– ನಮ್ಮ ಅವಧಿಯಲ್ಲಿಯೇ ಮೆಡಿಕಲ್ ಕಾಲೇಜು ಬರಲಿದೆ: ಡಿಸಿಎಂ
ರಾಮನಗರ: ಬೆಂಗಳೂರು (Bengaluru) ಮಾದರಿಯಲ್ಲಿ ಸಂಗಮದ ಬಳಿ ಕಾವೇರಿ ನೀರನ್ನು (Cauvery Water) ಪಂಪ್ ಮಾಡಿ ಕ್ಷೇತ್ರದ 250ಕ್ಕೂ ಹೆಚ್ಚು ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರನ್ನು ತಲುಪಿಸುವ ಯೋಜನೆ ರೂಪಿಸಲಾಗುತ್ತಿದೆ. ಜೊತೆಗೆ ಕ್ಷೇತ್ರದ ಕೆರೆಗಳಿಗೂ ನೀರನ್ನು ತುಂಬಿಸುವ ಕೆಲಸಕ್ಕೆ ಚಾಲನೆ ನೀಡಲಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ಹೇಳಿದರು.
ಕನಕಪುರದ (Kanakapura) ಕೋಡಿಹಳ್ಳಿ ಹೋಬಳಿಯಲ್ಲಿ ಸೋಮವಾರ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನೀರಾವರಿ ಸಚಿವನಾದ ನಾನು ನನ್ನ ಕ್ಷೇತ್ರದ ಕೆರೆಗಳನ್ನು ತುಂಬಿಸುವ ಕೆಲಸ ಮಾಡುತ್ತಿದ್ದೇನೆ. ಶಿಂಷಾದಿಂದ ಸಾತನೂರು ಹೋಬಳಿಗೆ ನೀರು ತರಲಾಗುತ್ತಿದೆ. ಅರ್ಕಾವತಿಯಿಂದ ಕಸಬಾ ಹೋಬಳಿ ಕೆರೆಗಳನ್ನು ತುಂಬಿಸುವ ಕೆಲಸ ಮಾಡಲಾಗುತ್ತಿದೆ. ಹೊಸದುರ್ಗ ಭಾಗದ ಕೆರೆಗಳನ್ನು ಕಾವೇರಿ ನದಿ ನೀರಿನಿಂದ ತುಂಬಿಸಲಾಗುವುದು. ಈ ಅವಧಿಯಲ್ಲೇ ಮೆಡಿಕಲ್ ಕಾಲೇಜಿಗೆ ಮುಕ್ತಿ ನೀಡಲಾಗುವುದು. ಕ್ಷೇತ್ರದಲ್ಲಿ ಎರಡು ಮೆಡಿಕಲ್ ಕಾಲೇಜು ಇರಲಿದೆ. ಕನಕಪುರದಲ್ಲಿ ಇನ್ಫೋಸಿಸ್ ಸಹಾಯದಲ್ಲಿ ತಾಯಿ ಮಗು ಆಸ್ಪತ್ರೆ ತೆರೆಯಲಾಗಿದೆ. ಇಂತಹ ಸರ್ಕಾರಿ ಆಸ್ಪತ್ರೆ ಬೇರೆ ಎಲ್ಲಾದರೂ ಇದೆಯೇ? ನಾವು ಮಾಡುತ್ತಿರುವ ಕೆಲಸ ದೇಶಕ್ಕೆ ಮಾದರಿ. ನಾವು ಶುದ್ಧ ಕುಡಿಯುವ ನೀರಿನ ಘಟಕ, ಸೋಲಾರ್ ಪಾರ್ಕ್ ಮಾಡಿದೆವು. ನಂತರ ಈ ಯೋಜನೆಗಳು ದೇಶಕ್ಕೆ ಮಾದರಿಯಾಗಿವೆ. ನಮ್ಮ ಮೆಡಿಕಲ್ ಕಾಲೇಜನ್ನು ಯಡಿಯೂರಪ್ಪ ಅವರು ಚಿಕ್ಕಬಳ್ಳಾಪುರಕ್ಕೆ ಹಾಕಿಬಿಟ್ಟರು. ಇಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣವಾದರೆ ನೀವುಗಳು ಯಾರೂ ಬೆಂಗಳೂರಿಗೆ ಹೋಗಬೇಕಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: CBSE ಯಿಂದ ಸೇಫ್ಟಿ ಗೈಡ್‌ಲೈನ್ಸ್ - ಶೌಚಾಲಯ ಹೊರತುಪಡಿಸಿ ಶಾಲೆಯ ಉಳಿದೆಲ್ಲಕಡೆ ಆಡಿಯೋವಿಶುವಲ್ ಸಿಸಿಟಿವಿ ಕಡ್ಡಾಯ
ಆನೆಗಳ ಹಾವಳಿ ತಡೆಯಲು ಸುಮಾರು 50 ಕಿ.ಮೀ ಉದ್ದ ತಡೆಗೋಡೆ ನಿರ್ಮಾಣ ಮಾಡಲಾಗಿದೆ. ಮಿಕ್ಕ 50 ಕಿಮೀ ಅನ್ನು ಶೀಘ್ರವೇ ಪೂರ್ಣಗೊಳಿಸಿ ರೈತರ ಪರವಾಗಿ ಕೆಲಸ ಮಾಡುತ್ತೇವೆ. ನಮ್ಮ ಕ್ಷೇತ್ರದಲ್ಲಿ ಇಬ್ಬರು ರೈತರಂತೆ ಟ್ರಾನ್ಸ್ಫಾರ್ಮರ್ ನೀಡಿ ವಿದ್ಯುತ್ ಕ್ರಾಂತಿ ಮಾಡಿದ್ದೇವೆ. 25 ಸಾವಿರ ರೈತರಿಗೆ ಇದರಿಂದ ಉಪಯೋಗವಾಗಿದೆ. ಪಕ್ಕದ ಯಾವುದೇ ಕ್ಷೇತ್ರದಲ್ಲಿಯೂ ಈ ಸೌಲಭ್ಯವಿಲ್ಲ. ಹುಣಸನಹಳ್ಳಿ ಸೇರಿದಂತೆ ದೊಡ್ಡಾಲಹಳ್ಳಿಯಲ್ಲಿ ಸೋಲರ್ ವಿದ್ಯುತ್ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ. ಹಗಲು ಹೊತ್ತಿನಲ್ಲಿಯೇ ರೈತರಿಗೆ ವಿದ್ಯುತ್ ನೀಡಲಾಗುವುದು. ಕ್ಷೇತ್ರದ 60-70 ಸಾವಿರ ಜನ ವಿದ್ಯಾಭ್ಯಾಸ, ಕೆಲಸದ ನಿಮಿತ್ತ ನಗರ ಪ್ರದೇಶ ಸೇರಿದ್ದಾರೆ. ನನ್ನನ್ನು ನಮ್ಮ ತಂದೆ ಬೆಂಗಳೂರು ಸೇರಿಸಿದ್ದರು. ಆದರೆ ನಮ್ಮ ಜನರು ಪಾನಿಪುರಿ, ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಊರಿಗೆ ಒಂದೆರಡು ಜನ ಉದ್ಧಾರವಾಗಿದ್ದಾರೆ. ಆದರೆ ಹೆಚ್ಚಿನ ಜನರಿಗೆ ಉತ್ತಮ ಜೀವನ ನೀಡಬೇಕು ಎಂದು ನಾನು ಪಣತೊಟ್ಟಿದ್ದೇನೆ. ಅದಕ್ಕೆ ಕೆಪಿಎಸ್ ಶಾಲೆಗಳನ್ನು ಪ್ರಾರಂಭ ಮಾಡಲಾಗುತ್ತಿದೆ. ಕೋಡಿಹಳ್ಳಿಯಲ್ಲಿ 10 ಎಕರೆ, ದೊಡ್ಡ ಆಲಹಳ್ಳಿಯಲ್ಲಿ ಶಾಲೆಗಾಗಿ ನಮ್ಮ ಸ್ವಂತ ಭೂಮಿಯನ್ನು ನೀಡಿದ್ದೇನೆ ಎಂದರು. ಇದನ್ನೂ ಓದಿ: ಸೋಪ್ ಬಾಕ್ಸ್‌ಲ್ಲಿ 14.69 ಕೋಟಿ ಮೌಲ್ಯದ ಕೊಕೇನ್ ಸ್ಮಗ್ಲಿಂಗ್ – ಇಬ್ಬರು ಮಹಿಳೆಯರು ಅರೆಸ್ಟ್
ಸುರೇಶ್ ವಿರುದ್ಧ ದೇವೇಗೌಡರು ಅವರ ಅಳಿಯನನ್ನು ಬಿಜೆಪಿಯಿಂದ ನಿಲ್ಲಿಸಿದರು. ಅನಂತರ ಕುಮಾರಸ್ವಾಮಿ ಮಗನ ವಿರುದ್ಧ ಸುರೇಶ್ ಅವರನ್ನು ನಿಲ್ಲಿಸಬೇಕು ಎಂದು ಒತ್ತಡ ತರಲಾಯಿತು. ಅನಂತರ ಬೆಳವಣಿಗೆಯಲ್ಲಿ ಯೋಗೇಶ್ವರ್ ಅವರು ಕಾಂಗ್ರೆಸ್ ಸೇರಿದರು. ಅವರು ಜನರ ಆಶೀರ್ವಾದಿಂದ 22 ಸಾವಿರ ಮತಗಳ ಅಂತರದಿಂದ ಗೆದ್ದರು. ಬೆಂಗಳೂರು ದಕ್ಷಿಣ ಜಿಲ್ಲೆಯಿಂದ 4 ಜನ ಶಾಸಕರು ವಿಧಾನಸಭೆಯಲ್ಲಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ನಮ್ಮ ಜನ ಮೋಸ ಮಾಡಿಲ್ಲ. ನಮಗೆ ಬೆಂಗಳೂರಿನಲ್ಲಿ ಮೋಸ ಆಗಿದೆ. ನಮ್ಮ ಗ್ರಾಮೀಣ ಭಾಗದಲ್ಲಿ ನಮಗೆ ಮೋಸ ಆಗಿಲ್ಲ. ಬೇರೆ ಕಡೆ ವಾಲಿರುವವರಿಗೆ ಬುದ್ಧಿ ಹೇಳಿ. ಚುನಾವಣೆ ಸಮಯದಲ್ಲಿ ಅನೇಕರು ಬಂದು ತಲೆ ಕೆಡಿಸುವ ಪ್ರಯತ್ನ ಮಾಡುತ್ತಾರೆ. ನೀವು ಯಾವುದಕ್ಕೂ ಮಣಿಯಬಾರದು. ನಿಮ್ಮ ಹೆಣ ಹಾಗೂ ಪಲ್ಲಕ್ಕಿ ಹೊರುವವನು ನಾನು. ನನ್ನ ಹೆಣ, ಪಲ್ಲಕ್ಕಿ ಹೊರುವವರು ನೀವು. ನಿಮ್ಮ ಹಾಗೂ ನಮ್ಮ ಸಂಬಂಧ ಭಕ್ತ ಹಾಗೂ ಭಗವಂತನ ನಡುವಿನ ಸಂಬಂಧ. ಚನ್ನಪಟ್ಟಣದಲ್ಲಿ ಒಂಬತ್ತು ಜಿಲ್ಲಾ ಪಂಚಾಯತಿಗಳಿಗೆ ತೆರಳಿ ಜನಸಂಪರ್ಕ ಸಭೆ ಮೂಲಕ ಜನರ ಬಳಿಗೆ ಹೋಗಿ ನೂತನ ಪ್ರಯೋಗ ಮಾಡಲಾಯಿತು. ಸುರೇಶ್ ಅವರನ್ನು ಸೋಲಿಸಲು ಅವರು ಹೇಗೆ ತಂತ್ರ ಮಾಡಿದರೋ ಅದೇ ರೀತಿ ನಾವು ಸಹ ತಂತ್ರ ನಡೆಸಲಾಯಿತು. ಅಲ್ಲಿನ ಜನರಿಂದ 22 ಸಾವಿರ ಅರ್ಜಿಗಳನ್ನು ಸ್ವೀಕಾರ ಮಾಡಲಾಯಿತು. ಸುಮಾರು 500 ಕೋಟಿಗೂ ಹೆಚ್ಚು ಅನುದಾನ ನೀಡಲಾಯಿತು. 5 ಸಾವಿರಕ್ಕೂ ಹೆಚ್ಚು ಮನೆಗಳನ್ನು ಮಂಜೂರು ಮಾಡಲಾಯಿತು. ನೂರಾರು ಎಕರೆ ಜಮೀನು ಗುರುತಿಸಿ ಬಡವರಿಗೆ ನಿವೇಶನ ಹಂಚಲಾಯಿತು ಎಂದು ಹೇಳಿದರು. ಇದನ್ನೂ ಓದಿ: ಆಪರೇಷನ್ ಸಿಂಧೂರ ವೇಳೆ ಭಾರತದ ಸೇನಾ ಶಕ್ತಿಯನ್ನ ಇಡೀ ವಿಶ್ವವೇ ನೋಡಿದೆ; ಸಂಸತ್ ಅಧಿವೇಶನಕ್ಕೂ ಮುನ್ನ ಮೋದಿ ಮಾತು