ಟ್ಯಾಂಡ್, ಗಾಜಿನ ಮನೆ, ಒಳಾಂಗಣ ಕ್ರೀಡಾಂಗಣ ಮತ್ತಿತರ ಐತಿಹ್ಯ ಸಾರುವ ಕಟ್ಟಡಗಳನ್ನು ಈ ಡಿಸ್ನಿಲ್ಯಾಂಡ್ ಮಾದರಿ ಹೊಂದಿರಲಿದೆ.
ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಯೋಜನೆ ರೂಪುರೇಷೆ ಬಗ್ಗೆ ಚರ್ಚೆ ನಡೆದಿದೆ.
ಡಿ.ಕೆ.ಶಿವಕುಮಾರ್ ಮಾತನಾಡಿ, ಯೋಜನೆಗೆ 1,200 ಕೋಟಿ ರೂ. ಅಂದಾಜು ಮಾಡಲಾಗಿದ್ದು, ಜಾಗತಿಕ ಟೆಂಡರ್ ಕರೆದು ವಿಶ್ವಮಟ್ಟದ ಸಂಸ್ಥೆಗೆ ಯೋಜನೆ ಗುತ್ತಿಗೆ ನೀಡಲಾಗುವುದು. ಸರ್ಕಾರ ಜಾಗ ಮಾತ್ರ ನೀಡುತ್ತದೆ ಹೊರತು ಯೋಜನೆಗೆ ಸರ್ಕಾರ ವೆಚ್ಚ ಮಾಡುವುದಿಲ್ಲ. ಕಲಾತ್ಮಕ ವಿನ್ಯಾಸದಲ್ಲಿ ಜಾಗತಿಕ ಮಟ್ಟದ ನೈಪುಣ್ಯತೆ ಇರುವ ಸಂಸ್ಥೆಗಳಿಗೆ ಟೆಂಡರ್‍ನಲ್ಲಿ ಭಾಗವಹಿಸಬಹುದು ಎಂದು ಯೋಜನೆಗೆಯ ಬಗ್ಗೆ ಮಾಹಿತಿ ನೀಡಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews