Connect with us

ಸುಪ್ರೀಂನಲ್ಲಿ ಇಂದಿನಿಂದ ಕಾವೇರಿ ಅರ್ಜಿ ವಿಚಾರಣೆ

ಸುಪ್ರೀಂನಲ್ಲಿ ಇಂದಿನಿಂದ ಕಾವೇರಿ ಅರ್ಜಿ ವಿಚಾರಣೆ

– ಎತ್ತಿನಹೊಳೆ ಬಗ್ಗೆ ಟ್ರಿಬ್ಯುನಲ್ ಅಂತಿಮ ತೀರ್ಪು

ನವದೆಹಲಿ: ಇಂದಿನಿಂದ ರಾಜ್ಯಕ್ಕೆ ಅಗ್ನಿ ಪರೀಕ್ಷೆ ಶುರುವಾಗಲಿದೆ. ಕಾವೇರಿ ಮೇಲ್ಮನವಿ ತೀರ್ಪು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೂಲ ಅರ್ಜಿಗಳ ವಿಚಾರಣೆ ಸುಪ್ರೀಂಕೋರ್ಟ್‍ನಲ್ಲಿ ಇಂದಿನಿಂದ ಪ್ರಾರಂಭವಾಗಲಿದೆ.

ಕಾವೇರಿ ನೀರು ಹಂಚಿಕೆ ವಿಚಾರವಾಗಿ ನ್ಯಾಯಾಧೀಕರಣದ ಮೇಲ್ಮನವಿ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್‍ಗೆ ಸಲ್ಲಿಸಲಾಗಿದ್ದ ಮೂಲ ಅರ್ಜಿಗಳನ್ನ ನ್ಯಾ. ದೀಪಕ್ ಮಿಶ್ರಾ ನೇತೃತ್ವದ ಪೀಠ ವಿಚಾರಣೆ ನಡೆಸಲಿದೆ. ಇಂದಿನಿಂದ ಪ್ರತಿನಿತ್ಯ ಮಧ್ಯಾಹ್ನ ಕಾವೇರಿ ವಿಚಾರಣೆ ನಡೆಯಲಿದ್ದು ಕೆಲವೇ ತಿಂಗಳಲ್ಲಿ ವಿವಾದಕ್ಕೆ ತೆರೆಬಿಳುವ ಸಾಧ್ಯತೆ ಇದೆ. ಹೀಗಾಗಿ ರಾಜ್ಯ ಸರ್ಕಾರ ಪರಿಣಾಮಕಾರಿ ವಾದ ಮಂಡಿಸಲು ಸಜ್ಜಾಗಿದೆ. ಈ ಸಂಬಂಧ, ರಾಜ್ಯದ ಕಾನೂನು ತಂಡದ ಹಿರಿಯ ವಕೀಲ ನಾರಿಮನ್ ಜೊತೆ ಕಳೆದ ಹದಿನೈದು ದಿನಗಳ ಹಿಂದೆಯೇ ನೀರಾವರಿ ಸಚಿವ ಎಂಬಿ ಪಾಟೀಲ್ ಹಾಗೂ ಕಾನೂನು ಸಚಿವ ಟಿಬಿ ಜಯಚಂದ್ರ ಚರ್ಚೆ ನಡೆಸಿದ್ದಾರೆ.

ಬೆಂಗಳೂರಿಗೆ ಸಿಗುತ್ತಾ ಕುಡಿಯುವ ನೀರು?: ನ್ಯಾಯಾಧೀಕರಣದ ತೀರ್ಪಿನಲ್ಲಿ ಬೆಂಗಳೂರಿಗೆ ಕುಡಿಯುವ ನೀರಿನ ವಿಚಾರ ಪ್ರಸ್ತಾಪವಾಗಿರಲಿಲ್ಲ. ಹೀಗಾಗಿ ಈ ಅಂಶವನ್ನು ಪರಿಗಣಿಸಿ ಬೆಂಗಳೂರಿಗೆ ಕುಡಿಯುವ ನೀರಿಗಾಗಿಯೂ ಈ ಬಾರಿ ಕಾನೂನು ಹೋರಾಟ ನಡೆಯಲಿದೆ. ಟ್ರಿಬ್ಯುನಲ್‍ನಲ್ಲಾದ ಎಡವಟ್ಟುಗಳು ಮತ್ತೆ ಮರುಕಳಿಸದೆ ಈ ಬಾರಿಯಾದ್ರು ರಾಜ್ಯದ ರೈತರ ಕಣ್ಣೀರು ನಿಲ್ಲಲಿ ಎಂಬುದು ಎಲ್ಲರ ಆಶಯವಾಗಿದೆ.

ಏನಾಗಲಿದೆ ಎತ್ತಿನಹೊಳೆ ಭವಿಷ್ಯ?: ಬಯಲು ಸೀಮೆಗೆ ನೀರುಣಿಸೋ ಸರ್ಕಾರದ ಮಹತ್ವಾಕಾಂಕ್ಷಿ ಎತ್ತಿನಹೊಳೆ ಯೋಜನೆ ವಿಚಾರವಾಗಿ ಇಂದು ಅಂತಿಮ ತೀರ್ಪು ಹೊರ ಬೀಳುವ ಸಾಧ್ಯತೆ ಇದೆ. ಸೋಮವಾರದಂದು ವಿಚಾರಣೆ ನಡೆಸಿದ ದೆಹಲಿಯ ರಾಷ್ಟ್ರೀಯ ಹಸಿರು ನ್ಯಾಯಧಿಕರಣ, ಅರ್ಜಿದಾರರನ್ನ ತರಾಟೆಗೆ ತೆಗೆದುಕೊಂಡಿತ್ತು. ಷರತ್ತಿನೊಂದಿಗೆ ಕಾಮಗಾರಿ ಆರಂಭಿಸಲು ಚೆನ್ನೈ ಹಸಿರು ಪೀಠ ಅವಕಾಶ ನೀಡಿದೆ. ಇದ್ರಲ್ಲಿ ಮೂಗು ತೂರಿಸಲ್ಲ ಅಂತ ಹೇಳಿತ್ತು. ಇದ್ರಿಂದ ರಾಜ್ಯ ಸರ್ಕಾರಕ್ಕೆ ಮತ್ತಷ್ಟು ಬಲ ಬಂದಿದೆ. ಆದ್ರೆ ಇಂದಿನ ತೀರ್ಪು ಏನಿರಲಿದೆ ಅನ್ನೋದು ಕುತೂಹಲ ಕೆರಳಿಸಿದೆ.

ಅತ್ತ ಮಂಗಳೂರಿನಲ್ಲಿ ಎತ್ತಿನಹೊಳೆ ವಿರೋಧಿ ಹೋರಾಟ ಹೆಚ್ಚಾಗ್ತಿದೆ. ಅಧಿವೇಶನದಲ್ಲಿ ಎತ್ತಿನಹೊಳೆ ಯೋಜನೆ ವಿರುದ್ಧ ನಿಲುವಳಿ ಸೂಚನೆ ಮಂಡಿಸುವಂತೆ ಹೋರಾಟಗಾರರು ಆಗ್ರಹಿಸಿದ್ದಾರೆ. ಜೊತೆಗೆ ಫೆಬ್ರವರಿ 10ರಿಂದ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಬಳಿ ಸತ್ಯಾಗ್ರಹ ನಡೆಸಲು ಮುಂದಾಗಿದ್ದಾರೆ. ನಿಲುವಳಿ ಮಂಡನೆಗೆ ಸಚಿವರು, ಶಾಸಕರಿಗೆ ತಿಳಿಸಿದ್ದೇವೆ. ಹೋರಾಟ ಹತ್ತಿಕ್ಕಲು ಮುಂದಾದರೆ ಮಂಗಳೂರಿನಲ್ಲಿ ಅನಿರ್ದಿಷ್ಟಾವಧಿ ಬಂದ್ ಮಾಡೋದಾಗಿ ಹೋರಾಟಗಾರರು ಎಚ್ಚರಿಕೆ ನೀಡಿದ್ದಾರೆ.

ಒಟ್ಟಿನಲ್ಲಿ ಎತ್ತಿನಹೊಳೆ ಹೋರಾಟದ ಭವಿಷ್ಯ ಇಂದು ನ್ಯಾಯಮೂರ್ತಿ ಸ್ವತಂತ್ರಕುಮಾರ್ ಪೀಠದಲ್ಲಿ ನಿರ್ಧಾರವಾಗಲಿದೆ.

Advertisement
Advertisement