– ಸಭೆಯಲ್ಲಿ ಕೊಡುವ ಗೊಡಂಬಿ, ಬಾದಾಮಿ ತಿನ್ನೋಕೆ ಹೋಗಬೇಕಿತ್ತಾ?
ಬೆಂಗಳೂರು: ಕೆಆರ್‌ಎಸ್ ಡ್ಯಾಂನಿಂದ (KRS Dam) ರೈತರ ಹೆಸರಿನಲ್ಲಿ ತಮಿಳುನಾಡಿಗೆ (Tamil Nadu) ನೀರು ಹರಿಸಲಾಗಿದೆ. ನೀರು ಬಿಟ್ಟು ಕಾಟಾಚಾರಕ್ಕೆ ಸಭೆ ಕರೆದಿದ್ದಾರೆ. ನೀರು ಬಿಟ್ಟಿದ್ದಕ್ಕೆ ಶಹಬ್ಬಾಶ್‍ಗಿರಿ ಕೊಡಲು ಹೋಗಬೇಕಿತ್ತಾ? ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ (H.D Kumaraswamy) ಪ್ರಶ್ನೆ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮಿಳುನಾಡಿಗೆ ಕಾವೇರಿ ನೀರು (Cauvery Water) ಹರಿಸುವ ವಿಚಾರವಾಗಿ ನಡೆದ ಸರ್ವಪಕ್ಷಗಳ ಸಭೆಗೆ ಗೈರಾದ ವಿಚಾರಕ್ಕೆ ಅವರು ಪ್ರತಿಕ್ರಿಯಿಸಿದ್ದಾರೆ. ಈ ವೇಳೆ ಸಿಡಬ್ಲ್ಯೂಆರ್‌ಸಿ ಶಿಫಾರಸು ಹಿನ್ನೆಲೆ ಸಭೆ ಕರೆದಿದ್ದರು. ಯಾವ ವಿಚಾರ ಚರ್ಚಿಸಲು ಅವರು ಸಭೆ ಕರೆದಿದ್ದರು? ಚರ್ಚೆಗೂ ಮುನ್ನವೇ ತಮಿಳುನಾಡಿಗೆ ನೀರು ಹರಿದು ಹೋಗಿದೆ. ಕಬಿನಿಯಿಂದ ನೀರು ಹರಿದಿದೆ. ಸಭೆಯಲ್ಲಿ ಕೊಡುವ ಗೊಡಂಬಿ, ಬಾದಾಮಿ ತಿನ್ನೋಕೆ ಹೋಗಬೇಕಿತ್ತಾ? ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: 24 ಲಕ್ಷ ವಿದ್ಯಾರ್ಥಿಗಳ ಭವಿಷ್ಯ ಹಾಳಾಗಿದೆ, ರಾಜ್ಯದಲ್ಲಿ NEET ಪರೀಕ್ಷೆ ರದ್ದು ಮಾಡಿ: ಐವಾನ್ ಡಿಸೋಜಾ
ಯಾಕೆ ಸಭೆ ಮಾಡಿದ್ದೀರಿ? ಏನು ನಿರ್ಧಾರ ಮಾಡಿದ್ದೀರಿ? ಸಭೆ ಮಾಡಿದ ಮೇಲೂ ಕಡಿಮೆ ಪ್ರಮಾಣದ ನೀರು ಬಿಡಲು ಒಪ್ಪಿಗೆ ಸೂಚಿಸಿದೆ. ತೆಲಂಗಾಣಕ್ಕೆ ಹೋದರೆ ಅಲ್ಲಿ ಸಿಎಂ ಫೋನ್ ಮಾಡಿ ಸಹಕಾರ ಕೇಳ್ತಾರೆ. ಆದರೆ ನಾನು ರಾಜ್ಯದ ಯೋಜನೆಗಳಿಗೆ ಸಹಿ ಹಾಕಿದರೆ ಅದನ್ನು ನಿಲ್ಲಿಸುತ್ತಾರೆ ಎಂದು ಅವರು ಕಿಡಿಕಾರಿದ್ದಾರೆ.
ಮಂಡ್ಯದಲ್ಲಿ ಜನತಾ ದರ್ಶನ ಮಾಡಿದರೆ, ಅಧಿಕಾರಿಗಳು ಭಾಗಿಯಾಗಬಾರದು ಎಂದು ಆದೇಶ ಮಾಡಿದ್ದಾರೆ. ಅಧಿಕಾರಿಗಳ ಸಭೆ ನಡೆಸಬಾರದು ಎಂದು ಆದೇಶ ಮಾಡಿದ ಮೇಲೆ ನಮ್ಮಿಂದ ಏನು ಬಯಸುತ್ತೀರಾ? ಪಾಂಡವಪುರದಲ್ಲಿ ಮತ ಕೊಟ್ಟ ಜನರಿಗೆ ಧನ್ಯವಾದ ಹೇಳಬೇಕಿತ್ತು ಹೋಗಿದ್ದೆ. ಯಾವ ಸಂದರ್ಭದಲ್ಲಿ ಯಾವ ಕಾರ್ಯಕ್ರಮಕ್ಕೆ ಹೋಗಬೇಕು ಎಂದು ನನಗೆ ಗೊತ್ತಿದೆ. ನಾನು ಇವರ ಅನುಮತಿ ಪಡೆಯಬೇಕಾ? ಎಂದು ಕಿಡಿಕಾರಿದ್ದಾರೆ.
ಯಾವುದೇ ಕಾರ್ಯಕ್ರಮ ಮಾಡಿದರೂ ನಾವು ಪ್ರಾಮಾಣಿಕವಾಗಿ ಮಾಡುತ್ತೇವೆ. ಇವರಂತೆ ಕಾನೂನು ಬಾಹಿರ ಕೆಲಸ ಮಾಡಿಲ್ಲ. ಮುಖ್ಯಮಂತ್ರಿ ಮಾಡಲು ಯಾರು ಇವರ ಹಿಂದೆ ನಿಂತರೊ ಅವರ ಬದುಕಲ್ಲೇ ಚೆಲ್ಲಾಟ ಆಡುತ್ತಿದ್ದಾರೆ. ಅವರು ಎಷ್ಟು ಶಾಪ ಹಾಕ್ತಿದ್ದಾರೆ ಗೊತ್ತಿದೆ. ನೀವ ಸಿಎಂ ಆಗಲೆಂದು ಬಯಸಿದವರಿಗೆ ನಿಮ್ಮ ಆಡಳಿತದಲ್ಲಿ ಏನಾಗಿದೆ ಎಂದು ಗೊತ್ತಿದೆ ಎಂದು ಹೇಳಿದ್ದಾರೆ.
ಕಾರ್ಪೋರೆಷನ್ ಕಸ ಎತ್ತಿದ್ದೇನೆ:
ನಾನು ಕಾರ್ಪೋರೆಷನ್ ಕಸ ಎತ್ತಿದ್ದೇನೆ. ಸಿನಿಮಾ ಡಬ್ಬಾ ಹೊತ್ತಿದ್ದೇನೆ, ನಮ್ಮ ಕಾಲದಲ್ಲಿ ಸಿಡಿ ಇರಲಿಲ್ಲ. ಕಂಡಕಂಡಲ್ಲಿ ಕೊಳ್ಳೆ ಹೊಡೆದು ಜೀವನ ಮಾಡಿಲ್ಲ. ಭಾನುವಾರವೂ ಸಭೆ ನಡೆಸಿ ನನ್ನ ವಿರುದ್ಧ ದಾಖಲೆ ಹುಡುಕುತ್ತಿದ್ದಾರೆ. ಸಣ್ಣ ಪುಟ್ಟ ಸಮಸ್ಯೆ ಇವೆಯೇ ಎಂದು ಹುಡುಕುತ್ತಿದ್ದಾರೆ. 41 ವರ್ಷದಿಂದ ಕಷ್ಟಪಟ್ಟಿರುವ ಆಸ್ತಿ ನಮ್ಮದು ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ. ಇದನ್ನೂ ಓದಿ: 10 ಸಾವಿರ ಶಿಕ್ಷಕರ ನೇಮಕ ಪ್ರಕ್ರಿಯೆಗೆ ಸಿದ್ದತೆ : ಮಧು ಬಂಗಾರಪ್ಪ