ಬೆಂಗಳೂರು: ರಾಜ್ಯದ ವಿವಿಧೆಡೆ ವರುಣನ ಆರ್ಭಟ ಮುಂದುವರಿದಿದ್ದು, ಬುಧವಾರ ಸುರಿದ ಗುಡುಗು ಮಿಂಚು ಸಹಿತ ಮಳೆಗೆ ಸಾವು-ನೋವು ಸಂಭವಿಸಿವೆ.
ಬೆಂಗಳೂರಿನಲ್ಲಿ ಕಳೆದ ಒಂದು ವಾರದಿಂದ ಬಿಟ್ಟು ಬಿಡದೆ ಮಳೆ ಸುರಿಯುತ್ತಿದೆ. ಬುಧವಾರವು ಕೂಡ ವರುಣನ ಅಬ್ಬರಿಸಿದ್ದಾನೆ. ಯಶವಂತಪುರ, ಮೆಜೆಸ್ಟಿಕ್, ಮಲ್ಲೇಶ್ವರಂ, ರಾಜಾಜಿನಗರ, ಗೊರಗುಂಟೆ ಪಾಳ್ಯ, ಯಶವಂತಪುರ ಸೇರಿದಂತೆ ನಗರದ ಹಲವೆಡೆ ಭಾರೀ ಮಳೆಯಾಗಿದೆ. ವರುಣನ ಆರ್ಭಟ ಹಿನ್ನೆಲೆ ಹವಾಮಾನ ಇಲಾಖೆ ಹಳದಿ ಅಲರ್ಟ್ ಘೋಷಣೆ ಮಾಡಿದೆ.
Advertisement
ಸಿಡಿಲಿಗೆ ಮಹಿಳೆ ಬಲಿ:
ಮನೆಯ ಕಟ್ಟೆಯ ಮೇಲೆ ಕುಳಿತ್ತಿದ್ದಾಗ ಸಿಡಿಲು ಬಡಿದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಹಿರೇಬೇವನೂರ ಗ್ರಾಮದಲ್ಲಿ ನಡೆದಿದೆ. ಶಾಂತಾಬಾಯಿ ಶಿವಪಾದಯ್ಯ ಆಹೇರಿಮಠ (36) ಸಿಡಿಲಿಗೆ ಬಲಿಯಾದ ಮಹಿಳೆ. ಈ ಸಂಬಂಧ ಇಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement
Advertisement
ಹಾವೇರಿಯಲ್ಲಿ ಧಾರಾಕಾರ ಮಳೆಯಿಂದಾಗಿ ಐದು ಕುರಿಗಳು ಸಾವನ್ನಪ್ಪಿವೆ. ನಗರದ ಜಾನುವಾರು ಮಾರುಕಟ್ಟೆಯಲ್ಲಿ ಪ್ರತಿ ಗುರುವಾರ ಕುರಿ ಸಂತೆ ನಡೆಯುತ್ತದೆ. ಹೀಗಾಗಿ ಕುರಿಗಾಯಿಗಳು ಕುರಿಗಳನ್ನು ಮಾರಾಟ ಮಾಡಲು ತಂದಿದ್ದರು. ಆದರೆ ಮಳೆರಾಯನ ಅಬ್ಬರಕ್ಕೆ ಕುರಿಗಳು ಬಲಿಯಾಗಿವೆ.
Advertisement
ಹಾವೇರಿಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ಮಳೆರಾಯ ಅಬ್ಬರಿಸುತ್ತಿದ್ದಾನೆ. ಸಂಜೆ ಆಗುತ್ತಿದ್ದಂತೆ ಎಂಟ್ರಿ ಕೊಡುವ ವರುಣ ಗುಡುಗು, ಸಿಡಿಲಿನೊಂದಿಗೆ ಆರ್ಭಟಿಸುತ್ತಿದ್ದಾನೆ. ಮಳೆ ಆರ್ಭಟಕ್ಕೆ ಜಿಲ್ಲೆಯ ಹಾನಗಲ್, ಸವಣೂರು ಸೇರಿದಂತೆ ಹಲವೆಡೆ ಮನೆಗಳಿಗೆ ನೀರು ನುಗ್ಗಿದೆ. ಮನೆಗೆ ನುಗ್ಗಿದ ನೀರು ಹೊರಹಾಕಲು ಜನರ ಹರಸಾಹಸ ಮಾಡಿದ್ದಾರೆ. ಮತ್ತೊಂದೆಡೆ ಧಾರಾಕಾರ ಮಳೆಯಿಂದ ರಸ್ತೆಗಳ ತುಂಬ ಭರಪೂರ ನೀರು ತುಂಬಿ ಹರಿದು ಹರಿಯುತ್ತಿದೆ. ಧಾರಾಕಾರ ಮಳೆಗೆ ಜಿಲ್ಲೆಯ ಅನ್ನದಾತರು ಆತಂಕಕ್ಕೆ ಸಿಲುಕಿದ್ದಾರೆ. ಶೇಂಗಾ ಮತ್ತು ಮೆಕ್ಕೆಜೋಳ ನಿರಂತರ ಮಳೆಯಿಂದ ಸಂಪೂರ್ಣ ನಾಶವಾಗುವ ಹಂತಕ್ಕೆ ಬಂದಿದೆ.
ಕುರಿಗಳ ಮಾರಣ ಹೋಮ:
ಬಳ್ಳಾರಿ ಜಿಲ್ಲೆಯ ಸೊಂಡೂರು ತಾಲೂಕಿನ ಭುಜಂಗ ನಗರದ ಬಳಿ ಭಾರೀ ಮಳೆಯಾಗುತ್ತಿತ್ತು. ಹೀಗಾಗಿ 43 ಕುರಿಗಳು ಲಾರಿ ಕೆಳಗೆ ಆಶ್ರಯ ಪಡೆದಿದ್ದವು. ಈ ವೇಳೆ ಲಾರಿಗೆ ಸಿಡಿಲು ಪಡಿದು ಕುರಿಗಳು ಮೃತಪಟ್ಟಿವೆ. ಅದೃಷ್ಟವಶಾತ್ ಲಾರಿ ಚಾಲಕ, ಕ್ಲೀನರ್ ಮತ್ತು ಇಬ್ಬರು ಕುರಿಗಾಯಿಗಳು ಪ್ರಣಾಪಾಯದಿಂದ ಪಾರಾಗಿದ್ದಾರೆ.
ಕೋಲಾರ ಜಿಲ್ಲೆಯ ಹಲವೆಡೆ ಮಳೆರಾಯನ ಆರ್ಭಟ ಮುಂದುವರಿದಿದೆ. ಕಳೆದ ಒಂದು ವಾರದಿಂದ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿದ್ದು, ಸಣ್ಣ ಸಣ್ಣ ಕೆರೆ ಕುಂಟೆಗಳು ತುಂಬಿ ಹರಿಯುತ್ತಿವೆ. ನಗರದ ಚರಂಡಿಗಳು ತುಂಬಿ ರಸ್ತೆಯ ಮೇಲೆ ನೀರು ಹರಿದ ಪರಿಣಾಮ ವಾಹನ ಸವಾರರ ಪರದಾಡುವಂತಾಯಿತು.
ಚಿಕ್ಕಮಗಳೂರು ಜಿಲ್ಲೆಯಲ್ಲಿ ವರುಣ ಅಬ್ಬರವನ್ನು ಮುಂದುವರಿಸಿದ್ದಾನೆ. ತರೀಕೆರೆ ತಾಲೂಕಿನ ಸುತ್ತಮುತ್ತ ಭಾರೀ ಮಳೆಯಾಗಿದ್ದು, ರಸ್ತೆ ಮೇಲೆ ಅಡಿಯಷ್ಟು ನೀರು ನಿಂತಿದ್ದರಿಂದ ಸವಾರರು ಪರದಾಡುವಂತಾಗಿದೆ. ಅಷ್ಟೇ ಅಲ್ಲ ಅಂಗಡಿ-ಮಳಿಗೆಗಳಿಗೆ ಮಳೆ ನೀರು ನುಗ್ಗಿದೆ.
ಧಾರವಾಡದಲ್ಲಿ ಧಾರಾಕಾರ ಮಳೆಯಾಗಿದ್ದು, ನಗರದ ಹಲವೆಡೆ ಜನಜೀವನ ಅಸ್ತವ್ಯಸ್ತವಾಗಿದೆ. ಬಾಗಲಕೋಟೆ ಜಿಲ್ಲಾದ್ಯಂತ ಧಾರಾಕಾರ ಮಳೆಯಾಗಿದೆ. ನಿರಂತರ ಮಳೆಯಿಂದಾಗಿ ಜಮಖಂಡಿ ಬಸ್ ನಿಲ್ದಾಣ ಜಲಾವೃತವಾಗಿದ್ದು, ಪ್ರಯಾಣಿಕರು, ಚಾಲಕರು ಪರದಾಡುವಂತಾಗಿದೆ.