ಬೆಂಗಳೂರು: ಮನೆ ಮುಂದೆ ನಿಲ್ಲಿಸಿದ್ದ ಕಾರು ಹಾಗೂ ಬೈಕ್ ಗಳಿಂದ ಕಳ್ಳರು ಪೆಟ್ರೋಲ್ ಕದಿಯುತ್ತಿದ್ದ ಘಟನೆ ನಗರದ ವಿಜಯನಗರದ ಕ್ಲಬ್ ರಸ್ತೆಯಲ್ಲಿ ನಡೆದಿದೆ.
ಮನೆ ಮುಂದೆ ನಿಲ್ಲಿಸಿರುವ ಬೈಕ್, ಕಾರುಗಳನ್ನು ಟಾರ್ಗೆಟ್ ಮಾಡುತ್ತಿದ್ದ ಕಳ್ಳರು, ರಾತ್ರಿಯಾಗುತ್ತಿದಂತೆಯೇ ಬೈಕ್ ನಲ್ಲಿ ಬಂದು ತಮ್ಮ ಕರಾಮತ್ತು ತೋರಿಸಲು ಮುಂದಾಗಿದ್ದಾರೆ. ಕ್ಯಾನ್ ಹಿಡಿದು ಎಂಟ್ರಿ ಕೊಡುವ ಕಳ್ಳರು ಕಾರಿನ ಬಳಿ ತೆರಳಿ ಪೆಟ್ರೋಲ್ ಕದಿಯಲು ಮುಂದಾಗಿದ್ದಾರೆ. ಸದ್ಯ ಕಾರಿನಲ್ಲಿ ಪೆಟ್ರೋಲ್ ಕದಿಯುವ ಕಳ್ಳರ ಈ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಆಗಸ್ಟ್ 9 ರ ರಾತ್ರಿಯೂ ವಿಜಯನಗರದ ಕ್ಲಬ್ ರಸ್ತೆಯಲ್ಲಿ ಬೈಕ್ ನಲ್ಲಿ ಎಂಟ್ರಿ ಕೊಟ್ಟಿದ್ದ ಕಳ್ಳರು, ಕಾರ್ ನಿಂದ ಪೆಟ್ರೋಲ್ ಕದಿಯಲು ಯತ್ನಿಸುತ್ತಿದ್ದ ವೇಳೆ ಸ್ಥಳೀಯರು ಎಚ್ಚರಗೊಂಡಿದ್ದಾರೆ. ಪರಿಣಾಮ ಕಳ್ಳರು ತಾವು ಬಂದ ಬೈಕನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.
ಕಳ್ಳತನ ಮಾಡುವ ಮೊದಲು ಪ್ರತಿ ರಸ್ತೆಯನ್ನು ಸುತ್ತಾಡುವ ಕಳ್ಳರು, ಪ್ರತಿ ಮನೆಯ ಮುಂದೆ ನಿಲ್ಲಿಸಿರುವ ವಾಹನಗಳನ್ನು ಪರಿಶೀಲಿಸುತ್ತಾರೆ. ಬಳಿಕ ಬಂದು ಕೃತ್ಯ ಎಸಗುತ್ತಾರೆ ಎಂಬ ಮಾಹಿತಿ ಲಭಿಸಿದೆ. ಸದ್ಯ ಈ ಕುರಿತು ವಿಜಯನಗರ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಕಳ್ಳರು ಬಿಟ್ಟು ಹೋದ ಬೈಕ್‍ನ ಮಾಹಿತಿ ಹಾಗೂ ಸಿಸಿಟಿವಿಯಲ್ಲಿ ದೃಶ್ಯವಾಳಿಗಳನ್ನು ಆಧರಿಸಿ ಪೊಲೀಸರು ಕ್ರಮಕೈಗೊಳ್ಳಲಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews