ಕರ್ನಾಟಕದಿಂದ ಕೈ ತಪ್ಪುತ್ತಾಳ ಕಾವೇರಿ – ನಿರ್ವಹಣಾ ಮಂಡಳಿ, ಸ್ಕೀಮ್‍ಗೆ ವ್ಯತ್ಯಾಸವೇ ಇಲ್ಲ!

Public TV
3 Min Read
KRS 3

ನವದೆಹಲಿ: ಜೀವನದಿ ಕಾವೇರಿ, ಕರ್ನಾಟಕ, ಕನ್ನಡಿಗರ ಕೈ ತಪ್ಪಿ ಹೋಗುತ್ತಾಳ ಎನ್ನುವ ಆತಂಕ ಹೆಚ್ಚಾಗಿದೆ. ಫೆಬ್ರವರಿ 16ರಂದು ಹೆಚ್ಚುವರಿಯಾಗಿ 14.75 ಟಿಎಂಸಿ ಹೆಚ್ಚುವರಿ ನೀರು ಕೊಟ್ಟು ಖುಷಿ ಕೊಟ್ಟಿದ್ದ ಸುಪ್ರೀಂಕೋರ್ಟ್ ನಿರ್ವಹಣಾ ಮಂಡಳಿ ಬಗ್ಗೆ ಪ್ರಸ್ತಾಪಿಸದೇ ಹೊಸದಾಗಿ `ಸ್ಕೀಂ’ ಎನ್ನುವ ಪದವನ್ನ ಹೇಳಿ ಹುಳು ಬಿಟ್ಟಂತೆ ಮಾಡಿತ್ತು. ಇದರ ಬಗ್ಗೆ ಮೇಲ್ಮನವಿ ಸಲ್ಲಿಸಲು 6 ವಾರಗಳ ಕಾಲಾವಕಾಶವನ್ನೂ ನೀಡಿತ್ತು. ಹೆಚ್ಚುವರಿ ನೀರು ಸಿಕ್ಕಿದೆ ಅಂತ ಬೆಂಗಳೂರಿಗರು ಸೇರಿ ದಕ್ಷಿಣ ಕರ್ನಾಟಕದ ಮಂದಿ ಹಿರಿಹಿರಿ ಹಿಗ್ಗಿದ್ದರು.

ಈ `ಸ್ಕೀಂ’ ಎನ್ನುವುದು ನಮ್ಮ ಪಾಲಿನ ತೂಗುಗತ್ತಿ ಎಂದು ಅಂದೇ ಕೇಳಿ ಬಂದಿದ್ದ ವಿಶ್ಲೇಷಣೆ ಈಗ ನಿಜವಾಗುತ್ತಿದೆ. ಕಾವೇರಿ ಜಲಾನಯನ ಪ್ರದೇಶದ ಕರ್ನಾಟಕ, ತಮಿಳುನಾಡು, ಕೇರಳ, ಪುದುಚೆರಿ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳ ಜೊತೆ ದೆಹಲಿಯಲ್ಲಿ ಕೇಂದ್ರ ಜಲಸಂಪನ್ಮೂಲ ಇಲಾಖೆ ಕಾರ್ಯದರ್ಶಿ ಉಪೇಂದ್ರ ಪ್ರಸಾದ್ ಸಿಂಗ್ ಶುಕ್ರವಾರ ಸಭೆ ನಡೆಸಿದ್ದಾರೆ.

cauvery water meeting

ಸಭೆಯ ಬಳಿಕ ಮಾತನಾಡಿ ನಿರ್ವಹಣಾ ಮಂಡಳಿ. ಸ್ಕೀಂ ನಡುವೆ ವ್ಯತ್ಯಾಸ ಇಲ್ಲ. ಸುಪ್ರೀಂಕೋರ್ಟ್ ಸೂಚನೆ ಮೇರೆಗೆ ನೀರಿನ ನಿರ್ವಹಣೆಗಾಗಿ ಸ್ಕೀಂ ರಚಿಸಲೇ ಬೇಕಿದೆ ಎಂದು ಉಪೇಂದ್ರ ಪ್ರಸಾದ್ ಹೇಳಿದ್ದಾರೆ. ರಾಜ್ಯದ ಮುಖ್ಯಕಾರ್ಯದರ್ಶಿ ರತ್ನಪ್ರಭ ಮಾತನಾಡಿ, ಸ್ಕೀಂ ರಚನೆಗೆ ಎಲ್ಲಾ ಸರ್ಕಾರಗಳು ಸಮ್ಮತಿ ಸೂಚಿಸಿವೆ. ಸ್ಕೀಂ ಸ್ವರೂಪದ ಬಗ್ಗೆ ಮುಂದಿನ ವಾರದೊಳಗೆ ನಾವು ಕಳುಹಿಸುತ್ತೇವೆ ಎಂದು ತಿಳಿಸಿದರು.

ಕಾವೇರಿ `ಸ್ಕೀಂ’ ರಚನೆ ಹೇಗಿರಬಹದು?
* ಸುಪ್ರಿಂಕೊರ್ಟ್ ಆದೇಶದ ಅನ್ವಯ ನೀರು ಹಂಚಿಕೆಗೆ ಯೋಜನೆ ರಚಿಸುವುದು
* ಸ್ಕೀಂಗೆ ಕೇಂದ್ರ, ನಾಲ್ಕು ರಾಜ್ಯಗಳ ಪ್ರತಿನಿಧಿಗಳ ಉಸ್ತುವಾರಿ
* ಡ್ಯಾಮ್‍ಗಳಲ್ಲಿನ ನೀರು ಆಧರಿಸಿ ಪ್ರತಿ ತಿಂಗಳು ಲೆಕ್ಕಾಚಾರ ಹಾಕಿ ನೀರು ಹಂಚಬಹುದು
* ಸಂಕಷ್ಟ ಸಂದರ್ಭ ಸಭೆ ನಡೆಸಿ ನೀರು ಹಂಚಿಕೆ ವಿವಾದ ಇತ್ಯರ್ಥ ಪಡಿಸಬಹುದು
* ಸಮಿತಿ ರಚನೆ, ಸದಸ್ಯರ ಆಯ್ಕೆ ಮತ್ತು ಅಧಿಕಾರ ವ್ಯಾಪ್ತಿ ಇನ್ನು ನಿರ್ಧಾರವಾಗಿಲ್ಲ
* ಕೇಂದ್ರದ ಇವತ್ತಿನ ಹೇಳಿಕೆ ಗಮನಿಸಿದರೆ ಮಂಡಳಿಯನ್ನೇ ಹೋಲುವ ಅಂಶಗಳು ಬಹುತೇಕ ಸಾಧ್ಯತೆ
* ಎಲ್ಲ ರಾಜ್ಯಗಳ ಶಿಫಾರಸು ಪರಿಗಣಿಸಿ ಸ್ಕೀಂಗೆ ಚೌಕಟ್ಟು ನೀಡಲಿರುವ ಕೇಂದ್ರ ಸರ್ಕಾರ

KRS DAM

ಕಾವೇರಿ ನ್ಯಾಯಾಧಿಕರಣ ನೀಡಿದ್ದ ನೀರು ನಿರ್ವಹಣಾ ಮಂಡಳಿ ರಚನೆ ಹೇಗಿರುತ್ತೆ?
* ಕೇಂದ್ರವೇ ನೇಮಕ ಮಾಡುವ ಒಬ್ಬ ಪೂರ್ಣಾವಧಿ ಅಧ್ಯಕ್ಷ, ಇಬ್ಬರು ಪೂರ್ಣಾವಧಿ ಸದಸ್ಯರಿರುತ್ತಾರೆ
* ಅಧ್ಯಕ್ಷರಾಗುವವರಿಗೆ ಜಲಸಂಪನ್ಮೂಲ ನಿರ್ವಹಣೆಯಲ್ಲಿ ಕನಿಷ್ಠ 20 ವರ್ಷ ಅನುಭವ ಹೊಂದಿರಬೇಕು (ಚೀಫ್ ಎಂಜಿನಿಯರ್ ದರ್ಜೆಯ ಅಧಿಕಾರಿಯಾಗಿರಬೇಕು.)
* ಕೇಂದ್ರದ ಇಬ್ಬರು ಪ್ರತಿನಿಧಿಗಳು ಅರೆಕಾಲಿಕ ಸದಸ್ಯರಾಗಿರುತ್ತಾರೆ (ಚೀಫ್ ಎಂಜಿನಿಯರ್ ದರ್ಜೆಯ ಈ ಅರೆಕಾಲಿಕ ಸದಸ್ಯರ ಪೈಕಿ ಒಬ್ಬರು ನೀರಾವರಿ ಮತ್ತೊಬ್ಬರು ಕೃಷಿ ಕ್ಷೇತ್ರದಲ್ಲಿ ಪರಿಣಿತರಾಗಿರುತ್ತಾರೆ.

* ನಾಲ್ಕು ರಾಜ್ಯಗಳ ಪ್ರತಿನಿಧಿಗಳ ಆಯಾ ರಾಜ್ಯಗಲು ನಾಮನಿರ್ದೇಶನ ಮಾಡುತ್ತವೆ.(ಇವರೆಲ್ಲರೂ ಚೀಫ್ ಎಂಜಿನಿಯರ್ ದರ್ಜೆಯವರಾಗಿರಬೇಕು. ಎಲ್ಲರೂ ಮಂಡಳಿಯ ಅರೆಕಾಲಿಕ ಸದಸ್ಯರು)
* ಯಾವುದೇ ರಾಜ್ಯಕ್ಕೆ ಸೇರಿಲ್ಲದ ಒಬ್ಬರನ್ನು ಮಂಡಳಿಯ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗುವುದು (ಮಂಡಳಿಯೇ ಸೂಪರಿಟೆಂಡಿಂಗ್ ಎಂಜಿನಿಯರ್ ದರ್ಜೆಯ ಅಧಿಕಾರಿಯನ್ನ ನೇಮಿಸುತ್ತೆ)
* ಮಂಡಳಿಯ ಸಭೆ ನಿರ್ಧಾರಗಳು ಮತದಾನ ಪ್ರಕ್ರಿಯೆ ಮೂಲಕ ನಡೆಯುತ್ತೆ
* 6 ಮಂದಿ ಸದಸ್ಯರಿದ್ದರೆ ಕೋರಂನ ಎಲ್ಲ ಸದಸ್ಯರು ಮತದಾನದ ಸಮಾನ ಅಧಿಕಾರ ಹೊಂದಿರುತ್ತಾರೆ. ಇದನ್ನೂ ಓದಿ: ಕಾವೇರಿ ನೀರು ಹಂಚಿಕೆ ಸುಪ್ರೀಂ ತೀರ್ಪಿನಲ್ಲಿ ಏನಿದೆ? ಇಲ್ಲಿದೆ 14 ಪ್ರಮುಖ ಅಂಶಗಳು

KRS 5

ಮಂಡಳಿ ಹೇಗೆ.? ಕಾರ್ಯ ವ್ಯಾಪ್ತಿ ಏನು..?
* ಕಾವೇರಿ ಕಣಿವೆಯ ಕೇರಳ, ಕರ್ನಾಟಕ ಹಾಗೂ ತಮಿಳುನಾಡು ತಮ್ಮ ಜಲಾಶಯಗಳನ್ನು ಇದೇ ಮಂಡಳಿಯ ಉಸ್ತುವಾರಿ ಮತ್ತು ಮಾರ್ಗದರ್ಶನದಲ್ಲೇ ನಿರ್ವಹಿಸಬೇಕು.
* ಕಾವೇರಿ ಜಲಾಶಯಗಳನ್ನು ಈ ಮಂಡಳಿ ನೇರ ಸುಪರ್ದಿಗೆ ತೆಗೆದುಕೊಳ್ಳುವ ಪ್ರಸ್ತಾಪ ಇಲ್ಲ. ಆದರೆ ತಮಿಳುನಾಡು, ಕೇರಳ, ಕರ್ನಾಟಕ, ಪುದುಚೆರಿಯ ಪೈಕಿ ಯಾವುದೇ ಸರ್ಕಾರ ನ್ಯಾಯಮಂಡಳಿಯ ಐತೀರ್ಪಿನ ಜಾರಿಗೆ ಸಹಕಾರ ನೀಡದೆ ಹೋದರೆ ಮಂಡಳಿಯು ಕೇಂದ್ರ ಸರ್ಕಾರದ ನೆರವನ್ನು ಕೋರಬಹುದು.

* ಐತೀರ್ಪನ್ನು ಜಾರಿಗೊಳಿಸಲು ಅಗತ್ಯ ಬಿದ್ದರೆ ಮಂಡಳಿ / ಮಂಡಳಿಯ ಪ್ರತಿನಿಧಿ ಕಾವೇರಿ ಕೊಳ್ಳದ ಯಾವುದೇ ಜಲಾಶಯದ ಯಾವುದೇ ಭಾಗವನ್ನು ಪ್ರವೇಶಿಸುವ ಅಧಿಕಾರ ಹೊಂದಿರುತ್ತಾನೆ.
* ನಿರ್ದಿಷ್ಟ ರಾಜ್ಯ ತಾನು ಬಿಡುಗಡೆ ಮಾಡಬೇಕಾದ ಪ್ರಮಾಣದ ನೀರನ್ನು ಬಿಡುಗಡೆ ಮಾಡದೆ ಹೋದರೆ ಮಂಡಳಿಗೆ ಸೂಕ್ತ ಕ್ರಮ ಜರುಗಿಸುವ ಅಧಿಕಾರ ಇದೆ.
* ನಿಗದಿತ ಪ್ರಮಾಣದ ನೀರನ್ನು ಬಿಡುಗಡೆ ಮಾಡದಿದ್ದರೆ, ಬಿಡುಗಡೆ ಮಾಡಿಲ್ಲದ ಪ್ರಮಾಣದ ನೀರನ್ನು ಆಯಾ ರಾಜ್ಯದ ಬೇಡಿಕೆಯಿಂದ ಕಡಿತ ಮಾಡಲಾಗುವುದು.

* ಜಲವರ್ಷದ ಆರಂಭವಾಗುವ ಜೂನ್ 1 ರಂದು ಆ ತಿಂಗಳಿನಲ್ಲಿ ತಮಗೆ ಬೇಕಿರುವ ನೀರಿನ ಪ್ರಮಾಣವನ್ನು ತಮ್ಮ ಪ್ರತಿನಿಧಿಗಳ ಮೂಲಕ ಮಂಡಳಿಯ ಮುಂದೆ ಮಂಡಿಸಬೇಕು.
* ರಾಜ್ಯಗಳ ಬೇಡಿಕೆ ಅನ್ವಯ ನೀರಿನ ಅಗತ್ಯ ನಿಜವಾಗಲೂ ರಾಜ್ಯಗಳಿಗೆ ಇದೆಯೇ ಇಲ್ಲವೇ ಎಂಬುದನ್ನು ಮಂಡಳಿ ಪರಿಶೀಲಿಸುವುದು.
* ಬೆಳೆ ಪದ್ಧತಿ, ನೀರಾವರಿ ಪ್ರದೇಶದ ವಿಸ್ತೀರ್ಣ, ಮಳೆಯ ಪ್ರಮಾಣ, ಜಲಾಶಯಗಳ ಒಳಹರಿವು ಹಾಗೂ ನ್ಯಾಯಮಂಡಳಿ ಮಾಡಿರುವ ಹಂಚಿಕೆಯನ್ನು ಗಮನದಲ್ಲಿ ಇರಿಸಿಕೊಂಡು ರಾಜ್ಯಗಳಿಗೆ ನೀರು ನೀಡಲಾಗುವುದು.

 

Share This Article
Leave a Comment

Leave a Reply

Your email address will not be published. Required fields are marked *