ನ್ಯೂಯಾರ್ಕ್: ಮನೆಯಲ್ಲಿ ಅಗ್ನಿ ಅವಘಡ ಸಂಭವಿಸಿದ ಸಂದರ್ಭದಲ್ಲಿ ಎಚ್ಚೆತ್ತ ಬೆಕ್ಕೊಂದು ತನ್ನ ಮಾಲೀಕರನ್ನು ಪಾರು ಮಾಡಿದ ಅಚ್ಚರಿಯ ಘಟನೆಯೊಂದು ಅಮೆರಿಕದಲ್ಲಿ ನಡೆದಿದೆ.
ದಕ್ಷಿಣ ಪಿಟ್ಸ್ ಬರ್ಗ್ ನಿಂದ ಸುಮಾರು 12 ಮೈಲು ದೂರದಲ್ಲಿರೋ ಮ್ಯಾಕ್ಕೀಸ್ಪೋರ್ಟ್ ನಲ್ಲಿರುವ ಮನೆಯಲ್ಲಿ ಎಲ್ಲರೂ ಗಾಢ ನಿದ್ರೆಯಲ್ಲಿದ್ದ ಸಂದರ್ಭದಲ್ಲಿ ಅಂದ್ರೆ ಶುಕ್ರವಾರ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಈ ವೇಳೆ ಎಚ್ಚೆತ್ತ ಬೆಕ್ಕು ತನ್ನ ಮಾಲೀಕರನ್ನು ಎಬ್ಬಿಸಿ ಅಪಾಯದಿಂದ ಪಾರು ಮಾಡಿದೆ.
ಈ ಕುರಿತು ಅಗ್ನಿಶಾಮಕ ದಳದ ಮುಖ್ಯಸ್ಥ ಪ್ರತಿಕ್ರಿಯಿಸಿದ್ದು, ಬೆಂಕಿ ಕಾಣಿಸಿಕೊಳ್ಳುವ ಮೊದಲು ಹೊಗೆ ಕಾಣಿಸಿಕೊಂಡಿಲ್ಲ. ಆದ್ರೂ ಅವಘಡವನ್ನರಿತ ಬೆಕ್ಕು ತನ್ನ ಮಾಲೀಕರನ್ನು ಎಚ್ಚರಿಸುವ ಮೂಲಕ ಭಾರೀ ಅನಾಹುತದಿಂದ ಪಾರು ಮಾಡಿದೆ ಅಂತ ತಿಳಿಸಿದ್ದಾರೆ.
ಅಗ್ನಿ ಅವಘಡದಿಂದ ಸದ್ಯ ಮನೆಯಲ್ಲಿದ್ದ ಪೀಠೋಪಕರಣಗಳು ಸುಟ್ಟು ಭಸ್ಮವಾಗಿದೆ. ಇನ್ನು ಮನೆಯಲ್ಲಿ ಬೆಂಕಿ ಕಾಣಿಸಿಕೊಳ್ಳಲು ಕಾರಣವೇನು ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ.