ನವದೆಹಲಿ: ಕಾವೇರಿ ವಿಚಾರವಾಗಿ ತಮಿಳುನಾಡು ಮತ್ತೆ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ಕಳೆದ ವರ್ಷ ಬಾಕಿ ಉಳಿಸಿಕೊಂಡಿರುವ ನೀರನ್ನು ಹರಿ ಬಿಡಲು ಕರ್ನಾಟಕ ರಾಜ್ಯಕ್ಕೆ ಸೂಚಿಸುವಂತೆ ತಮಿಳುನಾಡು ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದೆ.
ಕರ್ನಾಟಕ 5.96 ಟಿಎಂಸಿ ನೀರನ್ನು ಬಾಕಿ ಉಳಿಸಿಕೊಂಡಿದ್ದು, ಬರ ಇರುವ ಹಿನ್ನೆಲೆಯಲ್ಲಿ ಕುಡಿಯುವ ಉದ್ದೇಶಕ್ಕಾಗಿ ನೀರನ್ನು ಬಿಡುಗಡೆ ಮಾಡುವಂತೆ ತಮಿಳುನಾಡು ಮನವಿ ಮಾಡಿಕೊಂಡಿದೆ.
Advertisement
ಅರ್ಜಿಯಲ್ಲಿ ಏನಿದೆ?
ಕಳೆದ ವರ್ಷ ವಿಚಾರಣೆ ವೇಳೆ ಸುಪ್ರಿಂ ಕೋರ್ಟ್ 15 ಸಾವಿರ, 12 ಸಾವಿರ, 6 ಸಾವಿರ ಕ್ಯೂಸೆಕ್ ನಂತೆ ಒಟ್ಟು 22.55 ಟಿಎಂಸಿ ನೀರನ್ನು ತಮಿಳುನಾಡಿಗೆ ಬಿಡುವಂತೆ ಕರ್ನಾಟಕಕ್ಕೆ ಸೂಚಿಸಿತ್ತು. ರಾಜ್ಯದಲ್ಲೂ ಸಾಕಷ್ಟು ಪ್ರತಿಭಟನೆಗಳ ನಡುವೆ ಇದ್ದ ಅಲ್ಪ ನೀರಿನಲ್ಲಿ 16.58 ಟಿಎಂಸಿ ನೀರನ್ನು ಹರಿಸಲಾಗಿತ್ತು. ಕೆಆರ್‍ಎಸ್ ನಲ್ಲೂ ನೀರಿನ ಪ್ರಮಾಣ ಕಡಿಮೆಯಾದ ಹಿನ್ನಲೆಯಲ್ಲಿ ಕರ್ನಾಟಕ 5.96 ಟಿಎಂಸಿ ನೀರನ್ನು ಬಾಕಿ ಉಳಿಸಿಕೊಂಡಿದ್ದು, ಈ ಬಾಕಿ ನೀರನ್ನು ತಮಿಳುನಾಡು ಗೆ ಹರಿಸುವಂತೆ ಕೋರಲಾಗಿದೆ.
Advertisement
ಭೀಕರ ಭರ ಆವರಿಸಿದ್ದು, ಕುಡಿಯುವ ನೀರು ಒದಗಿಸುವ ಸಲುವಾಗಿ ನೀರು ಬಿಡಬೇಕು. ಕಳೆದ ವರ್ಷ ನೀಡಿದ್ದ ತೀರ್ಪನ್ನು ಪಾಲಿಸದೇ ಕರ್ನಾಟಕ ಸರ್ಕಾರ ಉಲ್ಲಂಘಿಸಿದೆ. ಕೂಡಲೇ ನೀರು ಹರಿಸಲು ಸೂಚಿಸುವಂತೆ ಅರ್ಜಿಯಲ್ಲಿ ತಮಿಳುನಾಡು ಮನವಿ ಮಾಡಿಕೊಂಡಿದೆ.
Advertisement
ಇತ್ತ ರಾಜ್ಯದಲ್ಲೂ ಹಿಂಗಾರು ಮತ್ತು ಮುಂಗಾರು ಕೈಕೊಟ್ಟಿದ್ದು ರಾಜ್ಯದಲ್ಲಿ ವಾಡಿಕೆಯಷ್ಟು ಮಳೆಯಾಗಿಲ್ಲ. ಯಾವುದೇ ಜಲಾಶಯಗಳು ಭರ್ತಿಯಾಗಿಲ್ಲ. ಮತ್ತೇ ಬರದ ಆತಂಕ ಎದುರಾಗಿದೆ. ಜುಲೈ ಎರಡನೇ ವಾರದಲ್ಲಿ ಕಾವೇರಿ ಅರ್ಜಿಗಳು ಮತ್ತೆ ವಿಚಾರಣೆಗೆ ಬರಲಿದೆ. ಈ ನಡುವೆ ಇದೊಂದು ಅರ್ಜಿ ಹೆಚ್ಚುವರಿಯಾಗಿ ಸೆರ್ಪಡೆಯಾಗಿದೆ. ಜೊತೆಗೆ ಪ್ರತಿನಿತ್ಯ ಎರಡು ಸಾವಿರ ನೀರು ಹರಿಸುವ ಆದೇಶ ಇದ್ದು ರಾಜ್ಯಕ್ಕೆ ಮತ್ತಷ್ಟು ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.
Advertisement
ಈಗಾಗಲೇ ಕಾವೇರಿ ಕಾನೂನು ತಂಡ ತಯಾರಿ ನಡೆಸುತ್ತಿದ್ದು ಮಲೆನಾಡಿನ ಕಾವೇರಿ ಕೊಳ್ಳದ ಮಳೆ ಪ್ರಮಾಣದ ಅಂಕಿ ಅಂಶಗಳನ್ನು ಕಲೆಹಾಕಲಾಗುತ್ತಿದೆ. ರಾಜ್ಯದ ಈ ವರ್ಷದ ಪರಿಸ್ಥಿತಿ ಯನ್ನು ಸುಪ್ರೀಂಕೋರ್ಟ್ ಮುಂದೆ ಇಡಲಿದೆ. ಈ ವರ್ಷವೂ ಎರಡು ರಾಜ್ಯಗಳಲ್ಲಿ ಮಳೆ ಪ್ರಮಾಣ ಕಡಿಮೆ ಇದ್ದು ಮತ್ತೆ ಕಾವೇರಿಗಾಗಿ ಸುಪ್ರೀಂ ಕೋರ್ಟ್ ನಲ್ಲಿ ಕಾದಾಟ ಆರಂಭವಾಗಿದೆ.
ಅಂತಿಮ ಐತೀರ್ಪು ಪ್ರಕಾರ ಯಾರಿಗೆ ಎಷ್ಟು ನೀರು?
ನ್ಯಾ. ಎನ್.ಪಿ.ಸಿಂಗ್, ನ್ಯಾ. ಸುಧೀರ್ ನಾರಿಯನ್, ನ್ಯಾ. ಎನ್.ಎಸ್. ರಾವ್ ಅವರನ್ನು ಒಳಗೊಂಡ ಕಾವೇರಿ ನ್ಯಾಯಾಧಿಕರಣ 2007ರ ಫೆಬ್ರವರಿ 2ರಂದು ಅಂತಿಮ ಐತೀರ್ಪು ನೀಡಿತ್ತು. ಈ ಐತೀರ್ಪಿನ ಅನ್ವಯ ಕಾವೇರಿ ಕಣಿವೆಯಲ್ಲಿ 740 ಟಿಎಂಸಿ ನೀರಿದೆ ಎಂದು ಲೆಕ್ಕಹಾಕಲಾಯಿತು. ಕರ್ನಾಟಕಕ್ಕೆ 270 ಟಿಎಂಸಿ, ತಮಿಳುನಾಡಿಗೆ 419 ಟಿಎಂಸಿ, ಕೇರಳಕ್ಕೆ 30 ಟಿಎಂಸಿ, ಪುದುಚೇರಿಗೆ 10, ಪರಿಸರ ಸಂರಕ್ಷಣೆಗೆ 10 ಟಿಎಂಸಿ, ಸಮುದ್ರ ಸೇರುವ ನೀರು 4 ಟಿಎಂಸಿ ಟಿಎಂಸಿ ನೀರನ್ನು ಹಂಚಲಾಯಿತು. ಇದರ ಜೊತೆ ಕಾವೇರಿ ನಿರ್ವಹಣಾ ಮಂಡಳಿಯನ್ನು ರಚಿಸುವಂತೆ ಆದೇಶಿಸಿತು. (ನ್ಯಾಯಾಲಯಗಳು ವಿಚಾರಣೆ ನಡೆಸಿ ತೀರ್ಪು ನೀಡುತ್ತವೆ. ನ್ಯಾಯಾಧಿಕರಣಗಳು ವಿಚಾರಣೆ ನಡೆಸಿ ನೀಡುವ ಮಧ್ಯಂತರ/ಅಂತಿಮ ತೀರ್ಪಿಗೆ ಐತೀರ್ಪು ಎಂದು ಕರೆಯಲಾಗುತ್ತದೆ)
ಯಾವ ತಿಂಗಳಿನಲ್ಲಿ ತಮಿಳುನಾಡಿಗೆ ಎಷ್ಟು ಟಿಎಂಸಿ ನೀರು?
ಜೂನ್ 10, ಜುಲೈ 34, ಅಗಸ್ಟ್ 50, ಸೆಪ್ಟೆಂಬರ್ 40, ಅಕ್ಟೋಬರ್ 22, ನವೆಂಬರ್ 15, ಡಿಸೆಂಬರ್ 8, ಜನವರಿ 3, ಫೆಬ್ರವರಿ 2.5, ಮಾರ್ಚ್ 2.5, ಏಪ್ರಿಲ್ 2.5, ಮೇ 2.5 ಸೇರಿ ಒಟ್ಟು 192 ಟಿಎಂಸಿ ನೀರನ್ನು ಕನಾಟಕ ಪ್ರತಿವರ್ಷ ತಮಿಳುನಾಡಿಗೆ ಹರಿಸಬೇಕು.
ತಮಿಳುನಾಡಿಗೆ ಕರ್ನಾಟಕದಿಂದ ನೀರು ಹರಿದಿದೆ ಎಂದು ಪತ್ತೆ ಮಾಡೋದು ಹೇಗೆ?
ತಮಿಳುನಾಡಿನ ಭಾಗದಲ್ಲಿರುವ ಬಿಳಿಗುಂಡ್ಲುವಿನಲ್ಲಿ ಎಷ್ಟು ಪ್ರಮಾಣದ ನೀರು ಹರಿದಿದೆ ಎಂದು ಪತ್ತೆ ಮಾಡಲು ಕೇಂದ್ರ ಜಲ ಆಯೋಗದ ಅಧಿಕಾರಿಗಳು ವರ್ಷವಿಡಿ ನೀರಿನ ಲೆಕ್ಕಾಚಾರ ಹಾಕುತ್ತಾರೆ. ಪ್ರತಿದಿನ ಬೆಳಗ್ಗೆ 8ರಿಂದ 10ರವರೆಗೆ ಎರಡು ಗಂಟೆಗಳ ಕಾಲ 160 ಮೀಟರ್ ಪ್ರದೇಶದ 15 ನಿರ್ದಿಷ್ಟ ಸ್ಥಳಗಳಲ್ಲಿ ಈ ಪರೀಕ್ಷೆ ನಡೆಯುತ್ತದೆ. 7 ಮಂದಿ ಸಿಬ್ಬಂದಿ ದೋಣಿ ಮೂಲಕ ಒಂದು ದಂಡೆಯಿಂದ ಮತ್ತೂಂದು ದಂಡೆಗೆ ಸಾಗಿ ತಮ್ಮ ಜೊತೆ ಇರುವ ಉಪಕರಣವನ್ನು ನೀರಿಗೆ ಬಿಡುತ್ತಾರೆ. ಈ ಮೂಲಕ ಪ್ರತಿ ಸೆಕೆಂಡ್‍ಗೆ ಎಷ್ಟು ನೀರು ಕರ್ನಾಟಕದಿಂದ ತಮಿಳುನಾಡಿಗೆ ಹೋಗುತ್ತಿದೆ ಎಂಬುದನ್ನು ಪತ್ತೆ ಮಾಡುತ್ತಾರೆ. ಈ ಸಿಬ್ಬಂದಿಯನ್ನು ಕರ್ನಾಟಕ, ತಮಿಳುನಾಡಿನ ಅಧಿಕಾರಿಗಳು ನೇರವಾಗಿ ಸಂಪರ್ಕಿಸುವಂತಿಲ್ಲ. ರಾಜ್ಯ ಸರ್ಕಾರಗಳು ಅಥವಾ ನ್ಯಾಯಾಲಯಗಳು ಕೇಳಿದರೆ ಮಾತ್ರ ಮಾಹಿತಿಯನ್ನು ನೀಡಲಾಗುತ್ತದೆ.
ಕ್ಯೂಸೆಕ್ ಟಿಎಂಸಿ ಎಂದರೆ ಎಷ್ಟು?
ಕ್ಯೂಸೆಕ್ ಎಂಬುದು cubic foot per second ಹೃಸ್ವರೂಪ. ಪ್ರತಿ ಸೆಕೆಂಡಿಗೆ ಒಂದು ಘನ ಅಡಿ ನೀರು ಹರಿದರೆ ಅದು ಒಂದು ಕ್ಯೂಸೆಕ್ ನೀರು ಎಂದು ಕರೆಯಲ್ಪಡುತ್ತದೆ. ಒಂದು ಘನ ಅಡಿ ನೀರನ್ನು ಲೀಟರುಗಳಿಗೆ ಪರಿವರ್ತಿಸಿದರೆ ಸುಮಾರು 28.317 ಲೀಟರುಗಳಾಗುತ್ತವೆ. 11,524 ಕ್ಯೂಸೆಕ್ ನೀರು 24 ಗಂಟೆಯ ಕಾಲ ನಿರಂತರ ಹರಿದರೆ ಒಂದು ಟಿಎಂಸಿ ಎಂದು ಕರೆಯಲಾಗುತ್ತದೆ. 10 ಸಾವಿರ ಕ್ಯೂಸೆಕ್ ನೀರು 24 ಗಂಟೆ ನಿರಂತರ ಹರಿದರೆ 0.864 ಟಿಎಂಸಿ ಅಡಿ ಆಗುತ್ತದೆ. 35.87 ಅಡಿ ಅಳದಷ್ಟು ನೀರನ್ನು ಒಂದು ಚದರ ಮೈಲಿ ಪ್ರದೇಶದಲ್ಲಿ ಸಂಗ್ರಹಿಸಿದರೆ ಒಂದು ಟಿಎಂಸಿ ಅಡಿ ಆಗುತ್ತದೆ.ಕ್ಯೂಸೆಕ್ ಎಂಬುದು cubic foot per second ಹೃಸ್ವರೂಪ. ಪ್ರತಿ ಸೆಕೆಂಡಿಗೆ ಒಂದು ಘನ ಅಡಿ ನೀರು ಹರಿದರೆ ಅದು ಒಂದು ಕ್ಯೂಸೆಕ್ ನೀರು ಎಂದು ಕರೆಯಲ್ಪಡುತ್ತದೆ. ಒಂದು ಘನ ಅಡಿ ನೀರನ್ನು ಲೀಟರುಗಳಿಗೆ ಪರಿವರ್ತಿಸಿದರೆ ಸುಮಾರು 28.317 ಲೀಟರುಗಳಾಗುತ್ತವೆ. 11,524 ಕ್ಯೂಸೆಕ್ ನೀರು 24 ಗಂಟೆಯ ಕಾಲ ನಿರಂತರ ಹರಿದರೆ ಒಂದು ಟಿಎಂಸಿ ಎಂದು ಕರೆಯಲಾಗುತ್ತದೆ. 10 ಸಾವಿರ ಕ್ಯೂಸೆಕ್ ನೀರು 24 ಗಂಟೆ ನಿರಂತರ ಹರಿದರೆ 0.864 ಟಿಎಂಸಿ ಅಡಿ ಆಗುತ್ತದೆ. 35.87 ಅಡಿ ಅಳದಷ್ಟು ನೀರನ್ನು ಒಂದು ಚದರ ಮೈಲಿ ಪ್ರದೇಶದಲ್ಲಿ ಸಂಗ್ರಹಿಸಿದರೆ ಒಂದು ಟಿಎಂಸಿ ಅಡಿ ಆಗುತ್ತದೆ.