ಚಿತ್ರದುರ್ಗ: ನಾನು ಪಿಹೆಚ್‍ಡಿ ಮಾಡಿದ್ದರೂ, ಡಿಸಿಎಂ ಆಗಿದ್ದರೂ ಕೂಡ ದಲಿತ ಅಂತಲೇ ನನ್ನನ್ನು ಕರೆಯುತ್ತಾರೆ. ಯಾವ ದೇಶದಲ್ಲೂ ಸಹ ಭಾರತದಲ್ಲಿರುವಂತೆ ಜಾತಿ ವರ್ಗೀಕರಣ ಇಲ್ಲ. ನನ್ನ ದೃಷ್ಟಿಯಲ್ಲಿ ಜಾತಿ ವರ್ಗೀಕರಣ ನಿರ್ನಾಮ ಆಗಬೇಕು ಎಂದು ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಹೇಳಿದ್ದಾರೆ.
ಚಳ್ಳಕೆರೆ ತಾಲೂಕಿನ ಬೆಳಗೆರೆ ಕಟ್ಟೆಮನೆ ಏಕಾದಶಿ ಹಬ್ಬದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಡಾ. ಬಿ ಆರ್ ಅಂಬೇಡ್ಕರ್ ಅವರ ದಾರಿಯಲ್ಲಿ ಬಂದು ನಾವು ವಿದ್ಯಾವಂತರಾಗಿದ್ದೇವೆ. ಅದರಲ್ಲೂ ನಾನು ಪಿಎಚ್‍ಡಿ ಮಾಡಿದ್ದರೂ ಸಹ ದಲಿತ ಎಂಬ ಹಣೆಪಟ್ಟಿ ಮಾತ್ರ ಸಡಿಲವಾಗಿಲ್ಲ. ಅಲ್ದೇ ಛಲವಾದಿ ಸಮಾಜದ ಕೋಟ್ಯಂತರ ಜನ ವಿದ್ಯಾವಂತರಾಗಿದ್ದರೂ ಸಹ ಛಲವಾದಿ ಸಮುದಾಯದವರು ಕೀಳೆಂಬ ಭಾವನೆ ಮಾತ್ರ ಹಾಗೇ ಉಳಿದಿದೆ ಎಂದು ಜಾತಿ ವರ್ಗೀಕರಣ ವಿರುದ್ಧ ಪ್ರತಿಕ್ರಿಯಿಸಿದರು.
Advertisement
ಜಾತಿ ವರ್ಗೀಕರಣ ವ್ಯವಸ್ಥೆ ಮಾಡಿದ್ದೇ ಬೇರೆ ಕಾರಣಕ್ಕಾಗಿ, ಅವರ ವೃತ್ತಿಯ ಆಧಾರದ ಮೇರೆಗೆ ಅವರನ್ನು ವರ್ಗೀಕರಣ ಮಾಡಿದ್ದಾರೆ ವಿನಾಃ ಮೇಲೂ ಕೀಳು ಎಂಬ ಭಾವನೆಯಿಂದ ಮಾಡಲಿಲ್ಲ. ಆದ್ರೆ ದುರ್ದೈವ ವರ್ಷ ವರ್ಷ ಕಳೆದ ಹಾಗೇ ಜಾತಿ ಪದ್ಧತಿ ಮೇಲೂ ಕೀಳು, ಅತಿ ಕೀಳು ಎಂಬ ಮಟ್ಟಕ್ಕೆ ಬಂದು ನಿಂತಿದೆ ಎಂದು ಬೇಸರ ವ್ಯಕ್ತಪಡಿಸಿದರು.
Advertisement
Advertisement
ನಾವೆಷ್ಟೇ ಬುದ್ದಿವಂತರಾದರೂ ಸಹ ನಮ್ಮ ಮುಂದೆ ಜಾತಿ ಎಂಬ ಹೆಸರು ತೆಗೆದುಬಿಡುತ್ತಾರೆ. ಅಂಬೇಡ್ಕರ್, ಒನಕೆ ಓಬವ್ವ, ಮತ್ತು ಸಾಲು ಮರದ ತಿಮ್ಮಕ್ಕ ಅವರು ಛಲವಾದಿ ಸಮುದಾಯದಿಂದ ಬಂದವರು ಅಂತಾರೆ. ಜೊತೆಗೆ ನಾನು ಅನೇಕ ದೇಶಗಳಿಗೆ ಹೋಗಿ ಬಂದಿದ್ದೇನೆ. ಯಾವ ದೇಶದಲ್ಲೂ ಸಹ ಈ ರೀತಿ ಜಾತಿ ವರ್ಗೀಕರಣ ಇಲ್ಲ, ನನ್ನ ದೃಷ್ಟಿಯಲ್ಲಿ ಜಾತಿ ವರ್ಗೀಕರಣ ನಿರ್ನಾಮ ಆಗಬೇಕು ಎಂದು ಹೇಳಿದರು.
Advertisement
ದಲಿತ ಮಹಿಳೆಯರ ಬಗ್ಗೆ ಮನನೊಂದು ಮಾತನಾಡಿದ ಅವರು ದಲಿತ ಮಹಿಳೆಯರನ್ನು ನಗ್ನಗೊಳಿಸಿ, ಬೆಂಕಿಯಿಟ್ಟ ದೃಶ್ಯ ನೆನೆದಾಗ ಜಾತಿ ವ್ಯವಸ್ಥೆ ಬೇಕಾ ಎಂದು ಪ್ರಶ್ನಿಸಬೇಕು ಎನಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಪ್ರಸ್ತುತ ರಾಜಕಾರಣ ದೇಶದಲ್ಲೇ ವಿಭಿನ್ನವಾಗಿದೆ. ನಾವು ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ ಎಂದು ಹೇಳಿದರು.
ಚುನಾವಣೆ ಬಳಿಕ ಕಾಂಗ್ರೆಸ್ ನಲ್ಲಿ ಕೆಲವರು ಎಡಗೈ, ಬಲಗೈ ಜನಾಂಗದವರ ವೋಟ್ ಹಾಕಿದ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಎರಡೂ ಕೈಗಳೂ ಕಾಂಗ್ರೆಸ್ ಜೊತೆಗಿವೆ. ಈ ಕಾಂಗ್ರೆಸ್ ಪಕ್ಷ ದಲಿತರು, ಶೋಷಿತರ ರಕ್ಷಣೆ ಮಾಡುತ್ತದೆ ಎಂಬ ನಂಬಿಕೆ ಎಲ್ಲರಲ್ಲಿದ್ದೂ ನನ್ನನ್ನು ಎಲ್ಲರೂ ಅಭಿಮಾನದಿಂದ ಭವಿಷ್ಯದ ಸಿಎಂ ಅಂದಿದ್ದೀರಿ. ಆದರೆ ಇಲ್ಲಿ ಬೇರೆ ಮಟ್ಟದಲ್ಲೇ ರಾಜಕಾರಣ ಆಗುತ್ತದೆ. ನಾನು ಹೋರಾಟ ಮಾಡುವವನು ಹೊರತು, ಅಧಿಕಾರಕ್ಕಾಗಿ ಕತ್ತಿ ಗುರಾಣಿ ಹಿಡಿಯೋದಿಲ್ಲ. ಅಂಬೇಡ್ಕರ್ ನನಗೆ ಪೆನ್ನು ಕೊಟ್ಟು ಹೋಗಿದ್ದಾರೆ, ಪೆನ್ನು ಕತ್ತಿಗಿಂತ ಹರಿತ ಎಂದು ಹೇಳಲಾಗುತ್ತದೆ. ಹೀಗಾಗಿ ನೀವೆಲ್ಲ ಪೆನ್ ಹಿಡಿಯಬೇಕು ಎಂದರು.
ಸರ್ಕಾರಿ ಶಾಲೆ ಮಕ್ಕಳಿಗೆ ಬಸ್ ಪಾಸ್ ವಿಚಾರ ಕುರಿತು ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಖಾಸಗಿ ಶಾಲಾ ವಿದ್ಯಾರ್ಥಿಗಳಿಗೂ ಪಾಸ್ ಕೊಡುವ ಚಿಂತನೆ ಮಾಡುತ್ತೇವೆ. ಇದೀಗ ಮೊದಲ ಹಂತದಲ್ಲಿ ಸರ್ಕಾರಿ ಶಾಲೆ ಮಕ್ಕಳಿಗೆ ಪಾಸ್ ವಿತರಿಸುವುದಾಗಿ ತಿಳಿಸಿದರು.
ಮಾಜಿ ಶಾಸಕ ಕೆ.ಎನ್ ರಾಜಣ್ಣನವರ ಸಮ್ಮಿಶ್ರ ಸರ್ಕಾರದ ಭವಿಷ್ಯ ಕುರಿತ ಹೇಳಿಕೆಗೆ ಪ್ರತಿಕ್ರಿಯಿಸಿ, ಅದು ಅವರ ವೈಯಕ್ತಿಕ ಹೇಳಿಕೆ. ಸಮ್ಮಿಶ್ರ ಸರ್ಕಾರ, ಐದು ವರ್ಷ ಪೂರೈಸುತ್ತದೆ ಸಚಿವ ಸ್ಥಾನಕ್ಕಾಗಿ ನಾಯಕ ಸಮಾಜದ ಪ್ರತಿಭಟನೆಗೆ ಪ್ರತಿಕ್ರಿಯೆ ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಪರಿಶೀಲನೆ ನಡೆಸುತ್ತೇವೆ ಎಂದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಆಗಿರುವ ಹಿನ್ನಡೆಯ ಬಗ್ಗೆ ರಾಜಕೀಯ ವಿಶ್ಲೇಷಣೆ ಮಾಡಿಲ್ಲ. ಅದನ್ನು ಆಗಸ್ಟ್ ಮೊದಲ ವಾರದಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಜ್ಯಕ್ಕೆ ಭೇಟಿ ನೀಡಿದ್ದು, ಆ ವೇಳೆ ಸಂಪೂರ್ಣ ವಿಶ್ಲೇಷಣೆ ಮಾಡುತ್ತೇವೆ ಎಂದರು.