ಬೆಂಗಳೂರು: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂದೇ ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಜಯ ಸಿಕ್ಕಿದ್ದು ಸಿದ್ದರಾಮಯ್ಯ ಸರ್ಕಾರಕ್ಕೆ ಮತ್ತೊಮ್ಮೆ ಮುಖಭಂಗವಾಗಿದೆ. ರೋಹಿಣಿ ಸಿಂಧೂರಿ ಅವರ ವರ್ಗಾವಣೆ ಆದೇಶಕ್ಕೆ ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿ(ಸಿಎಟಿ) ತಾತ್ಕಾಲಿಕವಾಗಿ ತಡೆ ನೀಡಿದೆ.
ನಿಯಮಗಳ ವಿರುದ್ಧವಾಗಿ ಅವಧಿಗೂ ಮುನ್ನ ವರ್ಗಾವಣೆ ಮಾಡಿದ್ದನ್ನು ಪ್ರಶ್ನಿಸಿ ರೋಹಿಣಿ ಸಿಂಧೂರಿ ಅವರು ಸಿಎಟಿ ಮೊರೆ ಹೋಗಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಸಿಎಟಿ ಮಾರ್ಚ್ 13ರವರೆಗೆ ವರ್ಗಾವಣೆಗೆ ತಡೆ ನೀಡಿದೆ. ಈ ಆದೇಶದಿಂದಾಗಿ ಸಿಂಧೂರಿ ಅವರು ಹಾಸನ ಡಿಸಿ ಆಗಿ ಮುಂದುವರಿಯಲಿದ್ದಾರೆ.
Advertisement
ರೋಹಿಣಿ ಸಿಂಧೂರಿ ವರ್ಗಾವಣೆ ಆದೇಶವನ್ನು ಮಂಗಳವಾರ ಹಿಂದಕ್ಕೆ ಪಡೆದಿದ್ದ ರಾಜ್ಯ ಸರ್ಕಾರ ಬುಧವಾರ ವರ್ಗಾವಣೆ ಮಾಡಿತ್ತು. ಒಟ್ಟು 12 ಐಎಎಸ್ ಅಧಿಕಾರಿಗಳನ್ನು ಸರ್ಕಾರ ವರ್ಗಾವಣೆ ಮಾಡಿದ್ದು ರೋಹಿಣಿ ಅವರನ್ನು ಉದ್ಯೋಗ ಮತ್ತು ತರಬೇತಿ ಇಲಾಖೆ ಆಯುಕ್ತರನ್ನಾಗಿ ನೇಮಿಸಿ ವರ್ಗಾವಣೆ ಆದೇಶ ಹೊರಡಿಸಿತ್ತು.
Advertisement
ಮತದಾರರ ಪಟ್ಟಿ ಪರಿಷ್ಕರಣೆ ಸಂದರ್ಭದಲ್ಲಿ ಜ.22 ರಂದು ರೋಹಿಣಿ ಅವರನ್ನು ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ(ಕೆಎಸ್‍ಐಐಡಿಸಿ) ಆಡಳಿತ ನಿರ್ದೇಶಕಿಯನ್ನಾಗಿ ನೇಮಿಸಿ ಹಠಾತ್ ವರ್ಗಾವಣೆ ಮಾಡಿದ್ದ ಸರ್ಕಾರದ ಆದೇಶಕ್ಕೆ ಕೇಂದ್ರ ಚುನಾವಣಾ ಆಯೋಗ ತಡೆ ನೀಡಿತ್ತು. ಸರ್ಕಾರದ ಕ್ರಮಕ್ಕೆ ಸಾರ್ವಜನಿಕ ವಲಯದಿಂದಲೂ ಟೀಕೆ ಕೇಳಿ ಬಂದಿತ್ತು. ಈಗ ಮತ್ತೊಮ್ಮೆ ವರ್ಗಾವಣೆ ಆದೇಶ ಹೊರಡಿಸಿ ಎರಡನೇ ಬಾರಿ ಮುಖಭಂಗವಾಗಿದೆ.
Advertisement
ಫೆಬ್ರವರಿ 28ಕ್ಕೆ ಮತದಾರರ ಪಟ್ಟಿ ಪರಿಷ್ಕರಣೆ ನಡೆಯಲಿದ್ದು, ಮತದಾರ ಪಟ್ಟಿ ಪರಿಷ್ಕರಣೆ ಮುಗಿಯುವವರೆಗೆ ವರ್ಗಾವಣೆ ಬೇಡ. ವರ್ಗಾವಣೆ ಆದೇಶ ಜಾರಿಯನ್ನು ಕೂಡಲೇ ನಿಲ್ಲಿಸಬೇಕು. ಚುನಾವಣಾ ಪ್ರಕ್ರಿಯೆಯಲ್ಲಿ ತೊಡಗಿರುವವರನ್ನ ಅದೇ ಸ್ಥಾನದಲ್ಲಿ ಮುಂದುವರಿಸಬೇಕು. ವರ್ಗಾವಣೆ ಬಗ್ಗೆ ಕೇಂದ್ರ ಚುನಾವಣಾ ಆಯೋಗದ ಗಮನಕ್ಕೆ ತರಬೇಕು. ವರ್ಗಾಯಿತ ಜಿಲ್ಲೆಗಳಿಗೆ ತೆರಳದಂತೆ 7 ಜಿಲ್ಲಾಧಿಕಾರಿಗಳಿಗೂ ಚುನಾವಣಾ ಆಯೋಗ ಈ ಹಿಂದೆ ಸೂಚನೆ ನೀಡಿತ್ತು. ಇದನ್ನೂ ಓದಿ: ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಕಾರ್ಯಕ್ಕೆ ಸಿಎಂ ಅಭಿನಂದನೆ
Advertisement
ಯಾರು ರೋಹಿಣಿ ಸಿಂಧೂರಿ?:
ಈ ಹಿಂದೆ ಮಂಡ್ಯ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಹಲವಾರು ಜನೋಪಯೋಗಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದ್ದರು. ರಾಜ್ಯದಲ್ಲಿ ಮೊದಲ ಬಾರಿಗೆ ಭೂ ದಾಖಲೆಗಳ ಕುರಿತಂತೆ ವಿನ್ಯಾಸಗೊಂಡಿರುವ ಎಂ-ಆಸ್ತಿ ಅಪ್ಲಿಕೇಷನ್ ತಂದಿದ್ದರು. ಬಯಲು ಶೌಚಾಲಯ ಮುಕ್ತ ಜಿಲ್ಲೆಯನ್ನಾಗಿ ರೂಪಿಸಲು ಪಣ ತೊಟ್ಟಿದ್ದ ರೋಹಿಣಿ ಸಿಂಧೂರಿ ಅವರು ಹಳ್ಳಿ ಹಳ್ಳಿಗೆ ಹೋಗಿ, ಬಯಲು ಶೌಚಕ್ಕೆ ಹೋಗುವವರಿಗೆ ಶೌಚಾಲಯ ಬಳಸುವಂತೆ ತಿಳುವಳಿಕೆ ಹೇಳುವ ಮೂಲಕ ವಿಶೇಷ ಅಭಿಯಾನ ಮಾಡುತ್ತಿದ್ದರು.
ನಿರ್ಮಲ್ ಭಾರತ್ ಯೋಜನೆಯಡಿ ಸುಮಾರು ಒಂದು ಲಕ್ಷಕ್ಕೂ ಅಧಿಕ ಶೌಚಾಲಯ ನಿರ್ಮಾಣ ಗುರಿ ಸಾಧಿಸಿದ್ದ ಇವರ ಅಧಿಕಾರ ಅವಧಿಯಲ್ಲಿ ಶೌಚಾಲಯ ನಿರ್ಮಾಣದಲ್ಲಿ ಮಂಡ್ಯ ಜಿಲ್ಲೆ ಭಾರತದಲ್ಲಿ ಎರಡನೇ ಸ್ಥಾನದಲ್ಲಿದ್ದರೆ, ಕರ್ನಾಟಕದಲ್ಲಿ ಪ್ರಥಮ ಸ್ಥಾನ ಪಡೆದಿತ್ತು. ಸಿಇಓ ಅವರ ಕಾರ್ಯ ವೈಖರಿಯನ್ನು ನೋಡಿ ಮಂಡ್ಯದ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದರು.
2015ರ ಸೆಪ್ಟೆಂಬರ್ ನಲ್ಲಿ ರೋಹಿಣಿ ಸಿಂಧೂರಿ ಅವರನ್ನು ಸರ್ಕಾರ ಆಹಾರ ನಿಗಮದ ವ್ಯವಸ್ಥಾಪಕ ನಿರ್ದೇಶಕಿಯಾಗಿ ನೇಮಿಸಿ ವರ್ಗಮಾಡಿತ್ತು. ಈಗ ಅಲ್ಲಿಂದ ಮೊದಲ ಬಾರಿಗೆ ಜಿಲ್ಲಾಧಿಕಾರಿಯಾಗಿ ಹಾಸನಕ್ಕೆ ಬಂದಿದ್ದರು. ಕಳೆದ 2017ರ ಜುಲೈ 14ರಿಂದ ಹಾಸನದ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದ ಇವರು ಅಲ್ಪಾವಧಿಯಲ್ಲಿ ದಕ್ಷ ಆಡಳಿತಾಧಿಕಾರಿ ಎಂದು ಹೆಸರು ಪಡೆದುಕೊಂಡಿದ್ದರು. ತಮ್ಮ ಕೆಲಸದಿಂದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ಪ್ರಶಸ್ತಿಯನ್ನು ಪಡೆದಿದ್ದರು. ಶ್ರವಣಬೆಳಗೋಳ ಮಹಾಮಸ್ತಕಾಭಿಷೇಕ ಸೇರಿದಂತೆ ಹಾಸನದ ಹಲವು ಯೋಜನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು ಕ್ರಿಯಾಶೀಲರಾಗಿದ್ದರು. ಇದನ್ನೂ ಓದಿ: ರೋಹಿಣಿ ಸಿಂಧೂರಿ ಎತ್ತಂಗಡಿ ಕೇಸ್‍ನಲ್ಲಿ ಟ್ವಿಸ್ಟ್- ಡಿಸಿ ವರ್ಗಾವಣೆಗೆ ನಾನೇ ಕಾರಣ ಎಂದ `ಕೈ’ ನಾಯಕ!
https://www.youtube.com/watch?v=RIlr3y8t7ow
https://www.youtube.com/watch?v=c6PoH0rh1XE
https://www.youtube.com/watch?v=I0pUTEiRfSo