ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣದ ಕಾವೇರಿ ನದಿ ದಂಡೆಯಲ್ಲಿ ಮಂಗಳವಾರದಿಂದ 12 ವರ್ಷಗಳಿಗೊಮ್ಮೆ ನಡೆಯುವ ಕಾವೇರಿ ಪುಷ್ಕರ ಮಹಾಸ್ನಾನ ನಡೆಯಲಿದ್ದು, ಪೂಜೆಯ ಸಿದ್ದತೆಗಳು ಭರದಿಂದ ಸಾಗುತ್ತಿವೆ.
12 ರಾಶಿಗಳಲ್ಲಿ ಗುರುವು ಯಾವ ದಿನ ಯಾವ ರಾಶಿಗಳಿಗೆ ಪ್ರವೇಶ ಮಾಡುತ್ತಾನೋ ಆ ದಿನದಿಂದ 12 ದಿನಗಳನ್ನು ಮಹಾ ಪುಷ್ಕರ ಪರ್ವಕಾಲ ಎನ್ನುತ್ತಾರೆ.
Advertisement
ಯಾವ ರಾಶಿಗೆ ಯಾವ ನದಿ?
ಗುರುವು ಮೇಷ ರಾಶಿಗೆ ಪ್ರವೇಶ ಮಾಡಿದಾಗ ಗಂಗಾನದಿ, ವೃಷಭದಲ್ಲಿ ನರ್ಮದಾ ನದಿ, ಮಿಥುನದಲ್ಲಿ ಸರಸ್ವತಿ ನದಿ, ಕರ್ಕಾಟಕದಲ್ಲಿ ಯಮುನಾ ನದಿ, ಸಿಂಹದಲ್ಲಿ ಗೋದಾವರಿ ನದಿ, ಕನ್ಯಾದಲ್ಲಿ ಕೃಷ್ಣಾನದಿ, ತುಲಾದಲ್ಲಿ ಕಾವೇರಿನದಿ, ವೃಶ್ಚಿಕದಲ್ಲಿ ಭೀಮಾ ನದಿ, ಧನುಸ್ಸುವಿನಲ್ಲಿ ತಪತಿ ನದಿ, ಮಕರದಲ್ಲಿ ತುಂಗಭದ್ರಾ ನದಿ, ಕುಂಭದಲ್ಲಿ ಸಿಂಧು ನದಿ, ಮೀನಾದಲ್ಲಿ ಪ್ರಣಹಿತ ನದಿ ಹೀಗೆ ಗುರುವು 12 ರಾಶಿಗಳನ್ನು ವರ್ಷಕ್ಕೊಂದರಂತೆ ಪ್ರವೇಶ ಮಾಡಿದಾಗ, ಆ ರಾಶಿಗೆ ಸಂಬಂಧಿಸಿದ ನದಿಗೆ ವಿಶೇಷ ಶಕ್ತಿ ಇರುತ್ತದೆ.
Advertisement
ಈ ವರ್ಷ ಗುರುವು ತುಲಾ ರಾಶಿಗೆ ಪ್ರವೇಶ ಮಾಡಲಿದ್ದಾನೆ. ಗುರುವು ಮಂಗಳವಾರ ಬೆಳಗ್ಗೆ 6-45ಕ್ಕೆ ಕನ್ಯಾರಾಶಿಯಿಂದ ತುಲಾರಾಶಿಗೆ ಪ್ರವೇಶ ಮಾಡುತ್ತಿದ್ದು ಈ ಅವಧಿಯಲ್ಲಿ ದಕ್ಷಿಣ ಭಾರತದ ಜೀವನದಿ ಎಂದೇ ಕರೆಸಿಕೊಂಡಿರುವ ಕಾವೇರಿ ನದಿಯಲ್ಲಿ ಮಹಾ ಪುಷ್ಕರ ಆಗಲಿದೆ.
Advertisement
ಪೌರಾಣಿಕ ಹಿನ್ನೆಲೆ ಏನು?
ತುಂದಿಲನೆಂಬ ಋಷಿಯು ಶಿವನ ತಪಸ್ಸು ಮಾಡಿ ಶಿವನ ಅಂಶಗಳಲ್ಲಿ ಸೇರಿ ನೀರೇ ಆಗಿ ಪುಷ್ಕರ(ಜಲದೇವತೆ) ಆಗಿ ಬಿಟ್ಟನು. ಬ್ರಹ್ಮನು ಈ ಜಗತ್ತನ್ನು ಸೃಷ್ಟಿಸಿದಾಗ ಜಲದೇವತೆ ಹಾಗೂ ಬೃಹಸ್ಪತಿ ದೇವತೆಗಳ ಸಹಾಯ ಪಡೆದಿದ್ದ ಎನ್ನುವುದನ್ನು ಪುರಾಣ ಕೋಶಗಳು ಹೇಳುತ್ತವೆ.
Advertisement
ಪುಷ್ಕರದಿಂದಾಗಿ ಕಾವೇರಿ ನದಿಗೆ ಈ ವರ್ಷ ವಿಶೇಷ ಶಕ್ತಿ ದೊರಕುತ್ತದೆ ಎನ್ನುವ ನಂಬಿಕೆ ಇದೆ. ಆದ್ದರಿಂದ ಶ್ರೀರಂಗಪಟ್ಟಣದ ಕಾವೇರಿ ನದಿ ದಂಡೆಯಲ್ಲಿ ಸೆಪ್ಟೆಂಬರ್ 12 ರಿಂದ 24ರವರೆಗೆ ಕಾವೇರಿ ಮಹಾಪುಷ್ಕರ ಸ್ನಾನ ಯಜ್ಞ ನಡೆಯಲಿದೆ.
64 ಕೋಟಿ ತೀರ್ಥಗಳು ಭೂಲೋಕಕ್ಕೆ ಪುಷ್ಕರದ ವೇಳೆ ಇಳಿದು ಬಂದು ಕಾವೇರಿ ನದಿಗೆ ವಿಶೇಷ ಶಕ್ತಿ ಸಿಗುತ್ತದೆ. ಈ ವೇಳೆ ದೇವಾನುದೇವತೆಗಳು, ಸಪ್ತ ಋಷಿಗಳು, ನವಕಾಂಡ ಋಷಿಗಳು, ಎಲ್ಲ ಮಹರ್ಷಿಗಳು ನದಿಯಲ್ಲಿ ಸ್ನಾನ ಮಾಡಲು ಭೂಲೋಕಕ್ಕೆ ಇಳಿದು ಬರುತ್ತಾರೆ ಹೀಗಾಗಿ ಪುಷ್ಕರವಾದಿ ನದಿ ಹನ್ನೆರಡು ದಿನಗಳವರೆಗೆ ದೈವೀಶಕ್ತಿ ಹೊಂದಿರುತ್ತದೆ ಎನ್ನುವ ನಂಬಿಕೆ ಇದೆ.
ಪುಷ್ಕರದ ಸಂದರ್ಭದಲ್ಲಿ ಕಾವೇರಿ ನದಿಯಲ್ಲಿ ಸ್ನಾನ ಮಾಡುವ ಎಲ್ಲ ಜೀವಿಗಳನ್ನು ಮನುಷ್ಯರನ್ನು ಕಾವೇರಿ ಪವಿತ್ರಗೊಳಿಸುತ್ತಾಳೆ. ಈ ವೇಳೆ ದಾನ ಧರ್ಮ ಮಾಡಿದವರಿಗೂ ವಿಶೇಷ ಪುಣ್ಯ ಲಭಿಸುತ್ತದೆ. ಗುರು ಬಲ ಇಲ್ಲದವರು ಪುಷ್ಕರ ಸ್ನಾನ ಮಾಡಿದರೆ ಗುರುಬಲ ಸಿಗುತ್ತದೆ ಎನ್ನುವ ನಂಬಿಕೆಯೂ ಇದೆ.
ಈಗಾಗಲೇ ಭಕ್ತರು ಶ್ರೀರಂಗಪಟ್ಟಣಕ್ಕೆ ಆಗಮಿಸುತ್ತಿದ್ದು, ಕಾವೇರಿ ನದಿ ದಂಡೆಯಲ್ಲಿ ಪುಷ್ಕರ ಸ್ನಾನಕ್ಕಾಗಿ ಸಿದ್ಧತೆಗಳು ನಡೆಯುತ್ತಿವೆ.