ಚಂಡೀಗಢ: 12ನೇ ತರಗತಿ ವಿದ್ಯಾರ್ಥಿಯೊಬ್ಬ ಗಣಿತ ಶಿಕ್ಷಕರ ಮೇಲೆಯೇ ಹಲ್ಲೆ ಮಾಡಿರುವ ಘಟನೆ ಹರಿಯಾಣ ರಾಜ್ಯದ ಝಜ್ಜರ್ ಜಿಲ್ಲೆಯ ಬಹದ್ದೂರ್‍ಗಢ ಪಟ್ಟಣದ ಖಾಸಗಿ ಶಾಲೆಯಲ್ಲಿ ನಡೆದಿದೆ.
ಹಿಮಾಂಶು ಗಾರ್ಗ್ ಎಂಬಾತನೇ ಶಿಕ್ಷಕ ರವೀಂದ್ರ ಅವರ ಮೇಲೆ ಹಲ್ಲೆಗೈದ ವಿದ್ಯಾರ್ಥಿ. ಬಹದ್ದೂರ್‍ಗಢ ಪಟ್ಟಣದ ಹರ್‍ದಯಾಳ್ ಪಬ್ಲಿಕ್ ಸ್ಕೂಲ್ ನಲ್ಲಿ ಈ ಘಟನೆ ನಡೆದಿದೆ. ಹಿಮಾಂಶು ಗಣಿತದಲ್ಲಿ ಕಡಿಮೆ ಅಂಕ ಪಡೆದಿದ್ದನು. ಇದನ್ನು ಶಿಕ್ಷಕ ರವೀಂದ್ರ ಪ್ರಶ್ನಿಸಿದ್ದಾರೆ. ಈ ವೇಳೆ ಸಿಟ್ಟುಗೊಂಡ ವಿದ್ಯಾರ್ಥಿ ಹಿಮಾಂಶು, ರವೀಂದ್ರ ಅವರ ಮೇಲೆ ಹರಿತವಾದ ವಸ್ತುವಿನಿಂದ 10ಕ್ಕೂ ಹೆಚ್ಚು ಬಾರಿ ಕುತ್ತಿಗೆ, ತಲೆ ಮತ್ತು ಮುಖದ ಮೇಲೆಲ್ಲಾ ಹಲ್ಲೆ ಮಾಡಿದ್ದಾನೆ. ಹಿಮಾಂಶು ಶಾಲಾ ಕೊಠಡಿಯಲ್ಲಿಯೇ ಶಿಕ್ಷಕರ ಮೇಲೆ ಹಲ್ಲೆ ನಡೆಸಿದ್ದು, ಈ ಎಲ್ಲ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.
Advertisement
ವಿಡಿಯೋದಲ್ಲಿ ಏನಿದೆ?
ಕ್ಲಾಸ್ ರೂಮ್‍ನಲ್ಲಿ ಮುಂದಿನ ಬೆಂಚ್ ನಲ್ಲಿ ಗಣಿತ ಶಿಕ್ಷಕ ರವೀಂದ್ರ ಪೇಪರ್ ಗಳನ್ನು ಚೆಕ್ ಮಾಡುತ್ತಿರುತ್ತಾರೆ. ಹಿಂದುಗಡೆ ಕುಳಿತಿರುವ ಹಿಮಾಂಶು ತನ್ನ ಬ್ಯಾಗ್ ನಿಂದ ಹರಿತವಾದ ವಸ್ತುವಿನಿಂದ ಶಿಕ್ಷಕರ ಮೇಲೆ ಹಲ್ಲೆ ನಡೆಸುತ್ತಾನೆ. ವಿದ್ಯಾರ್ಥಿ ಹಲ್ಲೆ ಮಾಡುತ್ತಾ ಶಾಲೆಯ ಕಾರಿಡರ್ ವರೆಗೂ ಬಂದಿದ್ದಾನೆ. ಕೂಡಲೇ ಇನ್ನೊಬ್ಬ ಶಿಕ್ಷಕರು ಹಿಮಾಂಶುನನ್ನು ತಡೆದಿದ್ದಾರೆ.
Advertisement
ಕ್ಲಾಸ್ ರೂಮ್‍ನಲ್ಲಿ ಗಣಿತ ವಿಷಯದಲ್ಲಿ ಕಡಿಮೆ ಅಂಕಗಳನ್ನು ಪಡೆದಿದ್ದಕ್ಕೆ, ಶಿಕ್ಷಕ ರವೀಂದ್ರ ಎಲ್ಲರ ಮುಂದೆಯೇ ನನ್ನನ್ನು ಅವಮಾನಿಸಿದ್ದರು. ಈ ವೇಳೆ ಶಿಕ್ಷಕರು ನನ್ನ ಪೋಷಕರಿಗೆ ಈ ವಿಷಯವನ್ನು ತಿಳಿಸುವುದಾಗಿ ಅಂತಾ ಹೇಳಿದ್ದರು. ಹೀಗಾಗಿ ಅವರಿಗೆ ಬುದ್ದಿ ಕಲಿಸಲು ಅವರ ಮೇಲೆ ಹಲ್ಲೆ ಮಾಡಿದೆ ಎಂದು ಹಿಮಾಂಶು ಹೇಳಿದ್ದಾನೆ.
Advertisement
ಈ ಕುರಿತು ಪ್ರತಿಕ್ರಿಯಿಸಿರುವ ಪಾಂಶುಪಾಲರು, ಈ ಬಗ್ಗೆ ಪೇರೆಂಟ್ಸ್ ಮೀಟಿಂಗ್ ಕರೆಯಲಾಗಿದ್ದು, ವಿದ್ಯಾರ್ಥಿಗಳ ಈ ತರಹದ ಭಯಕ್ಕೆ ಕಾರಣವೇನು ಎಂಬುದನ್ನು ತಿಳಿದುಕೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.
Advertisement
ಹಲ್ಲೆಗೈದ ಹಿಮಾಂಶುನನ್ನು ಮತ್ತು ಆತನಿಗೆ ಹರಿತವಾದ ವಸ್ತುವನ್ನು ನೀಡಿದ್ದ ಆತನ ಗೆಳಯನನ್ನು ಬಂಧಿಸಲಾಗಿದೆ. ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಶಿಕ್ಷಕ ರವೀಂದ್ರರನ್ನು ಶಾಲಾ ಸಿಬ್ಬಂದಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆಯಿಂದ ರವೀಂದ್ರರ ತಲೆಯ ಭಾಗಕ್ಕೆ ತೀವ್ರಪೆಟ್ಟು ಬಿದ್ದಿದ್ದು, ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.